ದರ್ಶನ್, ಸೂಪರ್ ಸ್ಟಾರ್ ನಟ. ದಿನಕರ್ ಅವರ ತಮ್ಮ. ಅಣ್ಣನಿಗೆ ಕೋಟಿ ಕೋಟಿ ಆಸ್ತಿ ಇದೆ. ತಮ್ಮನಿಗೆ ಸ್ವಂತಕ್ಕೊಂದು ಮನೆಯೂ ಇಲ್ಲ. ಯಾರ್ ಯಾರಿಗೋ ಹೆಲ್ಪ್ ಮಾಡ್ತಾನಂತೆ.. ತಮ್ಮನಿಗೆ ಮಾಡೋಕೆ ಆಗಿಲ್ವಾ.. ಇಂತಹ ಪ್ರಶ್ನೆಗಳಿಗೆ ಸ್ವತಃ ದಿನಕರ್ ತೂಗುದೀಪ ಉತ್ತರ ಕೊಟ್ಟಿದ್ದಾರೆ.
ಸುಖಾಸುಮ್ಮನೇ ಓಡಾಡುವ ಸುದ್ದಿಗಳಿಗೆ, ವದಂತಿಗಳಿಗೆ ಉತ್ತರ ಕೊಟ್ಟುಕೊಂಡು ಕೂರಕ್ಕೆ ಆಗಲ್ಲ. ಇದೂವರೆಗೆ ಆಗಿರೋ ಸುದ್ದಿಗಳಲ್ಲಿ ಸತ್ಯಕ್ಕಿಂತ ಕಲ್ಪಿತ ಸುದ್ದಿಗಳೇ ಇವೆ. ಮಾತಾಡೋರು ಮಾತನಾಡಲಿ. ಸಮಯ ಬಂದಾಗ ಸತ್ಯ ಗೊತ್ತಾಗುತ್ತದೆ. ಎನ್ನುವ ದಿನಕರ್ ʻʻಇಷ್ಟಕ್ಕೂ ನಾನ್ಯಾಕ್ ಅಣ್ಣನ ಹತ್ತಿರ ದುಡ್ಡು, ಆಸ್ತಿ ಕೇಳಲಿ. ಹೇಳಿ.. ನಾನು ಸ್ವಾಭಿಮಾನಿ. ಯಾರ ಮುಂದೆಯೂ ಕೈ ಒಡ್ಡೋನಲ್ಲ. ಇನ್ನೂ ದರ್ಶನ್ ಸೆಲ್ಪ್ ಮೇಡ್ ವ್ಯಕ್ತಿ. ನನ್ನದು ಅದೇ ರಕ್ತ ತಾನೇ. ನನ್ನ ದುಡಿಮೆಯಲ್ಲಿ ನಾನು ಬದುಕಬೇಕು, ನನ್ನ ದುಡಿಮೆ, ನನ್ನ ಕುಟುಂಬ, ನನ್ನ ಮಕ್ಕಳು ಅಂತ ಯೋಚನೆ ಮಾಡುತ್ತೇನೆ. ದರ್ಶನ್‌ಗೆ ನಾನೇ ಸಂಭಾವನೆ ಕೊಟ್ಟು ಸಿನಿಮಾ ಮಾಡುವಷ್ಟು ಶಕ್ತಿ ಇದೆ. ಹೀಗಿರೋವಾಗ ದರ್ಶನ್ ನನಗೆ ಯಾಕೆ ಆಸ್ತಿ ಮಾಡಿ ಕೊಡಬೇಕು ಅಥವಾ ಕೊಡಿಸಬೇಕು?ʼʼ ಎಂದು ಮರುಪ್ರಶ್ನೆ ಹಾಕಿದ್ದಾರೆ.
ಅಷ್ಟೇ ಅಲ್ಲ, ನನ್ನ ಅಣ್ಣ ದರ್ಶನ್ ಹತ್ತಿರ ʻʻಅಣ್ಣಾ ನಂಗೆ ಈ ಪ್ರಾಪರ್ಟಿ ಇಷ್ಟ ಆಗಿದೆ. ನಂಗಿದು ಬೇಕು ಅಂದ್ರೆ 5 ನಿಮಿಷ ಕೂಡಾ ಯೋಚನೆ ಮಾಡಲ್ಲ. ಆಸ್ತಿ ನನ್ನ ಹೆಸರಿಗೆ ಬರುತ್ತೆ. ಆದರೆ ನಾನು ಕೇಳಲ್ಲ. ಯಾಕೆ ಅಂದ್ರೆ ನಾನು ದರ್ಶನ್ ತಮ್ಮʼʼ ಎಂದಿದ್ದಾರೆ ದಿನಕರ್.
ಜೊತೆ ಜೊತೆಯಲಿ ಸಿನಿಮಾ ನಿರ್ಮಿಸಿದ್ದು ನಾನೇ. ಆಗ ನಮ್ಮ ತಾಯಿ ಒಂದು ಮಾತು ಹೇಳಿದರು, ‘ನಿಮ್ಮ ತಂದೆ ಜೀವಪೂರ್ತಿ ದುಡಿದ ದುಡ್ಡನ್ನು ನೀನು ಒಂದೇ ಚಿತ್ರದಲ್ಲಿ ದುಡಿದೆ’ ಅಂತ. ‘ಬುಲ್ ಬುಲ್’, ‘ನವಗ್ರಹ’ ಸೇರಿ ಇಲ್ಲಿವರೆಗೂ ನಾನು 3 ಸಿನಿಮಾ ನಿರ್ಮಿಸಿದ್ದೇನೆ. ಮುೂರು ಚಿತ್ರಗಳು ಬ್ಲಾಕ್ ಬಾಸ್ಟರ್ ಹಿಟ್. ಹತ್ತು ವರ್ಷಗಳ ಹಿಂದೆಯೇ ಫಾರ್ಚುನರ್ ಕಾರು ತೆಗೆದುಕೊಂಡವನು. ನಾಳೆಯೇ ನಾನು ಸಿನಿಮಾ ಮಾಡಲ್ಲ ಅಂತ ಮನೆಯಲ್ಲಿ ಕೂತರೂ ರಾಯಲ್ ಆಗಿಯೇ ಬದುಕುತ್ತೇನೆ ಎನ್ನುವ ದಿನಕರ್ ಎಲ್ಲ ವದಂತಿಗಳಿಗೂ ಬ್ರೇಕ್ ಹಾಕಿದ್ದಾರೆ.
ಇದಾದ ಮೇಲೆ ದರ್ಶನ್ ಅವರಿಗಾಗಿ ಮಾಡಿಕೊಂಡಿರುವ ಕಥೆ ಮತ್ತು ದೃಶ್ಯಗಳನ್ನು ಬೇರೆ ಬೇರೆ ಕಡೆ ಬಳಸಿಕೊಂಡಿದ್ದು, ಅದನ್ನು ದೂರ ಇಟ್ಟು, ದರ್ಶನ್ ಅವರಿಗೆ ಬೇರೆಯದ್ದೇ ಕತೆ ಮಾಡಿದ್ದೇನೆ. ದರ್ಶನ್ ಅವರದ್ದು ಒಂದಿಷ್ಟು ಚಿತ್ರಗಳಿವೆ. ನಾನು ಒಂದಿಷ್ಟು ಪ್ರಾಜೆಕ್ಟ್‌ಗಳನ್ನು ಮಾಡಬೇಕಿದೆ. ಜತೆಗೆ ನಮ್ಮ ಅಕ್ಕನ ಮಗ ಚಂದುನನ್ನು ನಾನೇ ಲಾಂಚ್ ಮಾಡಬೇಕು. ನಮ್ಮ ಬ್ಯಾನರ್‌ನಲ್ಲೇ ಚಿತ್ರ ಮಾಡಬೇಕಿದೆ. ಚಂದುನನ್ನು ಲಾಂಚ್ ಮಾಡಿದ ನಂತರ ದರ್ಶನ್ ಅವರ ಜತೆಗಿನ ಸಿನಿಮಾ ಬಗ್ಗೆ ತಯಾರಿ ಮಾಡಿಕೊಳ್ಳಬೇಕಿದೆ. ಅದಕ್ಕೆ ಸಮಯ ಬೇಕು ಎಂದಿದ್ದಾರೆ.



