ನಟ ದರ್ಶನ್ ಮತ್ತೊಮ್ಮೆ ಅರೆಸ್ಟ್ ಆಗಿದ್ದಾರೆ. ಈ ಬಾರಿ ದರ್ಶನ್ ಅವರನ್ನು ಮರ್ಡರ್ ಕೇಸಿನಲ್ಲಿ ಅರೆಸ್ಟ್ ಮಾಡಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಕೊಲೆ ಕೇಸಿನಲ್ಲಿ ದರ್ಶನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದರ್ಶನ್ ಅವರ ಇಬ್ಬರು ಬಾಡಿ ಗಾರ್ಡ್ಸ್ ಹಾಗೂ ಅಭಿಮಾನಿ ಸಂಘಕ್ಕೆ ಸೇರಿದ ಆಪ್ತ ವಿನಯ್ ಎಂಬುವವರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜೂನ್ 9ರಂದು ಸುಮನಹಳ್ಳಿ ಬ್ರಿಡ್ಜ್ ಬಳಿ ಇರುವ ಸಮೀಪ ಅಪರಿಚಿತ ಶವ ಪತ್ತೆಯಾಗಿತ್ತು. ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸೆಕ್ಯುರಿಟಿ ಗಾರ್ಡ್ ದೂರು ಕೊಟ್ಟಿದ್ದರು. ಶವದ ಮೇಲೆ ರಕ್ತದ ಗುರುತುಗಳು ಪತ್ತೆಯಾದ ಹಿನ್ನೆಲೆ ಕೊಲೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು.
ನಟಿ ಪವಿತ್ರಾ ಗೌಡರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎನ್ನಲಾದ ರೇಣುಕಾಸ್ವಾಮಿ ಅವರನ್ನು ದರ್ಶನ್ ಅವರ ಆಪ್ತರು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ ಎನ್ನುವುದು ಆರೋಪ.
ಮೃತ ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯವರು. ಚಿತ್ರದುರ್ಗದ ಅಪೊಲೊ ಫಾರ್ಮಸಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕೊಲೆಯಾಗಿರುವ ರೇಣುಕಾಸ್ವಾಮಿ ನಟಿ ಪವಿತ್ರಾ ಗೌಡ ಅವರ ಖಾಸಗಿ ಸ್ಥಳದ ಫೋಟೋ ಕಳುಹಿಸಿದ್ದ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ದರ್ಶನ್ ಅವರ ಆಪ್ತರು, ರೇಣುಕಾಸ್ವಾಮಿಯ ಅಡ್ರೆಸ್ ಟ್ರೇಸ್ ಮಾಡಿದ್ದರು. ಚಿತ್ರದುರ್ಗದವನು ಎನ್ನುವುದು ಗೊತ್ತಾಗಿತ್ತು. ಅದಾದ ನಂತರ ಚಿತ್ರದುರ್ಗದ ದರ್ಶನ್ ಫ್ಯಾನ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದರು. ರಾಘವೇಂದ್ರ ಅವರ ಮೂಲಕ ಶನಿವಾರ ಅಂದರೆ ಜೂನ್ 8ರಂದು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದು ತಂದಿದ್ದರು. ಬೆಂಗಳೂರಿಗೆ ಕರೆತಂದು ರೇಣುಕಾಸ್ವಾಮಿಯನ್ನು ರಾಡ್ ನಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಬರಿಗೊಂಡ ದರ್ಶನ್ ಆಪ್ತರು ಶವವನ್ನು ಅಪಾರ್ಟ್ಮೆಂಟ್ ಬಳಿ ಎಸೆದು ಹೋಗಿದ್ದರು. ಕೊಲೆ ನಡೆಯುವ ವೇಳೆ ದರ್ಶನ್ ಕೂಡಾ ಸ್ಥಳದಲ್ಲಿಯೇ ಇದ್ದರು ಎಂದು ಪ್ರಾಥಮಿಕ ಮಾಹಿತಿಗಳ ಮೂಲಕ ತಿಳಿದು ಬಂದಿದೆ. ನಟಿ ಪವಿತ್ರಾ ಗೌಡ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಹನಾ ಮತ್ತು ರೇಣುಕಾಸ್ವಾಮಿ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಇದೇ ಜೂನ್ 28ಕ್ಕೆ ರೇಣುಕಾಸ್ವಾಮಿ ಮದುವೆಯ ವಿವಾಹ ವಾರ್ಷಿಕೋತ್ಸವವಿತ್ತು. ರೇಣುಕಾಸ್ವಾಮಿ ಅವರ ಪತ್ನಿ ಸಹನಾ 3 ತಿಂಗಳು ಗರ್ಭಿಣಿ. ರೇಣುಕಾಸ್ವಾಮಿ ಈಗ ಕೊಲೆಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ರೇಣುಕಾಸ್ವಾಮಿ ಸೋಮವಾರ ಮಧ್ಯಾಹ್ನವೇ ರೇಣುಕಾಸ್ವಾಮಿ ಕೊಲೆ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು.



