ಅತ್ತೆ ಉತ್ತರ ಆದರೆ.. ಸೊಸೆ ದಕ್ಷಿಣ ಇರೋದು ಕಾಮನ್. ಎಲ್ಲೋ ಅಪರೂಪಕ್ಕೆ ಅತ್ತೆ ಸೊಸೆಯಂದಿರು ಅನ್ಯೋನ್ಯವಾಗಿರುವ ಸಂಬಂಧ ಸಿಕ್ಕುವುದು. ಅತ್ತೆ ಸೊಸೆ ಚೆನ್ನಾಗಿದ್ದರೆ.. ಆ ಸಂಸಾರ ಸ್ವರ್ಗದಂತಿರುತ್ತದೆ. ಇಷ್ಟಕ್ಕೂ ಅತ್ತೆ ಸೊಸೆಯಂದಿರ ಕಿತ್ತಾಟಕ್ಕೆ ದೊಡ್ಡ ಕಾರಣವೇ ಬೇಕಿಲ್ಲ. ಕಸ ಗುಡಿಸೋದು, ಕಾಫಿ ಕುಡಿಯೋದರಂತಹ ಸಣ್ಣ ಸಣ್ಣ ವಿಷಯಗಳಿಗೂ ಜಗಳ ಮಾಡ್ತಾರೆ. ದುಡ್ಡಿನ ವಿಷಯವಂತೂ ಬೇರೆಯದೇ ಕಥೆ. ಆದರೆ..ಇಲ್ಲೊಬ್ಬರು ಸೊಸೆಗೆ ತಕ್ಕ ಅತ್ತೆ ಇದ್ದಾರೆ. ಅವರು ತಮಗೆ ಬಂದ ಗೃಹಲಕ್ಷ್ಮಿ ಹಣವನ್ನೆಲ್ಲ ಒಟ್ಟು ಗೂಡಿಸಿ ಸೊಸೆಗೆ ಒಂದು ಪುಟ್ಟ ಅಂಗಡಿಯನ್ನೇ ಹಾಕಿಕೊಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಎಂ.ಎಂ.ನೀರಲಗಿ ಗ್ರಾಮದ ದಾಕ್ಷಾಯಿಣಿ ಅವರೇ ಅಂತಹ ಅತ್ತೆ. ಸುಮಾರು 10 ತಿಂಗಳಿಂದ ಬಂದ ಗೃಹಲಕ್ಷ್ಮಿ ಹಣವನ್ನೆಲ್ಲ ಒಟ್ಟುಗೂಡಿಸಿ ಸೊಸೆಗೆ ಜನರಲ್ ಮತ್ತು ಬೆಂಗಲ್ ಸ್ಟೋರ್ ಹಾಕಿಕೊಟಿದ್ದಾರೆ. 10 ಕಂತುಗಳ 20 ಸಾವಿರ ರೂಪಾಯಿ ಕೂಡಿಟ್ಟು ಸೊಸೆಗೆ ಈ ಹೊಸ ಅಂಗಡಿ ಇಟ್ಟುಕೊಟ್ಟಿದ್ದಾರೆ.
ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಮತ್ತು ದಾಕ್ಷಾಯಿಣ ಕಷ್ಟದಲ್ಲಿ ಬಂದವರು. ಸೊಸೆ ಕುಮಾರಿ ಮನೆ ನಿರ್ವಹಣೆ ಮಾಡಿ ಬೇರೆಯವರ ಜಮೀನುಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕುಮಾರಿಗೆ ಎರಡು ಮಕ್ಕಳು ಅವರನ್ನ ಬಿಟ್ಟು ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೊಸೆ ಕಷ್ಟ ನೋಡಲಾಗದೆ ಸೊಸೆಗೆ ಈ ರೀತಿ ಜನರಲ್ ಮತ್ತು ಬೆಂಗಲ್ ಸ್ಟೋರ್ ಹಾಕಿಕೊಟ್ಟಿದ್ದಾರಂತೆ ದಾಕ್ಷಾಯಿಣಿ.
ಸೊಸೆ ಜೀವನ ನಿರ್ವಹಣೆ ಸುಧಾರಿಸಲಿ ಎಂಬ ಕಾರಣಕ್ಕೆ ವ್ಯಾಪಾರ ಆರಂಭಿಸಲಿ ಎಂದು ಈ ರೀತಿ ಜನರಲ್ ಸ್ಟೋರ್ ಮಾಡಿಕೊಟ್ಟಿದ್ದೇನೆ. ಮುಂದೆ ಇದನ್ನ ಸೀರೆ ಸ್ಟೋರ್ ಸೇರಿದಂತೆ ಬೆಳೆಸುವ ಉದ್ದೇಶ ಇದೆ ಎಂದು ದಾಕ್ಷಾಯಿಣಿ ತಿಳಿಸಿದ್ದಾರೆ. ನಾನು ಮತ್ತು ಸೊಸೆ ಕುಮಾರಿ, ಬೇರೆ ಅತ್ತೆ ಸೊಸೆಯಂದಿರ ರೀತಿ ಇಲ್ಲ. ಬದಲಿಗೆ ತಾಯಿ ಮಗಳು ಇದ್ದಂತೆ ಇದ್ದೇವೆ. ಅವಳು ನನ್ನ ಬಿಟ್ಟು ಒಂದು ಕಪ್ ಚಹಾ ಸಹ ಕುಡಿಯುವದಿಲ್ಲ. ನಾನು ಅಷ್ಟೇ ಅವಳ ಬಿಟ್ಟು ಒಂದು ಕಪ್ ಚಹಾ ಕುಡಿಯುವದಿಲ್ಲಾ ಎಂದು ಹೆಮ್ಮೆಯಿಂದ ಹೇಳಿಕೊಳ್ತಾಋ ಅತ್ತೆ ದಾಕ್ಷಾಯಿಣಿ.
ಪ್ರಸ್ತುತ ಶ್ರಾವಣ ಮಾಸವಿದೆ ಹೀಗಾಗಿ ಶ್ರಾವಣ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್ ಗೆ ಪೂಜೆ ಮಾಡಿ ಚಾಲನೆ ನೀಡಿದ್ದಾರೆ. ನೀರಲಗಿ ಗ್ರಾಮದ ಮುತ್ತೈದಿಯರನ್ನು ಹಿರಿಯರನ್ನ ಕರೆದು ಅರಿಶಿನ ಕುಂಕುಮ ಕೊಟ್ಟು ಉಡಿ ತುಂಬಿ ಅಂಗಡಿ ವ್ಯಾಪಾರ ಚೆನ್ನಾಗಿ ಆಗಲಿ ಎಂದು ಪೂಜೆ ಸಲ್ಲಿಸಿದ್ದಾರೆ.
ಇವರಷ್ಟೇ ಅಲ್ಲ..ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಅಜ್ಜಿ ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ.
ಇದು ಸಿಎಂ ಸಿದ್ಧರಾಮಯ್ಯ ಅವರ ಗಮನಕ್ಕೂ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಜೀವವೊಂದು ತನಗೆ ಬಂದ ಗೃಹಲಕ್ಷ್ಮಿಯ ಹಣದಲ್ಲಿ ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿ, ಮುತ್ತೈದೆಯರಿಗೆ ಮಡಿಲು ತುಂಬಿರುವ ವೀಡಿಯೋವನ್ನು ನೋಡಿದೆ, ಆ ತಾಯಿ ಸಿದ್ದರಾಮಯ್ಯನಿಗೆ ಒಳಿತಾಗಲೆಂದು ಇದನ್ನು ಮಾಡುತ್ತಿದ್ದೇನೆಂದು ಹೇಳಿದ್ದು ಕೇಳಿ ಮನಸ್ಸು ತುಂಬಿಬಂತು ಎಂದಿದ್ದಾರೆ.



