ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅಷ್ಟು ದೊಡ್ಡ ಪ್ರತಿರೋಧ ಎದುರಾಗಲಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದರು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್. ಆದರೆ.. ಲೋಕಸಭೆ ಚುನಾವಣೆ ಹೊತ್ತಿಗೆ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ಸಿಗೆ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಕೋಲಾರದ ಕೆ.ಹೆಚ್.ಮುನಿಯಪ್ಪ. ಹಾಗೂ ಬಾಗಲಕೋಟೆಯ ವೀಣಾ ಕಾಶಪ್ಪನವರ್.
30 ವರ್ಷ ಪಕ್ಷ ಕಟ್ಟಿರುವ ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ ಅನ್ನೋದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಮಾತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಗೆಲ್ಲಿಸಲು ಶ್ರಮಿಸಿದವರ ಜತೆ ಸೇರಿಕೊಂಡು ಕಾಂಗ್ರೆಸ್ ಗೆಲ್ಲಿಸಲು ಹೊರಟಿದ್ದಾರೆ. ಕೋಲಾರದ ಚುನಾವಣಾ ಪ್ರಚಾರಕ್ಕೆ ನನ್ನನ್ನು ಯಾರೂ ಕರೆದಿಲ್ಲ ಎಂದಿರುವ ಮುನಿಯಪ್ಪ, ಕುರುಡುಮಲೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಿಂದ ದೂರವೇ ಇದ್ದರು.
ರಾಜ್ಯಭಾರ ಮಾಡುತ್ತಿರುವವರು ಏನು ಬೇಕಾದರೂ ಮಾಡಬಹುದು. ಕೋಲಾರದಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮಿಸಿದವರ ಜೊತೆ ಸೇರಿ ಇವರು ಕಾಂಗ್ರೆಸ್ ಗೆಲ್ಲಿಸಲಿ ಎಂದು ಸವಾಲಿನ ಧಾಟಿಯಲ್ಲಿ ಹರಿಹಾಯ್ದರು. ಶುಕ್ರವಾರದ ಕೋಲಾರ ಚುನಾವಣಾ ಪ್ರಚಾರಕ್ಕೆ ನನ್ನನ್ನು ಯಾರೂ ಕರೆದಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೂ ನನ್ನ ಬಳಿ ಹೇಳಿಲ್ಲ. ನಾನು 30 ವರ್ಷ ಪಕ್ಷ ಕಟ್ಟಿದ್ದೇನೆ. ನನ್ನನ್ನು ಯಾಕೆ ಕರೆದಿಲ್ಲ ಎಂಬುದನ್ನು ನೀವೇ ಅವರನ್ನು ಕೇಳಿ. ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ ಎಂದು ಹೇಳಿದ್ದಾರೆ ಮುನಿಯಪ್ಪ.
ಮುನಿಯಪ್ಪ ಅವರ ಇತಿಹಾಸ ದೊಡ್ಡದು. ಕೋಲಾರ ಕ್ಷೇತ್ರದಲ್ಲಿ ಸತತ 7ಬಾರಿ ಚುನಾವಣೆ ಗೆದ್ದಿದ್ದ ಸಂಸದರಾಗಿದ್ದ, ಕೇಂದ್ರದಲ್ಲಿ ಸಚಿವರಾಗಿದ್ದ ಮುನಿಯಪ್ಪ, ಇದೇ ಮೊದಲ ಬಾರಿ ಶಾಸಕರಾಗಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ಧಾರೆ. ಕಳೆದ ಚುನಾವಣೆಯಲ್ಲಿ ಮುನಿಯಪ್ಪ ಸೋಲಿಗೆ ಸಿದ್ದರಾಮಯ್ಯ ಬಣದಲ್ಲಿದ್ದ ರಮೇಶ್ ಕುಮಾರ್ ಕಾರಣ ಎನ್ನಲಾಗಿತ್ತು.
ಚುನಾವಣೆಗೂ ಮೊದಲು ಸೇಫ್ ಕ್ಷೇತ್ರ ಹುಡುಕಾಟದಲ್ಲಿದ್ದ ಸಿದ್ದರಾಮಯ್ಯ, ಕೋಲಾರವನ್ನು ಲಿಸ್ಟಿನಲ್ಲಿ ಇಟ್ಟುಕೊಂಡಿದ್ದರು. ಆಗ ಮುನಿಯಪ್ಪ ಅವರೊಂದಿಗೆ ಮಾತುಕತೆ ನಡೆಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡಿದ್ದರು. ಇನ್ನು ಪ್ರಭಾವಿ ದಲಿತ ಎಡಗೈ ನಾಯಕರಾದ ಮುನಿಯಪ್ಪ, ಪ್ರತಿರೋಧ ಒಡ್ಡಿದರೆ ಸರ್ಕಾರ ರಚನೆ ಅಸಾಧ್ಯ ಎಂಬ ಅರಿವೂ ಇತ್ತು. ಮುಂದೆ ಸಿದ್ದರಾಮಯ್ಯ.. ವರುಣಾದಿಂದಲೇ ನಿಂತು ಗೆದ್ದರು. ಸಿಎಂ ಆದರು. ಮುನಿಯಪ್ಪ ಮಿನಿಸ್ಟರ್ ಆದರು. ಆದರೆ.. ಲೋಕಸಭೆ ಹೊತ್ತಿಗೆ ಹೊಂದಾಣಿಕೆ ಢಮಾರ್ ಆಗಿದೆ.
ಕೋಲಾರಕ್ಕೆ ಮುನಿಯಪ್ಪ ತಮ್ಮ ಅಳಿಯನಿ ಚಿಕ್ಕ ಪೆದ್ದಣ್ಣ ಅವರಿಗಾಗಿ ಟಿಕೆಟ್ ಕೇಳಿದ್ದರು. ಆದರೆ..ರಮೇಶ್ ಕುಮಾರ್ ಬಂಡಾಯದವರು ಸಾಮೂಹಿಕ ರಾಜೀನಾಮೆ ಕೊಡಲು ಮುಂದಾದ ಹಿನ್ನೆಲೆಯಲ್ಲಿ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣ..ಎರಡಕ್ಕೂ ಸೇರದ ಕೆ.ವಿ.ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಆದರೆ.. ಅಲ್ಲಿ ರಮೇಶ್ ಕುಮಾರ್ ಬಣವೇ ಮೇಲುಗೈ ಸಾಧಿಸಿದೆ ಎನ್ನಲಾಗಿದೆ.
ಹೀಗಾಗಿಯೇ ಕುರುಡುಮಲೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಮುನಿಯಪ್ಪ ಅವರಾಗಲೀ, ಅವರ ಮಗಳಾದ ಶಾಸಕಿ ರೂಪಕಲಾ ಅವರಾಗಲಿ ಭಾಗವಹಿಸಿಲ್ಲ. ಸಭೆಗಳಲ್ಲಿಯೂ ದೂರ ಉಳ್ಯುತ್ತಿದ್ಧಾರೆ. ನಾಮಪತ್ರ ಸಲ್ಲಿಕೆ ವೇಳೆಯಲ್ಲಿಯೂ ದೂರವೇ ಉಳಿದಿರುವ ಮುನಿಯಪ್ಪ ಅವರ ಬಂಡಾಯ ಕಾಂಗ್ರೆಸ್ಸಿಗೆ ದಲಿತ ಮತಗಳು ಒಡೆಯಲು ಕಾರಣವಾಗಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರಲ್ಲಿಯೇ ಇದೆ.
ಇನ್ನು ಪಂಚಮಸಾಲಿ ಸಮುದಾಯದ ಪ್ರತ್ಯೇಕತಾ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ವೀಣಾ ಕಾಶಪ್ಪನವರ್ ಈಗ ಬಂಡಾಯವೆದ್ದಿದ್ದಾರೆ. ಆದರೆ.. ತಟಸ್ಥವಾಗಿ ಉಳಿಯಲು ಮುಂದಾಗಿದ್ಧಾರೆ. ಇದು ಪಂಚಮಸಾಲಿ ಲಿಂಗಾಯತರಲ್ಲಿ ಪ್ರಭಾವ ಬೀರಿದರೆ ಆಶ್ಚರ್ಯವಿಲ್ಲ.



