ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಬೇರಾವ ರಾಜ್ಯಗಳಲ್ಲೂ ಇಲ್ಲದ ರೀತಿ ಕನ್ನಡ ಸಿನಿಮಾ ಪ್ರೇಕ್ಷಕರ ಲೂಟಿ ನಡೆಯುತ್ತಿತ್ತು. ಬೇರೆ ಯಾವುದೇ ರಾಜ್ಯಗಳಿರಲಿ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳಗಳಲ್ಲಿ ಸಿನಿಮಾ ಟಿಕೆಟ್ ರೇಟ್ ಗರಿಷ್ಠ 200 ರೂ. ಇರುತ್ತದೆ. ಆದರೆ ಕರ್ನಾಟಕದಲ್ಲಿ ಮಾತ್ರ ಸ್ಟಾರ್ ಸಿನಿಮಾಗಳು ಬಂದರೆ ಸಾವಿರ, 2 ಸಾವಿರ, 3 ಸಾವಿರದವರೆಗೂ ಏರುತ್ತೆ. ಇದೇಕೆ.. ಕರ್ನಾಟಕದಲ್ಲಿಯೂ ಒಂದು ದರ ಫಿಕ್ಸ್ ಮಾಡುವುದಕ್ಕೆ ಆಗುವುದಿಲ್ಲವೇ ಎಂಬ ಪ್ರಶ್ನೆ ಏಳುವುದು ಸಹಜ. ಅವುಗಳಿಗೆಲ್ಲ ಒಂದು ತಾರ್ಕಿಕ ಅಂತ್ಯ ಸಿಗುವ ಸಮಯ ಬಂದಿದೆ. ಅಂದಹಾಗೆ ಫಿಲ್ಮ್ ಚೇಂಬರ್ ಕೂಡಾ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಗರಿಷ್ಠ 200 ರೂ. ನಿಗದಿಪಡಿಸುವಂತೆ ಒತ್ತಾಯ ಮಾಡಿದೆ.
200 ರೂ. ಟಿಕೆಟ್ ಫೈಟ್ ಶುರುವಾಗಿದ್ದು ಹೇಗೆ..?
ಇದು ಶುರುವಾಗಿದ್ದು ಸುಮಾರು 2016-17ರ ಸುಮಾರಿನಲ್ಲಿ. ಆಗ ಆಕ್ಟರ್ ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ನವೀನ್ ಕೃಷ್ಣ ನಟಿಸಿದ್ದ ಚಿತ್ರಕ್ಕೆ ದಯಾಳ್ ಪದ್ಮನಾಭನ್ ನಿರ್ದೇಶಕ. ಚಿತ್ರಲೋಕ ವೀರೇಶ್ ನಿರ್ಮಾಪಕರಾಗಿದ್ದರು. ಅಂದಹಾಗೆ ಕೆಎಂ ವೀರೇಶ್ ಕನ್ನಡ ಪತ್ರಿಕೋಧ್ಯಮದ ಪ್ರಖ್ಯಾತ ಫೋಟೋಗ್ರಾಫರುಗಳಲ್ಲಿ ಒಬ್ಬರು. ಒಂದು ಕಾಲಕ್ಕೆ ರಾಜ್ಯದ ಎಲ್ಲ ಪತ್ರಿಕೆಗಳಲ್ಲಿಯೂ ಇವರ ಫೋಟೋಗಳೇ ರಾರಾಜಿಸುತ್ತಿದ್ದವು. ಕ್ರೈಂ, ಕ್ರೀಡೆ, ಸಿನಿಮಾ, ಪಾಲಿಟಿಕ್ಸ್.. ಹೀಗೆ ಎಲ್ಲೆಡೆಯೂ ಅದ್ಭುತ ಫೋಟೋಗ್ರಫಿ ಮಾಡುತ್ತಿದ್ದ ವೀರೇಶ್, ಚಿತ್ರ ನಿರ್ಮಾಪಕರೂ ಹೌದು. ಇವರ ಆಕ್ಟರ್ ಚಿತ್ರಕ್ಕೆ ಒಳ್ಳೆಯ ಪ್ರಚಾರವೂ ಸಿಕ್ಕಿತ್ತು. ಮಲ್ಟಿಪ್ಲೆಕ್ಸುಗಳು ಹೌಸ್ ಫುಲ್ ಆಗಿದ್ದವು. ಆದರೆ.. ಪ್ರೇಕ್ಷಕರೇ ಇರಲಿಲ್ಲ. ಅದೂವರೆಗೆ ಮಲ್ಟಿಪ್ಲೆಕ್ಸ್ ಕಳ್ಳಾಟದ ಬಗ್ಗೆ ಮಾಹಿತಿಯೇ ಇಲ್ಲದಿದ್ದ ವೀರೇಶ್, ಸ್ವಯಂ ತನಿಖೆಗೇ ಇಳಿದರು.
ತನಿಖಾ ಪತ್ರಿಕೋದ್ಯಮದಲ್ಲೂ ಪಳಗಿದ್ದ ವೀರೇಶ್ ಅವರಿಗೆ ಇದು ಕಷ್ಟವೇನೂ ಆಗಲಿಲ್ಲ. ಜೊತೆಗೆ ಸಾಥ್ ಕೊಟ್ಟವರು ಕಿರಿಕ್ ಕೀರ್ತಿ ಹಾಗೂ ಆಕ್ಟರ್ ಚಿತ್ರವನ್ನು ನಿರ್ದೇಶಿಸಿದ್ದ ದಯಾಳ್ ಪದ್ಮನಾಭನ್. ಒಂದು ಮೋಸದ ಕಥೆಯೇ ಹೊರಬಿದ್ದಿತ್ತು. ಅದು ಸಿಎಂ ಸಿದ್ದರಾಮಯ್ಯನವರಿಗೂ ರೀಚ್ ಆಗುವಂತೆ ಮಾಡಿದವರು ಸಾರಾ ಗೋವಿಂದು. ಇದಾದ ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ 200 ರೂ. ಗರಿಷ್ಠ ಮಿತಿ ಹಾಕಿ ಆದೇಶವನ್ನೂ ಕೊಟ್ಟರು. ಇದು ಆಗಿದ್ದು 2017ರಲ್ಲಿ.
ಸಹಜವಾಗಿಯೇ ಮಲ್ಟಿಪ್ಲೆಕ್ಸ್ʻನವರು ಕೋರ್ಟ್ ಮೊರೆ ಹೋದರು. ಕೋರ್ಟ್ ವಿಚಾರಣೆಯನ್ನೂ ನಡೆಸಿತು. ವಿಚಾರಣೆ ನಡೆಯುವವರೆಗೆ ಆಗ ಇದ್ದ ಯಥಾಸ್ಥಿತಿಯನ್ನೇ ಮುಂದುವರೆಸುವಂತೆ ಆದೇಶ ಕೊಟ್ಟಿತು. ಕೊನೆಗೆ ಆ ತೀರ್ಪು ಕಳೆದ ವರ್ಷ ಹೊರಬಂದಿದೆ. ಅದು ಯಾರಿಗೂ ಗೊತ್ತಾಗದಂತೆ ಮಾಡಲಾಗಿದೆ. ಅದನ್ನೂ ಕೂಡಾ ಚಿತ್ರಲೋಕ ವರದಿ ಮಾಡಿದೆ. ಇಷ್ಟಕ್ಕೂ ಸರ್ಕಾರದ ಆದೇಶ ರದ್ದಾಗಿದ್ದೇಕೆಂದರೆ ಈ ಆದೇಶ ಕೊಡಬೇಕಿದ್ದ ಇಲಾಖೆ, ಒಳಾಡಳಿತ ಇಲಾಖೆಯೇ ಹೊರತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಗಿರಲಿಲ್ಲ. ಒಂದು ತಾಂತ್ರಿಕ ಅಡಚಣೆಯಿಂದಾಗಿ ಸರ್ಕಾರದ ಆದೇಶ ಬಿದ್ದು ಹೋಗಿದೆ. ಈಗ ಮತ್ತೊಮ್ಮೆ ಪ್ರಕರಣ ಸಿಎಂ ಸಿದ್ದರಾಮಯ್ಯನವರ ಟೇಬಲ್ ತಲುಪಿದೆ.
ಇನ್ನೊಂದು ಹತ್ತು ದಿನಗಳಲ್ಲಿ ಆದೇಶ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರಂತೆ ಸಿಎಂ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯ 10 ದಿನಗಳಲ್ಲಿ ಆದೇಶವನ್ನೂ ಕೊಡಬಹುದು. ಆದರೆ, ಹೋರಾಟ ಅಲ್ಲಿಗೇ ಮುಗಿಯುವುದಿಲ್ಲ. ಏಕೆಂದರೆ, ಮಲ್ಟಿಪ್ಲೆಕ್ಸ್ ಮಾಲೀಕರು ಸರ್ಕಾರ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುವವರಂತೂ ಖಂಡಿತಾ ಅಲ್ಲ. ಅದು ಮತ್ತೊಂದು ಹೋರಾಟಕ್ಕೆ ಆರಂಭ ಅಷ್ಟೇ.



