ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಿಂದ ಬಚಾವ್ ಆಗಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದಿರುವ ಕೋರ್ಟ್, ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಬ್ರೇಕ್ ಹಾಕಿದೆ. ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದೆ. ರಿಲೀಫ್ ಕೊಟ್ಟಿರುವುದು ಜನಪ್ರತಿನಿಧಿಗಳ ಕೋರ್ಟ್. ಆದರೆ ರಿಲೀಸ್ 100% ಅಲ್ಲ. ಪಿಕ್ಚರ್ ಅಭೀ ಬಾಕಿ ಹೈ.
ಮುಡಾ ಅಕ್ರಮಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಹಲವು ಸ್ಪಷ್ಟನೆಗಳನ್ನು ಕೇಳಿದ್ದ ನ್ಯಾಯಾಲಯ ಕೃಷ್ಣ ಅವರ ಅರ್ಜಿಯನ್ನು ವಜಾ ಮಾಡಿದೆ. ಮೈಸೂರಿನ ಕೆಸರೆ ಗ್ರಾಮದ ಭೂಮಿ ಸ್ವಾಧೀನ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿತ್ತು. ತನಿಖೆಯಲ್ಲಿ ಯಾವುದೇ ಅಕ್ರಮ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಲೋಕಾಯುಕ್ತ ವರದಿ ಸಲ್ಲಿಸಿತ್ತು. ಆ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ಹಾಗೆಂದು ಸಿದ್ದರಾಮಯ್ಯ ಅವರಿಗೆ ಕಂಪ್ಲೀಟ್ ರಿಲೀಫ್ ಸಿಕ್ಕಿಲ್ಲ. ಇಡಿ ತನಿಖೆ ಜಾರಿಯಲ್ಲಿದೆ.
2025ರ ಸೆಪ್ಟೆಂಬರ್‌ನಲ್ಲಿಮುಡಾದಲ್ಲಿನಡೆದಿರುವ ಅಕ್ರಮ ಸಂಬಂಧ ತನಿಖೆ ಕೈಗೆತ್ತಿಕೊಂಡ ಜಾರಿ ನಿರ್ದೇಶನಾಲಯವು ಮುಡಾದ ಮಾಜಿ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಅಧಿವರನ್ನು ಬಂಧಿಸಿತ್ತು. ಇದುವರೆಗೂ 300 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ 142ಕ್ಕೂ ಹೆಚ್ಚಿನ ನಿವೇಶನಗಳನ್ನು ಜಪ್ತಿ ಮಾಡಿದ್ದು, ತನಿಖೆ ಮುಂದುವರಿಸಿದೆ.
ಪ್ರಕರಣದ ಹಿನ್ನೆಲೆ : ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂಬರ್ 464 ರ 3.16 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಬದಲಾಗಿ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ 14 ಬದಲಿ ನಿವೇಶನಗಳನ್ನು ಪಡೆದಿದ್ದರು. ಪಾರ್ವತಿ ಅವರಿಗೆ 3.16 ಎಕರೆ ಜಮೀನನ್ನು ಕೊಟ್ಟಿದ್ದವರು ಆಕೆಯ ತಮ್ಮ ಮಲ್ಲಿಕಾರ್ಜುನ ಸ್ವಾಮಿ. ಅದನ್ನು ಹರಿಶಿನಕುಂಕುಮವಾಗಿ ಕೊಟ್ಟಿದ್ದರು.
ಆದರೆ ಮಲ್ಲಿಕಾರ್ಜುನ ಸ್ವಾಮಿ ಆ ಜಮೀನು ಖರೀದಿ ಮಾಡಿದ್ದು, ಮುಡಾ ವಶಕ್ಕೆ ತೆಗೆದುಕೊಂಡ ಮೇಲೆ. ದೇವರಾಜು ಎಂಬುವವರಿಂದ ಮುಡಾ ವಶಕ್ಕೆ ತೆಗೆದುಕೊಂಡಿದ್ದ ಭೂಮಿಯನ್ನು, ಸಿದ್ದರಾಮಯ್ಯ ಅವರ ಬಾಮೈದ ಖರೀದಿ ಮಾಡಿದ್ದೇ ಅಕ್ರಮ ಎನ್ನುವುದು ಆರೋಪ. ಅದಾದ ಮೇಲೆ ಪಾರ್ವತಿಯವರು ಜಮೀನು ಖರೀದಿ ಮಾಡಿದ ಅದು ಒಮ್ಮೆ ನೋಟಿಫೈ ಆಗಿ, ಮತ್ತೊಮೆಮ ಡಿನೋಟಿಫೈ ಕೂಡಾ ಆಗಿ.. ಮತ್ತೆ ಮುಡಾ ವಶಕ್ಕೆ ಹೋಗಿದೆ. ಅಕ್ರಮ ಎಂದರೆ ಡಿನೋಟಿಫೈ ಆಗಿದ್ದ ವೇಳೆ ಪಾರ್ವತಿ ಅವರಿಗೆ ಬದಲಿ ನಿವೇಶನ ಸಿಕ್ಕಿದೆ ಎನ್ನುವುದು ಆರೋಪ. ಅಷ್ಟೇ ಅಲ್ಲ, ಹಳ್ಳಿಯ ಜಮೀನು ವಶಪಡಿಸಿಕೊಂಡಿದ್ದಕ್ಕೆ ಮೈಸೂರಿನ ಹೃದಯಭಾಗದಲ್ಲಿ ನಿವೇಶನಗಳನ್ನು ನೀಡಿರುವುದು ಅಕ್ರಮ ಎನ್ನುವುದು ಮತ್ತೊಂದು ವಾದ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಭಾವಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಮತ್ತು ಜಮೀನಿನ ಮೂಲ ಮಾಲೀಕ ದೇವರಾಜು ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು.ಬದಲಿ ನಿವೇಶನ ಪಡೆಯುವಲ್ಲಿ ಈ ನಾಲ್ವರು ಯಾವುದೇ ಅಕ್ರಮ ಎಸಗಿರುವ ಬಗ್ಗೆ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಲೋಕಾಯುಕ್ತ ತನಿಖಾಧಿಕಾರಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಅಲ್ಲಿ ರಿಲೀಫ್ ಪಡೆದಿದ್ದರೂ, ಇಡಿ ತನಿಖೆ ಇನ್ನೂ ಜೀವಂತವಾಗಿದೆ.



