ಕನ್ನಡ ಚಿತ್ರರಂಗಕ್ಕೆ ಹೊಸ ಟಾನಿಕ್ ಕೊಟ್ಟ, ಚಿತ್ರರಂಗವನ್ನು ಮತ್ತೊಂದು ಮೈಲಿಗಲ್ಲಿಗೆ ಕೊಂಡೊಯ್ದ ಸಿನಿಮಾ ಮುಂಗಾರು ಮಳೆ. ಇವತ್ತಿಗೂ ಆ ಚಿತ್ರ ನೆನಪಿಸಕೊಂಡರೆ ಮಳೆಯಲ್ಲಿ ನೆಂದ ಒದ್ದೆ ಒದ್ದೆಯಾದ ಅನುಭವ. ಸಿನಿಮಾ ನೋಡಿದವರಿಗೇ ಹೀಗಾಗಬೇಕಾದರೆ, ಆ ಚಿತ್ರದಿಂದ ಸ್ಟಾರ್ ಅದವರಿಗೆಷ್ಟು ರೋಮಾಂಚನವಾಗಬೇಡ..
ಮುಂಗಾರು ಮಳೆ ಸಿನಿಮಾ ಬಂದು 17 ವರ್ಷವಾಗಿ ಹೋಯ್ತಾ..? ಅಚ್ಚರಿಯಾಗುತ್ತಿದೆ. ಆದರೆ ಇದು ಸತ್ಯ. ಮುಂಗಾರು ಮಳೆಯ ಸಂಭ್ರಮದ ಕ್ಷಣಗಳನ್ನು ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ಹಂಚಿಕೊಂಡಿದ್ದಾರೆ. ನೆನಪಿಸಿಕೊಂಡಿದ್ದಾರೆ. ಏಕೆಂದರೆ ಈ ಚಿತ್ರದ ಮೂಲಕ ಸ್ಟಾರ್ ಆದವರು ಒಬ್ಬಿಬ್ಬರಲ್ಲ. 10ಕ್ಕೂ ಹೆಚ್ಚು ಜನ ಸ್ಟಾರ್ ಆಗಿದ್ದಾರೆ.
17 ವರ್ಷಗಳ ಹಿಂದೆ ಬಂದ ಸಿನಿಮಾ ಮುಂಗಾರು ಮಳೆ. ಆ ಸಿನಿಮಾ ಮೂಲಕ ಹಲವು ಸ್ಟಾರ್ʻಗಳು ಉದ್ಭವವಾದರು. ಏಕೆಂದರೆ ಚಿತ್ರ ಮಾಡಿದ ಯಾರೊಬ್ಬರಿಗೂ ಅದು ಫಸ್ಟ್ ಸಿನಿಮಾ ಅಲ್ಲ. ಆದರೆ ಸ್ಟಾರ್ ಪಟ್ಟ ಕೊಟ್ಟ ಸಿನಿಮಾ.
ಸ್ಟಾರ್ ನಂ.1
ನಿರ್ದೇಶಕ ಯೋಗರಾಜ್ ಭಟ್. ಈ ಚಿತ್ರದ ಡೈಲಾಗ್, ಟೇಕಿಂಗ್ಸ್, ಮೇಕಿಂಗ್ಸ್ʻನಲ್ಲಿ ಗಮನ ಸೆಳೆದರು. ಆ ನಂತರ ಭಟ್ಟರು ಬೆಳೆದ ಪರಿ ಅಮೋಘ. ಒಂದು ಮೈನಸ್ ಎಂದರೆ ಮುಂಗಾರು ಮಳೆ ಮೀರಿಸುವ ಇನ್ನೊಂದು ಹಿಟ್ ಸಿಕ್ಕಿಲ್ಲ.
ಸ್ಟಾರ್ ನಂ.2
ಮುಂಗಾರು ಮಳೆಯ ಹೊತ್ತಿಗೆ ಹ್ಯಾಟ್ರಿಕ್ ಬಾರಿಸಿದ್ದ ಗಣೇಶ್, ಈ ಚಿತ್ರದ ನಂತರ ಗೋಲ್ಡನ್ ಸ್ಟಾರ್ ಆದರು. ಅದು ಇವತ್ತಿಗೂ ಗಣೇಶ್ ಅವರನ್ನು ಮುನ್ನಡೆಸುತ್ತಿದೆ. ಗಣೇಶ್ ಅವರಿಗೂ ಅಷ್ಟೇ, ಭಟ್ಟರಂತೆಯೇ ಮಳೆಯ ನಂತರ ಗೆದ್ದಿದ್ದಾರೆ, ಆದರೆ ಮುಂಗಾರು ಮಳೆಯನ್ನು ಮೀರಿಸುವುದಕ್ಕೆ ಸಾಧ್ಯವಾಗಿಲ್ಲ.
ಸ್ಟಾರ್ ನಂ..3
ನಟಿ ಪೂಜಾ ಗಾಂಧಿ ಯಾವ ಪರಿ ಜನಪ್ರಿಯರಾದರೆಂದರೆ, ಇವತ್ತಿಗೂ ಜನ ಅವರನ್ನು ಮಳೆ ಹುಡುಗಿ ಎಂದೇ ಗುರುತಿಸುತ್ತಾರೆ. ಅಷ್ಟು ದೊಡ್ಡ ಹಿಟ್ ಪೂಜಾಗೂ ಸಿಕ್ಕಿಲ್ಲ.
ಸ್ಟಾರ್ ನಂ.4
ಕಥೆಗಾರ ಪ್ರೀತಂ ಗುಬ್ಬಿ ಈ ಚಿತ್ರದ ನಂತರ ಯಶಸ್ವಿಯಾಗಿ ಡೈರೆಕ್ಟರ್ ಕೂಡಾ ಆದರು. ಯಶಸ್ವಿಯೂ ಆದರು.
ಸ್ಟಾರ್ ನಂ. 5
ಸಂಗೀತ ನಿರ್ದೇಶಕ ಮನೋ ಮೂರ್ತಿ ಮುಂಗಾರು ಮಳೆಗೂ ಮುನ್ನ ಹಿಟ್ ಕೊಟ್ಟಿದ್ದರಾದರೂ, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದು ಮುಂಗಾರು ಮಳೆಯ ನಂತರ. ಆದರೆ ಹಿಟ್ ಎಂದು ನೋಡಿದರೆ ಮಳೆಯೇ ಲಾಸ್ಟ್.
ಸ್ಟಾರ್ ನಂ. 6
ಚಿತ್ರ ಸಾಹಿತಿ ಜಯಂತ ಕಾಯ್ಕಿಣಿಯವರೂ ಅಷ್ಟೆ. ಕಾಯ್ಕಿಣಿ ಸಾಹಿತ್ಯದಲ್ಲಿ ಮಾಡಿದ್ದ ಸಾಧನೆ, ಅದಕ್ಕೂ ಮುನ್ನ ಚಿತ್ರರಂಗದಲ್ಲಿ ಮೂಡಿಸಿದ್ದ ಹೆಮ್ಮೆಯ ಗುರುತುಗಳನ್ನೂ ಮೀರಿಸಿ ಸ್ಟಾರ್ ಪಟ್ಟ ಕೊಟ್ಟಿದ್ದು ಮುಂಗಾರು ಮಳೆ. ಕಾಯ್ಕಿಣಿಯವರು ಇದಕ್ಕೆ ಹೊರತಾದವರು. ಮಳೆಯ ನಂತರ ಮಳೆಯನ್ನೂ ಮೀರಿ ಬೆಳೆದವರು.
ಸ್ಟಾರ್ ನಂ. 8
ಗಾಯಕರಾದ ಶ್ರೇಯಾ ಘೋಷಾಲ್, ಸೋನು ನಿಗ̧ಮ್, ಕುನಾಲ್ ಗಂಜಾವಾಲ, ಸುನಿಧಿ ಚೌಹಾಣ್ ಅವರನ್ನೆಲ್ಲ ಹೆಸರು ಸಮೇತ ಗುರುತಿಸಿದ್ದು ಈ ಚಿತ್ರದ ಹಾಡುಗಳಿಂದ.
ಸ್ಟಾರ್ ನಂ. 9
ಛಾಯಾಗ್ರಹಕ ಕೃಷ್ಣ ಅವರಂತೂ ಜೋಗ್ ಫಾಲ್ಸ್ ಸೆರೆ ಹಿಡಿದ ರೀತಿಗೆ ಸ್ಟಾರ್ ಕ್ಯಾಮೆರಾಮನ್ ಆದರು. ಜೋಗ್ ಫಾಲ್ಸ್ʻಗೆ ಸ್ಟಾರ್ ಪಟ್ಟ ಕೊಟ್ಟ ಸಿನಿಮಾ ಕೂಡಾ ಮುಂಗಾರು ಮಳೆ.
ಸ್ಟಾರ್ ನಂ. 10
ನಿರ್ಮಾಪಕ ಇ. ಕೃಷ್ಣಪ್ಪ ಹಾಗೂ ವಿತರಕರಾದ ಜಯಣ್ಣ ಭೋಗೇಂದ್ರ ಅವರನ್ನೂ ಸ್ಟಾರ್ ಪಟ್ಟಕ್ಕೇರಿಸಿದ ಸಿನಿಮಾ ಮುಂಗಾರು ಮಳೆ.
ಅನಂತ ನಾಗ್ ಅವರನ್ನು ಪೋಷಕ ನಟರನ್ನಾಗಿ ಯಶಸ್ವಿ ಕಂಬ್ಯಾಕ್ ಮಾಡಿಸಿದ್ದು ಕೂಡಾ ಮುಂಗಾರು ಮಳೆ. ಇವರನ್ನು ಮಳೆಯಿಂದ ಸ್ಟಾರ್ ಅದವರು ಎನ್ನುವುದಕ್ಕಾಗಲ್ಲ. ಸ್ಟಾರ್ʻಪಟ್ಟದ ಉತ್ತುಂಗ ತಲುಪಿ ಬಂದವರು ಅನಂತನಾಗ್. ಇದು ಕೇವಲ ಕಂಬ್ಯಾಕ್ ಸಿನಿಮಾ ಅಷ್ಟೆ. 70 ಲಕ್ಷ ಬಜೆಟ್ಟಿನಲ್ಲಿ ತಯಾರಾಗಿದ್ದ ಸಿನಿಮಾ 75 ಕೋಟಿ ಗಳಿಸಿತ್ತು. ಅಷ್ಟೇ ಅಲ್ಲ, ಇದೊಂದು ಚಿತ್ರದಿಂದ ಗಣೇಶ್ ಕೋಟಿ ಸಂಭಾವನೆ ಪಡೆದ ಮೊದಲ ನಟರಾದರು.



