ಒಂದು ಹೆಣ್ಣಿಗೋಸ್ಕರ ಈ ಮಟ್ಟಕ್ಕೆ ಹೋಗೋದಾ?. ಒಂದು ಹೆಣ್ಣಿಗೆ ಎಂಎಲ್ಎ ಹುಚ್ಚು ಹಿಡಿದು, ಆ ಹೆಣ್ಣನ್ನು ಎಂಎಲ್ಎ ಮಾಡಬೇಕು ಎಂದು ಇವತ್ತು ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ. ನನ್ನ ಮೇಲೆ ಜಿದ್ದಿಗೆ ಬಿದ್ದಿರುವುದಕ್ಕೆ ಎರಡೇ ಕಾರಣ. ಇದರಲ್ಲಿ ಒಂದು ಈ ಕುಸುಮಾ ಡಿ.ಕೆ ರವಿ ಎಂಎಲ್ಎ ಆಗಬೇಕು. ಇನ್ನೊಂದು ಡಿ.ಕೆ ಸುರೇಶ್ ಅವರನ್ನು ಸೋಲಿಸಿದ್ದು. ಅವಳನ್ನ ಎಂಎಲ್ಎ ಮಾಡಬೇಕು ಎನ್ನುವುದು ಇವರ ಒಂದೇ ಗುರಿ. ಇದು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಕಿಡಿ ನುಡಿ. ಒಬ್ಬ ಎಂಎಲ್ಎನ ಹಿಂದೆ ತಳ್ಳಿ, ಕುಸುಮಾರನ್ನು ಕರೆಸಿಕೊಂಡು ಪಕ್ಕದಲ್ಲಿ ನಿಲ್ಲಿಸಿಕೊಂಡು ಒಬ್ಬರಿಗೊಬ್ಬರು ಪಾದಯಾತ್ರೆ ಮಾಡಿ, ಜನರ ಸಮಸ್ಯೆ ಆಲಿಸುತ್ತಾರೆ ಅಂದರೆ ಯಾವ ನ್ಯಾಯ ಎನ್ನುವುದು ಮುನಿರತ್ನ ಪ್ರಶ್ನೆ.
ಮುನಿರತ್ನ ಅವರ ಈ ಮಾತು ಅರ್ಥವಾಗಬೇಕು ಎಂದರೆ.. ರಾಜರಾಜೇಶ್ವರಿ ನಗರ ಕ್ಷೇತ್ರದ ಇತಿಹಾಸವನ್ನೊಮ್ಮೆ ನೋಡಬೇಕು. ಮುನಿರತ್ನ. ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ. ಈ ಹಿಂದೆ ಕಾಂಗ್ರೆಸ್ಸಿನಲ್ಲಿಯೂ ಶಾಸಕರಾಗಿದ್ದವರು ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಬಂದವರು. ವಾಸ್ತವದಲ್ಲಿ ಹೇಳಬೇಕೂ ಎಂದರೆ ಮುನಿರತ್ನ ಅವರೀಗ ಬಿಜೆಪಿಗೂ ಬೇಡ. ಕಾಂಗ್ರೆಸ್ಸಿಗೂ ಬೇಡ. ಅಂತಾದ್ದೊಂದು ತ್ರಿಶಂಕಕು ಸ್ವರ್ಗದಲ್ಲಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರಕ್ಕೂ.. ರಾಜರಾಜೇಶ್ವರಿ ನಗರಕ್ಕೂ ಒಂದು ನಂಟಿದೆ. ಡಿಕೆ ಸುರೇಶ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ರಾಜರಾಜೇಶ್ವರಿ ನಗರವೂ ಬರುತ್ತದೆ. ಮುನಿರತ್ನ, ಕಾಂಗ್ರೆಸ್ಸಿನಿಂದ ಹೋದ ಮೇಲೆ.. ಇಲ್ಲಿ ಕಾಂಗ್ರೆಸ್ಸಿಗೆ ವೋಟುಗಳು ಬರುತ್ತಿಲ್ಲ.
ಈ ಇಬ್ಬರ ಮಧ್ಯೆ ಬಂದಿರುವುದು ಕುಸುಮಾ ಹನುಮಂತರಾಯಪ್ಪ ಎಂಬ ಹೆಣ್ಣು ಮಗಳು. ಕುಸುಮಾ ಯಾರು ಎಂದರೆ ಆತ್ಮಹತ್ಯೆಗೆ ಶರಣಾದ ಡಿಕೆ ರವಿ ಎಂಬ ಐಎಎಸ್ ಅಧಿಕಾರಿಯ ಪತ್ನಿ. ಪತಿ ಮೃತಪಟ್ಟ ಮೇಲೆ ರಾಜಕೀಯಕ್ಕೆ ಬಂದಿರುವ ಕುಸುಮಾ, ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ವಿರುದ್ಧ ಸ್ಪರ್ಧೆ ಮಾಡಿ, ಸೋತವರು. ಇತ್ತೀಚೆಗೆ ಇವರ ಮನೆ ಮೇಲೆ ಇಡಿ ರೇಡ್ ಕೂಡಾ ಆಗಿತ್ತು. ಕುಸುಮ ಅವರ ತಮ್ಮ, ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಇನ್ನು ರಾಜರಾಜೇಶ್ವರಿ ನಗರ ಎಲೆಕ್ಷನ್ ರಿಸಲ್ಟ್ ದಿನ ಮುನಿರತ್ನ ಹಾಗೂ ಕುಸುಮಾ ಮಧ್ಯೆ ನೆಟ್ ಟು ನೆಕ್ ಫೈಟ್ ಇತ್ತು. ಕೊನೆಯ ಕ್ಷಣದಲ್ಲಿ ಲೀಡ್ ಪಡೆದುಕೊಂಡ ಮುನಿರತ್ನ, 11,842 ಮತಗಳ ಅಂತರದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದ್ದರು. 11 ಸಾವಿರದ ಅಂತರ ಶಾಸಕರ ಚುನಾವಣೆಯಲ್ಲಿ ಉತ್ತಮ ಲೀಡ್ ಅಲ್ಲವೇ ಎನ್ನುವವರಿಗೆ ಉತ್ತರ ಬೇರೆ ಇದೆ. ಇದೇ ಮುನಿರತ್ನ 2020ರಲ್ಲಿ 58 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದರು. 2018ರಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದರು. ಮುನಿರತ್ನಗೆ ಸೋಲಿನ ಭಯ ಹುಟ್ಟಿಸಿದ್ದವರು ಕುಸುಮಾ ಮಾತ್ರ. ಅಫ್‌ಕೋರ್ಸ್.. ಅವರ ಹಿಂದೆ ತಂತ್ರಗಾರಿಕೆಯ ನೇತೃತ್ವ ವಹಿಸಿದ್ದವರು ಡಿಕೆ ಬ್ರದರ್ಸ್.
ಕುಸುಮಾ ಮತ್ತು ಡಿಕೆ ಸೋದರರಿಗೆ ಲಿಂಕ್ ಮಾಡಿಯೇ ಮುನಿರತ್ನ ಅಟ್ಯಾಕ್ ಮಾಡ್ತಿದ್ದಾರೆ. ಇನ್ನು ಕುಸುಮಾ ಇದಕ್ಕೆ ರಿಯಾಕ್ಷನ್ ನೀಡಿದ್ದಾರೆ. ಮುನಿರತ್ನ, ನಿನ್ನ ನೀಚ ಬುದ್ದಿ ಬಿಡು, ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡ ಬೇಡ. ನಿನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳನ್ನು ಅಶ್ಲೀಲವಾಗಿ ನೋಡುವ, ಅಸಭ್ಯವಾಗಿ ಮಾತನಾಡುವುದನ್ನು ಬಿಡು.. ಎಂದೆಲ್ಲ ಬುದ್ದಿ ಹೇಳಿದ್ದಾರೆ.



