ಲಿಂಗಾಯತ ಮಠಕ್ಕೆ ಯಾರು ಸ್ವಾಮೀಜಿಗಳಾಗಬೇಕು..? ಸಹಜವಾಗಿಯೇ ಅವರು ಲಿಂಗಾಯತರೇ ಆಗಿರಬೇಕು ಎನ್ನುವುದು ಅಲಿಖಿತ ನಿಯಮ. ಆದರೆ.. ಲಿಂಗಾಯತ ಮಠಕ್ಕೆ ಮುಸ್ಲಿಮರೊಬ್ಬರು ಸ್ವಾಮೀಜಿಯಾದರೆ.. ಚಾಮರಾಜನಗರ ಜಿಲ್ಲೆಯ ಚೌಡಹಳ್ಳಿಯ ಗುರುಮಲ್ಲೇಶ್ವರ ಮಠದಲ್ಲಿ ಅಂಥಾದ್ದೊಂದು ಘಟನೆ ಬೆಳಕಿಗೆ ಬಂದಿದೆ.
ಕಳೆದ ಒಂದುವರೆ ತಿಂಗಳಿಂದ ಚೌಡಹಳ್ಳಿಯ ಗುರುಮಲ್ಲೇಶ್ವರ ಮಠದಲ್ಲಿ ಪ್ರವಚನ ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದರು. ನಿಜಲಿಂಗ ಸ್ವಾಮೀಜಿ ಎಂದು ಗುರುತಿಸಿಕೊಂಡಿದ್ದವರು, ಮೂಲತಃ ಸ್ವಾಮೀಜಿ ಆಗಿರಲಿಲ್ಲ. ಅಸಲು ಲಿಂಗಾಯತರೇ ಆಗಿರಲಿಲ್ಲ. ಅವರ ಹೆಸರು ಮಹಮದ್ ನಿಸಾರ್.
ಲಿಂಗದೀಕ್ಷೆ ಪಡೆದಿದ್ದರು.. ಆದರೆ ಧರ್ಮ ಬಿಟ್ಟಿರಲಿಲ್ಲ..!
ಮಹಮದ್ ನಿಸಾರ್, ಬಸವಣ್ಣನವರ ಅನುಯಾಯಿ. ಯಾದಗಿರಿಯ ಶಹಾಪುರ ತಾಲೂಕಿನ ಮಹಮ್ಮದ್ ನಿಸಾರ್, ಬಸವಣ್ಣನವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿ ಅವರ ಬಳಿ ಕಳೆದ ವರ್ಷ ಲಿಂಗದೀಕ್ಷೆಯನ್ನೂ ಪಡೆದಿದ್ದರು. ಮುಸ್ಲಿಂ ಸ್ವಾಮೀಜಿ ಪ್ರಕಾರ 2021ರಲ್ಲಿ ಲಿಂಗದೀಕ್ಷೆ ಆಗಿತ್ತಂತೆ. ಲಿಂಗದೀಕ್ಷೆ ಪಡೆದ ಬಳಿಕ ಮಹಮದ್ ನಿಸಾರ್ ಅವರಿಗೆ ನಿಜಲಿಂಗ ಸ್ವಾಮೀಜಿ ಅಂತ ಮರುನಾಮಕರಣ ಮಾಡಲಾಗಿತ್ತು. ಅಷ್ಟೇ ಅಲ್ಲ.. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಚೌಡಹಳ್ಳಿ ಗ್ರಾಮದಲ್ಲಿನ ಗುರುಮಲ್ಲೇಶ್ವರ ಶಾಖಾಮಠಕ್ಕೆ ಪೀಠಾಧಿಪತಿ ಮಾಡಲಾಗಿತ್ತು. ಶಾಖಾಮಠ ಮಠದ ನೂತನ ಕಟ್ಟಡ ಕಟ್ಟಿಸಿದ್ದ ಮಹದೇವ ಪ್ರಸಾದ್ ಎಂಬುವರು ಒಂದುವರೆ ತಿಂಗಳ ಹಿಂದೆ ಸ್ವಾಮೀಜಿಯೊಬ್ಬರ ಶಿಫಾರಿಸ್ಸಿನ ಮೇರೆಗೆ ನಿಜಲಿಂಗ ಸ್ವಾಮೀಜಿ ಅವರನ್ನು ಕರೆತಂದು ಮಠಾಧೀಶರನ್ನಾಗಿ ಮಾಡಿದ್ದರು. ಆದರೆ.. ಮಹಮ್ಮದ್ ನಿಸಾರ್, ಧರ್ಮ ಬಿಟ್ಟಿರಲಿಲ್ಲ.
ದಾಖಲೆ ಬದಲಾವಣೆ ಮಾಡಲಿಲ್ಲ..!
ಮಹಮ್ಮದ್ ನಿಸಾರ್, ಲಿಂಗದೀಕ್ಷೆ ಪಡೆದ ನಂತರ ದಾಖಲೆಗಳಲ್ಲಿ ಹೆಸರು ಬದಲಿಸಿಕೊಂಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲವೇನೋ.. ಅದರೆ, ನಿಸಾರ್ ಅವರಿಗೆ ಹಳೆಯ ಧರ್ಮದ ಮೋಹವೂ ಹೋಗಿರಲಿಲ್ಲ. ಗ್ರಾಮಸ್ಥರೊಬ್ಬರಿಗೆ ಮೊಬೈಲ್ ಕೊಟ್ಟಿದ್ಧಾಗ ಅವರ ಮೊಬೈಲಿನಲ್ಲಿದ್ದ ದಾಖಲೆ, ಆಧಾರ್ ಕಾರ್ಡಿನಲ್ಲಿ ಇವರು ನಿಜಲಿಂಗ ಸ್ವಾಮೀಜಿ ಅಲ್ಲ, ಮಹಮ್ಮದ್ ನಿಸಾರ್ ಎಂದು ಗೊತ್ತಾಗಿದೆ. ಇದನ್ನು ಪ್ರಶ್ನೆ ಮಾಡಿದಾಗ.. ನಾನು ಲಿಂಗದೀಕ್ಷೆ ಪಡೆದಿದ್ದೇನೆ ಎಂದು ಹೇಳಿದ್ದಾರಂತೆ. ಆದರೆ, ಅದನ್ನು ಮಚ್ಚಿಟ್ಟಿದ್ದು ಏಕೆ.. ಎಂಬ ಗ್ರಾಮಸ್ಥರ ಪ್ರಶ್ನೆಗೆ ಉತ್ತರ ನೀಡದೆ, ಗ್ರಾಮಸ್ಥರಿಗೆ ಇಷ್ಟ ಇಲ್ಲ ಎಂದರೆ ಪೀಠತ್ಯಾಗ ಮಾಡುತ್ತೇನೆ ಎಂದು ಹೊರನಡೆದಿದ್ದಾರೆ.
ಯಾವುದು ಈ ಮಠ..?
ಆಸ್ಟೇಲಿಯಾದಲಿ ನೆಲೆಸಿರುವ ಮಹದೇವ ಪ್ರಸಾದ್ ಎಂಬುವವರ ಜಾಗದಲ್ಲಿ ಕಟ್ಟಿರುವ ಮಠ ಇದು. ಮಠಕ್ಕೆ ಜಾಗ ನೀಡಿದವರು ಅವರೇ. ಕಟ್ಟಿಸಿದವರೂ ಅವರೇ. ವರ್ಷದ ಹಿಂದೆ ಲೋಕಾರ್ಪಣೆಗೊಂಡಿದ್ದ ಮಠಕ್ಕೆ ಅಕ್ಕಮಹಾದೇವಿ ಮಾತಾಜಿ ಎಂಬುವವರು ಪೀಠಾಧಿಪತಿಯಾಗಿದ್ದರು. ಅವರು ಪೀಠತ್ಯಾಗ ಮಾಡಿದ ಬಳಿಕ, ಆ ಜಾಗಕ್ಕೆ ಈ ಮುಸ್ಲಿಂ ಪೀಠಾಧಿಪತಿಯಾಗಿದ್ದರು.



