ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮೀ ಮುಹೂರ್ತ ಎಂದು ಹಲವರು ಹೇಳುತ್ತಾರೆ. ಬ್ರಾಹ್ಮೀ ಮುಹೂರ್ತದ ಬಗ್ಗೆ ಹಲವು ನಂಬಿಕೆಗಳಿವೆ. ಮುಂಜಾನೆಯೇ ಏಳಬೇಕು, ದೇವರ ಪೂಜೆ ಮಾಡಬೇಕು, ಓದಬೇಕು, ಒಳ್ಳೆಯ ಕೆಲಸ ಆರಂಭಿಸಬೇಕು.. ಯಶಸ್ಸು ಖಚಿತ ಎಂಬ ನಂಬಿಕೆಯೂ ಇದೆ. ಅದಕ್ಕೆ ಕಾರಣ ಬ್ರಹ್ಮನಲ್ಲ.. ಬ್ರಹ್ಮನಿಗಿಂತಲೂ ಪವರ್ ಫುಲ್ ಶಕ್ತಿ ಹೊಂದಿರುವ ಸರಸ್ವತಿ. ತಾಯಿ ಶಾರದೆ ʻಬ್ರಾಹ್ಮೀ ಮುಹೂರ್ತʼದ ವೇಳೆ ನಾಲಗೆಯ ಮೇಲೆ ನೆಲೆಸಿರುತ್ತಾಳಂತೆ.
ಧರ್ಮ ಶಾಸ್ತ್ರಗಳಲ್ಲಿರುವ ನಂಬಿಕೆಯ ಪ್ರಕಾರ ಮಾತಿನ ದೇವತೆಯಾದ ಸರಸ್ವತಿ ದೇವಿಯು ಬ್ರಹ್ಮ ಮುಹೂರ್ತದ ಸಮಯದಲ್ಲಿ ವ್ಯಕ್ತಿಯ ನಾಲಿಗೆ ಮೇಲೆ ನೆಲೆಸಿರುತ್ತಾಳೆ. ಹೀಗಾಗಿ ಬ್ರಹ್ಮ ಮುಹೂರ್ತದ ವೇಳೆ ನಾವು ಏನೇ ಹೇಳಿದರೂ ಅಥವಾ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ಈಡೇರುವ ಸಾಧ್ಯತೆಗಳು ತುಂಬಾನೇ ಹೆಚ್ಚಾಗಿರುತ್ತದೆ. ಈ ಶಾಂತ ಸಮಯದಲ್ಲಿ, ನಮ್ಮ ಆಲೋಚನೆಗಳು ಮತ್ತು ಮಾತುಗಳು ನೇರವಾಗಿ ಬ್ರಹ್ಮಾಂಡದೊಂದಿಗೆ ಸಂಪರ್ಕ ಹೊಂದಿವೆ.ವಿಶಿಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಲುವಾಗಿ ದೇವರನ್ನು ಪ್ರಾರ್ಥಿಸಿದರೆ ಅವು ನಮ್ಮ ಆತ್ಮಸಾಕ್ಷಿಯೊಳಗೆ ಸೇರುತ್ತವೆ. ಈ ಸಮಯದಲ್ಲಿ ನಾವು ಒಳ್ಳೆಯ ಮಾತುಗಳನ್ನಾಡಿದರೆ, ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡರೆ ಅವು ಈಡೇರುತ್ತವೆ ಎಂಬ ನಂಬಿಕೆ ಇದೆ.
ಬ್ರಹ್ಮ ಮುಹೂರ್ತ ಎಂದರೆ ಯಾವಾಗ..?
ಅಷ್ಟೇ ಅಲ್ಲ, ಮುಂಜಾನೆಯ ಸಮಯವನ್ನು ಅಂದರೆ, ಸೂರ್ಯೋದಯಕ್ಕೂ 1 ಗಂಟೆ 36 ನಿಮಿಷಗಳ ಮೊದಲಿನ ಅವಧಿಯನ್ನು ಮಾತ್ರವೇ ಬ್ರಾಹ್ಮೀ ಮುಹೂರ್ತ ಎನ್ನುತ್ತಾರೆ. ಈ 1 ಗಂಟೆ 36 ನಿಮಿಷಗಳು ಪ್ರತಿನಿತ್ಯ ಮುಂಜಾನೆ 4:00 ರಿಂದ ಮುಂಜಾನೆ 5:30ರವರೆಗೆ ಇರುತ್ತದೆ. ಈ ಸಮಯವನ್ನು ಸಕಾರಾತ್ಮಕ ಶಕ್ತಿಗಳು ಸಕ್ರಿಯವಾಗಿರುವ ಸಮಯ ಎಂದು ನಂಬಲಾಗುತ್ತದೆ. ಹಿಂದೂ ಶಾಸ್ತ್ರಗಳ ಪ್ರಕಾರ, ಈ ಸಮಯವು ʻದೇವತೆಗಳ ಸಮಯʼವಾಗಿದೆ.
ಉದಾ: ಸೂರ್ಯೋದಯ ಬೆಳಿಗ್ಗೆ 6:00 ಆಗಿದ್ದರೆ, ಬ್ರಾಹ್ಮೀ ಮುಹೂರ್ತ ಸುಮಾರು 4:24 ರಿಂದ 5:12 ವರೆಗೆ ಇರುತ್ತದೆ. ಭಾರತದ ಹೆಚ್ಚಿನ ಭಾಗಗಳಲ್ಲಿ ಬೆಳಿಗ್ಗೆ 4:00 ರಿಂದ 5:00 ಅಥವಾ 5:30 ವರೆಗೆ ಬ್ರಾಹ್ಮೀ ಮುಹೂರ್ತ ಇರುತ್ತದೆ. ಸೂರ್ಯೋದಯಕ್ಕಿಂತ 48 ನಿಮಿಷಗಳ ಮೊದಲು ಕೊನೆಗೊಳ್ಳುತ್ತದೆ.
ಹಲವು ಋಷಿಮುನಿಗಳು, ಯೋಗಿಗಳು ಮತ್ತು ಆಧ್ಯಾತ್ಮಿಕ ಗುರುಗಳು (ಸದ್ಗುರು ಮುಂತಾದವರು) ಈ ಸಮಯವನ್ನು “ನಿಮ್ಮನ್ನು ನೀವೇ ಸೃಷ್ಟಿಸಿಕೊಳ್ಳುವ ಸಮಯ” ಎಂದು ವಿವರಿಸುತ್ತಾರೆ. ಪ್ರತಿದಿನ ಈ ಸಮಯದಲ್ಲಿ ಎದ್ದರೆ ಜೀವನ ಚಿನ್ನದಂತಾಗುತ್ತದೆ ಎಂಬ ನಂಬಿಕೆ ಇದೆ.ಇದು ಸ್ಥಳ ಮತ್ತು ಋತುವಿನ ಪ್ರಕಾರ ಸ್ವಲ್ಪ ಬದಲಾಗುತ್ತದೆ.
ಕೆಟ್ಟ ಮಾತು ಬೇಡ.. ಕೆಟ್ಟ ಆಲೋಚನೆಗಳೂ ಬೇಡ..
ಬ್ರಹ್ಮ ಮುಹೂರ್ತದ ವೇಳೆ ನಿಂದಿಸುವ, ಕೋಪದ, ಕೆಟ್ಟ ಮಾತುಗಳನ್ನು ಆಡಲೇಬಾರದು. ಹಾಗೆ ನೋಡಿದರೆ.. ಆ ರೀತಿಯ ವರ್ತನೆ ಯಾವ ಮುಹೂರ್ತದಲ್ಲೂ ಸರಿಯಲ್ಲ. ಆದರೆ, ಬ್ರಾಹ್ಮಿ ಮುಹೂರ್ತದ ಶಕ್ತಿಯೇ ಬೇರೆ. ಹೀಗಾಗಿ ಈ ಸಮಯದಲ್ಲಿ ನೀವು ಇತರರಿಗೆ ಒಳ್ಳೆಯದನ್ನು ಬಯಸಬೇಕು. ಶುಭವನ್ನು ಹಾರೈಸಬೇಕು.ಈ ಸಮಯದಲ್ಲಿ ಎದ್ದು ಮಾನಸಿಕವಾಗಿ ನೀವು ಅಂದುಕೊಂಡಿದ್ದನ್ನು ಜಪಿಸಿ… ದೃಢ ಸಂಕಲ್ಪ ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಮೌನವಾಗಿದ್ದು, ಧ್ಯಾನ ಮಾಡಬೇಕು. ಇಂಥದ್ದೇ ದೇವರ ಸ್ಮರಣೆ ಮಾಡಬೇಕು ಎಂದೇನೂ ಇಲ್ಲ. ನಿಮಗೆ ಇಷ್ಟವಾದ ಯಾವುದೇ ದೇವರನ್ನಾದರೂ ಧ್ಯಾನಿಸಿ.. ಪೂಜಿಸಬೇಕು.
ಸರಸ್ವತಿ ದೇವಿಯು ಜ್ಞಾನ ಮತ್ತು ಕಲಿಕೆಯ ದೇವತೆಯಾಗಿರುವುದರಿಂದ, ಈ ಸಮಯದಲ್ಲಿ ಅಧ್ಯಯನ ಮಾಡುವುದು ವಿದ್ಯಾರ್ಥಿಗಳಿಗೆ ಉತ್ತಮ.
ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ ಬ್ರಹ್ಮ ಮುಹೂರ್ತದ ಸಮಯವು ಹೆಚ್ಚು ಸತ್ವ ಗುಣದೊಂದಿಗೆ ತುಂಬಿರುವ ಸಮಯವಾಗಿದ್ದರಿಂದ ಈ ಸಮಯದಲ್ಲಿ ಆಧ್ಯಾತ್ಮಿಕತೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.



