ಸಿನಿಮಾ, ಕ್ರೀಡೆಗಳಲ್ಲಷ್ಟೇ ಅಲ್ಲ, ರಾಜಕಾರಣದಲ್ಲೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್ಸ್ ಇರ್ತಾರೆ. ಅಂತಹವರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡಾ ಒಬ್ಬರು. ರಾಜಕೀಯದಲ್ಲಿ ಕಾಣಿಸಿಕೊಳ್ಳುವ ʻಇನ್ನೂ ಮದುವೆ ಆಗಿಲ್ಲದ ಹುಡುಗʼ. ಇವರೀಗ ಮದುವೆಯಾಗುತ್ತಿದ್ದಾರಂತೆ. ಹುಡುಗಿ ಶಿವಶ್ರೀ ಸ್ಕಂದ ಪ್ರಸಾದ್. ತಮಿಳುನಾಡಿನ ಚೆನ್ನೈನವರು. ಗಾಯಕಿ, ಭರತನಾಟ್ಯ ಕಲಾವಿದೆ. ಅಂದಹಾಗೆ ಈ ಶಿವಶ್ರೀ, ತೇಜಸ್ವಿ ಅವರಂತೆ ಸೈಕ್ಲಿಂಗ್ ಪ್ರಿಯೆಯೂ ಹೌದು.
ನಿಮಗೆ ಪೂಜಿಸಲೆಂದೆ ಹೂಗಳ ತಂದೆ.. ಹಾಡು ನೆನಪಿದೆ ತಾನೇ.. ಕಲ್ಪನಾ-ರಾಜ್ ಕುಮಾರ್ ಅಭಿನಯದ ಎರಡು ಕನಸು ಚಿತ್ರದ ಹಾಡು. ಆ ಹಾಡನ್ನು ಯೂಟ್ಯೂಬಿನಲ್ಲಿ ಹಾಡಿ, ಅದು ಪ್ರಧಾನಿ ಮೋದಿಯವರಿಗೂ ತಲುಪಿ ವ್ಹಾವ್ ಎನಿಸಿಕೊಂಡಿದ್ದ ಗಾಯಕ ಈ ಶಿವಶ್ರೀ ಸ್ಕಂದ ಪ್ರಸಾದ್. ಮುಂದಿನ ವರ್ಷ ಮಾರ್ಚ್ 4ರಂದು ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಹಸೆಮಣೆ ಏರಲಿದ್ದಾರಂತೆ.
ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಅವರ ಎರಡೂ ಕುಟುಂಬಗಳಿಂದಲೂ ಮದುವೆಗೆ ಒಪ್ಪಿಗೆ ಸಿಕ್ಕಿದೆಯಂತೆ. ಸುದ್ದಿ ಎಲ್ಲ ಕಡೆ ವೈರಲ್ ಆಗಿದ್ದರೂ, ಇದು ಸುಳ್ಳು ಸುದ್ದಿ ಎಂಬ ತೇಜಸ್ವಿ ನಿರಾಕರಿಸಿಲ್ಲ. ಇಂತಹವುಗಳಿಗೆಲ್ಲ ತಕ್ಷಣ ರಿಯಾಕ್ಟ್ ಮಾಡೋ ತೇಜಸ್ವಿ ಸೂರ್ಯ, ಸುದ್ದಿಯನ್ನು ನಿರಾಕರಿಸಿಲ್ಲ ಎನ್ನುವುದೇ ಸುದ್ದಿ ಖಚಿತ ಎಂದು ನಂಬುವುದಕ್ಕೆ ಕಾರಣವಾಗಿದೆ.
ಶಿವಶ್ರೀ ಸ್ಕಂದ ಪ್ರಸಾದ್ ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಇಂಜಿನಿಯರಿಂಗ್‌ನಲ್ಲಿ ಬಿ. ಟೆಕ್ ಪದವಿ ಪಡೆದಿರುವ ಹುಡುಗಿ. ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿ, ಚೆನ್ನೈ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದಾರೆ. ಇನ್ನು ಶಿವಶ್ರೀ ಯೂಟ್ಯೂಬ್ ಚಾನೆಲ್ ಕೂಡಾ ಇದ್ದು, 2 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಇದ್ದಾರೆ. ಈ ಹುಡುಗಿಯೇ ತಮ್ಮ ಯೂಟ್ಯೂಬ್ ಚಾನೆಲ್ಲಿನಲ್ಲಿ ಕನ್ನಡದ ‘ಪೂಜಿಸಲೆಂದೇ ಹೂಗಳ ತಂದೆ‘ ಹಾಡು ಹಾಡಿದ್ದರು. ಅದು ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣಿಗೂ ಬಿದ್ದು ಮೆಚ್ಚುಗೆ ಸೂಚಿಸಿದ್ದರು. ಶಿವಶ್ರೀ ಅವರು ಪೊನ್ನಿಯನ್ ಸೆಲ್ವನ್ ಕನ್ನಡ ಅವತರಿಣಿಕೆಯಲ್ಲಿ ಹಾಡಿದ್ದಾರೆ. ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ಕೊಡುತ್ತಾರೆ. ಚೆನ್ನೈನಲ್ಲಿದ್ದಾರೆಂದ ಮಾತ್ರಕ್ಕೆ ತಮಿಳಿನವರಲ್ಲ. ಅಪ್ಪಟ ಕನ್ನಡತಿ.
ಇನ್ನು ತೇಜಸ್ವಿ ಸೂರ್ಯ RSS ಹಿನ್ನೆಲೆಯಿಂದ ಬದವರು. ರಾಜ್ಯದ ಬಿಜೆಪಿ ಆಡಳಿತದಲ್ಲಿ ತೇಜಸ್ವಿ ಅತ್ಯಂತ ಕಿರಿಯ ಸಂಸದ. , ಸೈಕ್ಲಿಂಗ್, ವಾಕಥಾನ್ ಸೇರಿದಂತೆ ಅನೇಕ ಸ್ಪೋರ್ಟ್ಸ್‌ಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಐರನ್ ಮ್ಯಾನ್ ಮ್ಯಾರಥಾನ್ ಗೆದ್ದಿರುವ ತೇಜಸ್ವಿ, ಈ ಮ್ಯಾರಥಾನ್ ಪ್ರಶಸ್ತಿ ಗೆದ್ದ ಮೊದಲ ರಾಜಕಾರಣಿ ಸಂಸದ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ವಕೀಲರೂ ಹೌದು. ಯಡಿಯೂರಪ್ಪ ವಿರುದ್ಧದ ಪ್ರಕರಣಗಳಲ್ಲಿ ಅಶೋಕ್ ಹಾರ್ನಳ್ಳಿ ಅವರಿಗೆ ಅಸಿಸ್ಟೆಂಟ್ ಆಗಿದ್ದ ತೇಜಸ್ವಿ, ಪ್ರತಾಪ್ ಸಿಂಹ, ವಿ ಸೋಮಣ್ಣ, ಆರ್. ಅಶೋಕ್, ಮಹೇಶ್ ಹೆಗ್ಡೆ ಮೊದಲಾದವರ ಪರವಾಗಿ ವಾದಿಸಿದ್ದಾರೆ. ಬಸವನಗುಡಿ ಶಾಸಕ, ಮಾಜಿ ಸಚಿವ ರವಿ ಸುಬ್ರಹ್ಮಣ್ಯ ಅವರ ಸಂಬಂಧಿಕರೂ ಹೌದು.
ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದಿರುವ ತೇಜಸ್ವಿ ಅವರು ಕರ್ಣಾಟಿಕ್ ಸಂಗೀತದಲ್ಲಿ ಸಾಧನೆ ಮಾಡಿರುವವರು. ಹಾಗೆ ನೋಡಿದರೆ ಇದು ರಾಜಕೀಯ, ಕರ್ಣಾಟಿಕ್ ಸಂಗೀತ ಮತ್ತು ಸಂಗೀತ, ಭರತನಾಟ್ಯದ ಮದುವೆ ಎನ್ನಬಹುದು.



