ಕರ್ನಾಟಕದಲ್ಲಿ ಇರುವುದು 10 ನ್ಯೂಸ್ ಚಾನೆಲ್ಲು. ಸಬ್ ಟಿವಿ ಚಾನೆಲ್ಲಗಳೂ ಸೇರಿಸಿದರೆ 10ಕ್ಕಿಂತ ಹೆಚ್ಚೇ ಆಗಬಹುದಾದ ಮನರಂಜನಾ ಚಾನೆಲ್ಲುಗಳು. ಆದರೆ, ದೇಶಾದ್ಯಂತ ಸುಮಾರು 500 ಟಿವಿ ಚಾನೆಲ್ಲುಗಳಿವೆ. ಇತ್ತೀಚೆಗೆ ತಾನೇ ಎಂಟಿವಿ ಮ್ಯೂಸಿಕ್ ಬಂದ್ ಆಗಿದೆ. ಈಗ ನೋಡಿದರೆ 50ಕ್ಕೂ ಹೆಚ್ಚು ಟಿವಿ ಚಾನೆಲ್ಲುಗಳು ಲೈಸೆನ್ಸ್ ವಾಪಸ್ ನೀಡಿ, ತಮಗೆ ವಾಹಿನಿಯೇ ಬೇಡ ಎಂದು ನಿರ್ಧಾರ ಮಾಡಿವೆಯಂತೆ.
ಇದು ಗಾಳಿ ಸುದ್ದಿಯಂತೂ ಅಲ್ಲ. 50ಕ್ಕೂ ಹೆಚ್ಚು ಟಿವಿ ಚಾನೆಲ್ಲಗಳು ಬಂದ್ ಆಗುತ್ತಿರುವುದು ನಿಜ. 50 ಘಟಾನುಘಟಿ ಚಾನೆಲ್‌ಗಳು ತಮಗೆ ನೀಡಿರುವ ಲೈಸೆನ್ಸ್ ವಾಪಸ್ ನೀಡುತ್ತಿವೆ. ಚಾನೆಲ್‌ಗಳನ್ನು ಬಂದ್ ಮಾಡಲು ಮುಂದಾಗಿದೆ. ಇವುಗಳಲ್ಲಿ ಪ್ರಮುಖವಾದದ್ದು, ಜಿಯೋಸ್ಟಾರ್, ಜೀ ಎಂಟರ್‌ಟೈನ್‌ಮೆಂಟ್, ಈನಾಡು ಟೆಲಿವಿಷನ್, ಟಿವಿ ಟುಡೇ ನೆಟ್‌ವರ್ಕ್ ಮತ್ತು ಎಬಿಪಿ ನೆಟ್‌ವರ್ಕ್ ಸೇರಿವೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಉಲ್ಲೇಖಿಸಿಯೇ ಈ ವರದಿ ಸಿದ್ಧವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಸುಮಾರು 50 ದೂರದರ್ಶನ ಚಾನೆಲ್‌ಗಳು ತಮ್ಮ ಪರವಾನಗಿಗಳನ್ನು ಬಿಟ್ಟುಕೊಟ್ಟಿವೆ.ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾದ ಪೋಷಕ ಕಂಪೆನಿಯಾದ ಕಲ್ವರ್ ಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್ ಸಹ ಅದೇ ಚಾನೆಲ್‌ಗಳನ್ನು ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಮಾಡಲು ಸಚಿವಾಲಯದ ಅನುಮೋದನೆ ಪಡೆದ ನಂತರ 26 ಡೌನ್‌ಲಿಂಕಿಂಗ್ ಅನುಮತಿಗಳನ್ನು ಬಿಟ್ಟುಕೊಟ್ಟಿದೆ. ಪತ್ರಿಕೆ ಓದುವ ಒಂದಷ್ಟು ಹಳೆಯ ಮಂದಿ ಇಂದಿಗೂ ಅವುಗಳನ್ನೇ ಅವಲಂಬಿಸಿದ್ದಾರೆ. ಆದರೆ ಇಂದಿನ ಪೀಳಿಗೆಯ ಬಹಳಷ್ಟು ಮಂದಿ ಪತ್ರಿಕೆಗಳತ್ತ ಮುಖ ಮಾಡಿ ನೋಡುತ್ತಿಲ್ಲ. ಇದೀಗ ಟಿವಿ ಮಾಧ್ಯಮಗಳಿಗೂ ಇದೇ ಸ್ಥಿತಿ ಎದುರಾಗಿದೆ. ಸ್ಮಾರ್ಟ್ ಫೋನ್ ಎಫೆಕ್ಟ್, ಟಿವಿಗಳನ್ನು ನೋಡುವವರಿಲ್ಲ. ಸಹಜವಾಗಿಯೇ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ.
ಅತೀ ದೊಡ್ಡ ಕಾರಣ ಎಂದರೆ ಕೇಬಲ್ ಕನೆಕ್ಟಿವಿಟಿ ದುಬಾರಿ. ಕೇಬಲ್ ಕನೆಕ್ಷನ್ ಅಂದರೆ ಮನೆ ಮನೆಯಲ್ಲೂ ಸಿಗಬೇಕು ಎಂದರೆ ಕನೆಕ್ಟಿವಿಟಿ ಬೇಕು. ಅದಕ್ಕಾಗಿ ನೂರಾರು ಏಜೆನ್ಸಿಗವೆ. ಅವರವರ ಮಾರುಕಟ್ಟೆಗೆ ತಕ್ಕಂತೆ ಚಾನೆಲ್ಲಿನವರೇ ಕೇಬಲ್ ಕಂಪೆನಿಗಳಿಗೆ ಹಣ ಕೊಡಬೇಕು. ಕೇಬಲ್, ಡಿಟಿಎಚ್ ಕಂಪೆನಿಗಳು ಅತ್ತ ಗ್ರಾಹಕರಿಂದ, ಇತ್ತ ಕಂಪೆನಿಗಳಿಂದ ಎರಡೂ ಕಡೆ ಹಣ ಪಡೆಯುತ್ತವೆ. ಹೀಗೆ ಹಣ ಕೊಟ್ಟರೂ ಸಹ 100% ಕನೆಕ್ಟಿವಿಟಿ ಗ್ಯಾರಂಟಿ ಇಲ್ಲ. ಎಷ್ಟೋ ಚಾನೆಲ್ಲುಗಳಿಗೆ ಕನೆಕ್ಟಿವಿಟಿಗೆ ಖರ್ಚು ಮಾಡುವ ಹಣವೂ ಜಾಹೀರಾತುಗಳಿಂದ ಹುಟ್ಟುವುದಿಲ್ಲ. ಹೀಗಾಗಿ ಟಿವಿ ಚಾನೆಲ್ ಲೈಸೆನ್ಸ್ ಪಡೆದ ಕಂಪೆನಿಗಳೇ ಚಾನೆಲ್ ಲೈಸೆನ್ಸ್ ವಾಪಸ್ ಮಾಡಿದ್ದಾರೆ.
ಅಲ್ಲದೆ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣದಿಂದ ಜಾಹೀರಾತುಗಳು ಕೂಡ ಡಿಜಿಟಲ್ ಮಾಧ್ಯಮಕ್ಕೆ ವರ್ಗಾವಣೆ ಆಗಿರುವ ಕಾರಣದಿಂದ ಟಿವಿ ಚಾನೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಟಿವಿಗಳು ಜಾಹೀರಾತುಗಳಿಂದಲೇ ನಡೆಯುತ್ತಿರುವುದು. ಆದರೆ ಟಿವಿ ಚಾನೆಲ್ಗಳಿಗೆ ಹೋಲಿಸಿದರೆ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಜಾಹೀರಾತು ಶುಲ್ಕಗಳೂ ಕಡಿಮೆ ಇವೆ. ಪ್ರತಿಯೊಬ್ಬರ ಇಡೀ ಜಾತಕವೂ ಗೂಗಲ್ನಲ್ಲಿ ಲಭ್ಯ ಇರುವ ಕಾರಣ, ಅವರಿಗೆ ಏನು ಇಷ್ಟವೋ ಆ ಜಾಹೀರಾತುಗಳನ್ನೇ ತೋರಿಸುವ ತಾಕತ್ತು ಡಿಜಿಟಲ್ನಿಂದ ಸುಲಭವಾಗಿದೆ. ಇವೆಲ್ಲಾ ಕಾರಣಗಳಿಂದ ಈಗ ಚಾನೆಲ್‌ಗಳು ತಮ್ಮ ಪರವಾನಗಿಯನ್ನು ವಾಪಸ್ ಮಾಡುತ್ತಿವೆ.
ನ್ಯೂಸ್ ಪೋರ್ಟಲ್‌ನ ವರದಿಯ ಪ್ರಕಾರ, ಜಿಯೋಸ್ಟಾರ್ ಕಲರ್ಸ್ ಒಡಿಯಾ, ಎಂಟಿವಿ ಬೀಟ್ಸ್, ವಿಎಚ್ 1 ಮತ್ತು ಕಾಮಿಡಿ ಸೆಂಟ್ರಲ್‌ಗಳ ಚಾನೆಲ್ ಪರವಾನಗಿಗಳನ್ನು ಆಂತರಿಕ ವ್ಯವಹಾರ ನಿರ್ಧಾರದ ನಡೆಯನ್ನು ಉಲ್ಲೇಖಿಸಿ ಬಿಟ್ಟುಕೊಟ್ಟಿದೆ. ಚಾನೆಲ್‌ನ ಕಾರ್ಯಾಚರಣೆಗಳನ್ನು ಮುಚ್ಚಿದ ನಂತರ ಜೀ ಎಂಟರ್‌ಟೈನ್‌ಮೆಂಟ್ ಜೀ ಸೀ ಅನ್ನು ಮುಚ್ಚಿದೆ. ಎಂಟರ್10 ಮೀಡಿಯಾ ವ್ಯವಹಾರ ಉದ್ದೇಶಗಳು ಮತ್ತು ಸಂಪನ್ಮೂಲ ಯೋಜನಾ ನಿರ್ಬಂಧಗಳಿಂದಾಗಿ ಹೆಚ್ಚುವರಿ ಚಾನೆಲ್‌ಗಳನ್ನು ಪ್ರಾರಂಭಿಸುವ ತನ್ನ ಯೋಜನೆಗಳಿಂದ ಹಿಂದೆ ಸರಿದಿದೆ, ಆದರೆ ದಂಗಲ್ ಎಚ್‌ಡಿ ಮತ್ತು ದಂಗಲ್ ಒರಿಯಾದಂತಹ ಚಾನೆಲ್‌ಗಳ ಪರವಾನಗಿಗಳನ್ನು ಬಿಟ್ಟುಕೊಟ್ಟಿದೆ. ಎಚ್‌ಡಿ ಮತ್ತು ಪ್ರಾದೇಶಿಕ ವಿಸ್ತರಣೆಯನ್ನು ಪ್ರಾರಂಭಿಸುವ ತನ್ನ ಯೋಜನೆಗಳನ್ನು ಕಂಪನಿಯು ತಡೆಹಿಡಿದಿದೆ.



