ಮಾಜಿ ಸಿಎಂ ಹಾಗೂ ಹಾಲಿ ಡಿಸಿಎಂ ನಡುವಿನ ಜಗಳ ತಾರಕಕ್ಕೇರುತ್ತಿದೆ. ಲಿಮಿಟ್ಸ್ ದಾಟುತ್ತಿದೆ. ನೋ ಬೌಂಡರಿ. ಕೇವಲ 5 ವರ್ಷಗಳ ಹಿಂದೆ.. ಇದೇ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಾವಿಬ್ಬರೂ ನಿಜವಾದ ಜೋಡೆತ್ತುಗಳು ಎಂದು ಅಪ್ಪಿಕೊಂಡು ತಬ್ಬಿಕೊಂಡು ಮಾತನಾಡಿದ್ದರು. ಆಗ ದರ್ಶನ್ ಮತ್ತು ಯಶ್ ಇಬ್ಬರೂ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದರು. ಅವರಿಬ್ಬರನ್ನೂ ಜೋಡೆತ್ತು ಎಂದೇ ಬಣ್ಣಿಸಲಾಗುತ್ತಿತ್ತು. ಅದಕ್ಕೆ ಕೌಂಟರ್ ಆಗಿ ಮಾತನಾಡಿದ್ದ ಡಿಕೆ ಮತ್ತು ಹೆಚ್ʻಡಿಕೆ ನಾವು ರಿಯಲ್ ಜೋಡೆತ್ತು ಎಂದು ಹೇಳಿಕೊಂಡಿದ್ದರು.
ಕಾಲ ಚಕ್ರ ತಿರುಗಿದೆ. ಈಗ ಡಿಕೆ ಹೆಸರು ಕೇಳಿದರೆ.. ಹೆಚ್ʻಡಿಕೆ…
ಅವನಾ.. ಎಂದೇ ಮಾತನಾಡುವ ಹಂತದಲ್ಲಿದ್ಧಾರೆ. ಹೆಚ್ʻಡಿಕೆ ಹೆಸರು ಪ್ರಸ್ತಾಪವಾದರೆ.. ಡಿಸಿಎಂ ಡಿಕೆ ಕೂಡಾ ಅಷ್ಟೆ.. ನೋ ಮರ್ಯಾದೆ. ನೋ ಗೌರವ. ಈ ಬಾರಿ ಎಲೆಕ್ಷನ್ನಿನಲ್ಲಿ ಇದು ಇನ್ನೂ ಒಂದು ಹಂತ ದಾಟಿ ಹೋಗಿದೆ.
ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ಧಾರೆ. ಅವರು ಒಕ್ಕಲಿಗ ನಾಯಕರನ್ನು ಕರೆಸಿ ಮಾತನಾಡುವ ಹೊಸ ತೊಡಕಿನ ಪ್ಲಾನ್ʻಗೆ ಡಿಕೆ ಶಿವಕುಮಾರ್ ತಣ್ಣೀರು ಸುರಿದಿದ್ದರು. ಅದಾದ ಮೇಲೆ ಮಾತು ಮಾತು ಮಾತು. ಜೊತೆಗೆ ಈ ಬಾರಿ ಬಿಜೆಪಿಯಿಂದ ಡಾ.ಮಂಜುನಾಥ್ ಸ್ಪರ್ಧೆ ಮಾಡಿರುವುದು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಪ್ರಬಲ ಪೈಪೋಟಿ ಒಡ್ಡುತ್ತಿರುವುದು ಡಿಕೆ ಕಣ್ಣು ಕೆಂಪಗಾಗಿಸಿರುವುದಂತೂ ಸತ್ಯ. ಅತ್ತ ಹೆಚ್ʻಡಿಕೆಗೆ ಪದೇ ಪದೇ ಅಡ್ಡಗಾಲು ಹಾಕುತ್ತಿರುವುದು, ಕುಮಾರಸ್ವಾಮಿ ಅವರ ಕಣ್ಣು ಕೆಂಪಗಾಗಿಸಿದೆ. ತಾವು ಒಕ್ಕಲಿಗ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದನ್ನೂ ಕೆಣಕಿದ್ದು ಸಿಟ್ಟು ತರಿಸಿದೆ. ಹೀಗಾಗಿಯೇ..
ಕುಮಾರಸ್ವಾಮಿ ಡಿಕೆ ಶಿವಕುಮಾರ್ ಅವರನ್ನ ಕೊತ್ವಾಲ್ ಶಿಷ್ಯ. ಮೋಸಗಾರ. ಸುಳ್ಳುಗಾರ ಎಂದೆಲ್ಲ ಟೀಕಿಸಿದ್ದ ಕುಮಾರಸ್ವಾಮಿ ನನ್ನದು ಬಿಡದಿಯ ಬಳಿ 45-48 ಎಕರೆ ಭೂಮಿ ಇದೆ. ಸಿನಿಮಾದಲ್ಲಿ ದುಡಿದ ದುಡ್ಡಿನಲ್ಲಿ ಅದನ್ನು ಖರೀದಿ ಮಾಡಿದ್ದು. ರಾಜಕೀಯಕ್ಕೆ ಬರುವುದಕ್ಕೆ ಮೊದಲೇ ಈ ಜಾಮೀನು ಖರೀದಿ ಮಾಡಿದ್ದೇನೆ. ನಾನು ತೋಟದಲ್ಲಿ ರೆಸಾರ್ಟ್ ಮಾಡಿಲ್ಲ. ಬಂದು ನೋಡಪ್ಪ. ಕಲ್ಲಂಗಡಿ, ಬಾಳೆ, ಕೊಬ್ಬರಿ ಬೆಳೆದಿದ್ದೇನೆ. ಎಲ್ಲಾ ವಿಡಿಯೋ ಇದೆಯಪ್ಪ. ದೇವೇಗೌಡರು ವಿರೋಧ ಪಕ್ಷದಲ್ಲಿ ಇದ್ದಾಗಲೂ ನಿಕ್ಕರ್ ಹಾಕಿಕೊಂಡು ಶನಿವಾರ, ಭಾನುವಾರ ತೋಟದ ಕೆಲಸ ಮಾಡುತ್ತಿದ್ದರು ಎಂದು ಉತ್ತರ ಕೊಟ್ಟಿದ್ದರು.
ಡಿ.ಕೆ.ಶಿವಕುಮಾರ್ ಯಾವ ಕಷ್ಟಪಟ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ? ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸಿರೋದೇ ಅವರ ಕೆಲಸ. ಹೇಳಿದರೆ ಆ ವ್ಯಕ್ತಿಯ ಬಗ್ಗೆ ಕಂತೆ ಕಂತೆ ಹೇಳಬಹುದು. ಅವರಿಗೆ ನನ್ನದೇ ಆಪತ್ತು. ಅದಕ್ಕೆ ನನ್ನ ವಿರುದ್ದ ಮಾತಾಡ್ತಿದ್ದಾರೆ. 8 ಒಕ್ಕಲಿಗರಿಗೆ ಸೀಟು ಕೊಟ್ಟಿದ್ದೀನಿ ಅಂತಾರೆ. ಕೊಟ್ಟು ಏನ್ ಆಯ್ತು. ಸಿಎಂ ಆಗೋ ಅವಕಾಶ ಇದೆ, ಆಶೀರ್ವಾದ ಮಾಡಿ ಅಂದರು. ಈಗ ಒಂದು ಸಾರಿ ಪೇಪರು ಪೆನ್ನು ಕೊಟ್ಟು ತಮಿಳುನಾಡಿಗೆ ನೀರು ಹೋಗ್ತಿಲ್ಲವಾ? ಈಗ ಮತ್ತೆ ಪೆನ್ನು ಪೇಪರ್ ಕೊಡಬೇಕಾ ಎಂದು ಪ್ರಶ್ನಿಸಿದ್ಧಾರೆ.
ಇದಕ್ಕೆಲ್ಲ ಉತ್ತರ ಕೊಟ್ಟಿರುವ ಡಿಕೆ ಶಿವಕುಮಾರ್ ಅವರ ಮಾತುಗಳೂ ಅಷ್ಟೇ ಡೈರೆಕ್ಟ್ ಹಿಟ್ ಆಗಿವೆ. ಮಿಸ್ಟರ್ ಕುಮಾರಸ್ವಾಮಿ.. ಈ ಲೋಕಸಭಾ ಚುನಾವಣೆಯಲ್ಲಿ ನೀನು ಗೆಲ್ಲುವುದಿಲ್ಲ. ನನ್ನ ಆಸ್ತಿಯ ಬಗ್ಗೆ ಮಾತನಾಡುತ್ತಿಯಾ? ನಿಂದೆಷ್ಟಿತ್ತು? ನಿಮ್ಮ ಅಣ್ಣಂದು ಎಷ್ಟಿತ್ತು? ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ ಎಂಬುದರ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಬಾ. 48 ಎಕರೆ ಇದೆಯೋ ಒಂದು ಸಾವಿರ ಇದೆಯೋ ಚರ್ಚೆ ಮಾಡೋಣ ಬಾರಯ್ಯ ಎಂದು ವಿಧಾನಸಭೆಯಲ್ಲಿ ಕರೆದೆ. ಆದರೆ, ಬರಲಿಲ್ಲ ಹೋಗಿ ಬಿಟ್ಟ ಆಸಾಮಿ.. ಮಿಸ್ಟರ್ ಕುಮಾರಸ್ವಾಮಿ ನೀನು ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ ಎಂದು ಟೀಕಿಸಿದ್ಧಾರೆ. ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿರುವ ಡಿಕೆ ಶಿವಕುಮಾರ್ ನೀನು ಮೋಸಗಾರ, ಸುಳ್ಳುಗಾರ. ನಾನು ಕಲ್ಲು ಲೂಟಿ ಮಾಡಿದೆನೋ, ಮೋಸ ಮಾಡಿದೆನೋ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ನೀನು ಎಂತಹ ಸುಳ್ಳುಗಾರ ಎಂಬುದು ಗೊತ್ತಾಗಲಿದೆ ಎಂದು ಸವಾಲು ಹಾಕಿದ್ಧಾರೆ.
ಮಹಿಳೆಯರಿಗೆ ಡಿ.ಕೆ.ಶಿವಕುಮಾರ್ ರೇಟ್ ಫಿಕ್ಸ್ ಮಾಡುತ್ತಾರೆ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಜನರ ಜೇಬು ಪಿಕ್ ಪಾಕೇಟ್ ಮಾಡುತ್ತಿದೆ ಎನ್ನುವ ಮಾತಿಗೆ ಅವನಿಗೆ ಪಿಕ್ ಪಾಕೆಟ್ ಮಾಡಿ ರೂಡಿ ಅಲ್ಲವೇ? ಹೆದರಿಸಿ, ಬೆದರಿಸಿ ಬ್ಲಾಕ್ ಮೇಲ್ ಮಾಡುವುದು, ಹಿಟ್ ಅಂಡ್ ರನ್ ಮಾಡುವುದು ಅವನ ಕೆಲಸ ಎಂದು ಉತ್ತರ ಕೊಟ್ಟಿದ್ದಾರೆ.



