ಬಿಹಾರದಲ್ಲಿ ಎನ್‌ಡಿಎ ದಿಗ್ವಿಜಯ ಯಾರಿಗೆ ರಿಲ್ಯಾಕ್ಸ್ ಕೊಟ್ಟಿದೆಯೋ.. ಸಿದ್ಧರಾಮಯ್ಯ ಅವರು ಆರಾಮ್ ಆಗುವಂತೆ ಮಾಡಿದೆ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು. ಅದಕ್ಕೆ ಕಾರಣಗಳೂ ಅಷ್ಟೇ. ಒಂದೆರಡಲ್ಲ. ಸಿದ್ದರಾಮಯ್ಯ ದೆಹಲಿಯಲ್ಲೇ ಇದ್ದಾರೆ. ಡಿಕೆ ಶಿವಕುಮಾರ್ ಕೂಡಾ ದೆಹಲಿಯಲ್ಲೇ ಇದ್ದಾರೆ. ಆದರೆ.. ರಾಹುಲ್ ಗಾಂಧಿ ಇಲ್ಲ. ನಾಟ್ ರೀಚಬಲ್. ಚುನಾವಣೆಯಲ್ಲಿ ಸೋಲು ಗೆಲುವು ಹೊಸದಲ್ಲ. ಆದರೆ ಸೋತಾಗ ಯಾರಿಗೂ ಕಾಣದಂತೆ ಮಾಯವಾಗುವುದು ಒಳ್ಳೆಯ ತಂತ್ರಗಾರಿಕೆ ಅಲ್ಲ. ಇದನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಬೇಕು. ಇದರ ಮಧ್ಯೆ ಒಂದಿಷ್ಟು ಬೆಳವಣಿಗೆಗಳಾಗಿವೆ.
ಸಿದ್ದರಾಮಯ್ಯ ರಿಲ್ಯಾಕ್ಸ್ ಏಕೆ ಎನ್ನುವುದಕ್ಕೆ ಕಾರಣಗಳಿವೆ. ಕಾಂಗ್ರೆಸ್ ನೇತೃತ್ವದ ಮಹಾಘಟಬಂದನ್ ಬಿಹಾರದಲ್ಲಿ ಅಧಿಕಾರಕ್ಕೆ ಏರಿದ್ದರೆ ಅಥವಾ ಉತ್ತಮ ಪ್ರದರ್ಶನ ತೋರಿದ್ದರೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿತ್ತು. ಆದರೆ, ಬಿಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದುಳಿದ ವರ್ಗಗಳ ಮತಗಳು ಕಾಂಗ್ರೆಸ್‌ಗೆ ಕೈಕೊಟ್ಟಿವೆ. ಸಿದ್ದರಾಮಯ್ಯ ಅವರನ್ನು ಇಳಿಸಿ ಡಿಕೆ ಶಿವಕುಮಾರ್‌ಗೆ ಪಟ್ಟ ಕಟ್ಟಿದರೆ ಅಹಿಂದ ಮತಗಳು ತಪ್ಪಿಹೋಗಬಹುದು ಎನ್ನುವ ಭೀತಿಯಂತೂ ಇದೆ. ಆದ್ದರಿಂದಾಗಿ ಕರ್ನಾಟಕದ ಅಹಿಂದ ನಾಯಕ ಸಿದ್ದರಾಮಯ್ಯ ಅವರ ಕುರ್ಚಿ ತಂಟೆಗೆ ಬಾರದೇ ಇರಬಹುದು.
ರಾಹುಲ್ ಗಾಂಧಿ ಪದೇ ಪದೇ ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತಾರೆ. ಈ ಬಾರಿಯೂ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಹೊಸದಲ್ಲ. ಆದರೆ ಸೋತಾಗ ಯಾರಿಗೂ ಕಾಣದಂತೆ ಮಾಯವಾಗುವುದು ಒಳ್ಳೆಯ ತಂತ್ರಗಾರಿಕೆ ಅಲ್ಲ. ಆದರೆ ಇದನ್ನು ಸ್ವತಃ ರಾಹುಲ್ ಗಾಂಧಿಯೇ ಅರ್ಥ ಮಾಡಿಕೊಳ್ಳಬೇಕು. ಹಾಗೆ ನೋಡಿದರೆ ಸೋನಿಯಾ ಗಾಂಧಿ ಎಂಟ್ರಿಯೇ ಬಹುದೊಡ್ಡ ಸೋಲಿನೊಂದಿಗೆ ಆಗಿತ್ತು. ಸೋನಿಯಾ ಹಠ ಹಿಡಿದು ಪಕ್ಷ ಕಟ್ಟಿದರು. ಆದರೆ ಈಗ ಇರುವ ರಾಹುಲ್ ಗಾಂಧಿಯವರ ಕಿವಿ ಬಂದ್. ಯಾರೂ ಅವರಿಗೆ ಬುದ್ದಿ ಹೇಳುವುದಿಲ್ಲ. ಹೇಳಿದವರಿಗೆ ಕೆ ಎನ್ ರಾಜಣ್ಣ ಸ್ಥಿತಿ ಎದುರಾಗಬಹುದು.
ಇನ್ನು ರಾಹುಲ್ ಗಾಂಧಿ ಅವರಿಗೆ ಸಿದ್ಧರಾಮಯ್ಯ ಅವರ ಕುರಿತು ಇರುವ ಪ್ರೀತಿ, ಡಿಕೆ ಬಗ್ಗೆ ಇಲ್ಲ ಎನ್ನುತ್ತವೆ ದೆಹಲಿ ಮೂಲಗಳು. ಡಿಕೆ ಅವರು ಸೋನಿಯಾ, ಪ್ರಿಯಾಂಕಾಗೆ ಆತ್ಮೀಯರಾಗಿರುವಷ್ಟು ರಾಹುಲ್ ಗಾಂಧಿ ಅವರಿಗೆ ಪ್ರೀತಿ ಪಾತ್ರರಲ್ಲ. ಹಾಗೆಂದು ಡಿಕೆ ಶಿವಕುಮಾರ್ ಅವರನ್ನು ಕಂಡರೆ ಆಗುವುದೇ ಇಲ್ಲ ಎನ್ನುವ ಪರಿಸ್ಥಿತಿಯೂ ಇಲ್ಲ. ಆದರೆ ಡಿಕೆ ಮತ್ತು ಸಿದ್ದು ಇಬ್ಬರನ್ನೂ ತಕ್ಕಡಿಯಲ್ಲಿಟ್ಟು ತೂಗಿದರೆ.. ರಾಹುಲ್ ಗಾಂಧಿ ಹಿಡಿದ ತಕ್ಕಡಿಯಲ್ಲಿ ಸಿದ್ಧರಾಮಯ್ಯ ಅವರ ತೂಕ ಹೆಚ್ಚು. ಹೀಗಾಗಿಯೇ ಸಿದ್ದು ರಿಲ್ಯಾಕ್ಸ್ ಆಗ್ತಿದ್ದಾರೆ ಎಂಬ ಸೂಚನೆಗಳಿವೆ.
ಆದರೆ.. ರಾಜ್ಯದ ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಶುಭಾಶಯ ಹೇಳಿ ಕಿಚಾಯಿಸುತ್ತಿದ್ದಾರೆ. ಇದು ಕಿಚ್ಚು ಹಚ್ಚಿಸುವ ತಂತ್ರವೇ ಹೊರತು ಬೇರೇನಲ್ಲ. ಆರ್ ಅಶೋಕ್ ಹೇಳಿಕೆ ಪ್ರಕಾರ ಮೂರು ದಿನಕ್ಕೆ ಹಾಲು ತುಪ್ಪ. ದೆಹಲಿಯ ಕಾಂಗ್ರೆಸ್ ನಾಯಕರಿಗೆ ಹಾಲು, ಸಿದ್ದರಾಮಯ್ಯಗೆ ತುಪ್ಪ. ಬಿಹಾರ ಚುನಾವಣೆ ಗೆದ್ದರೆ ಡಿಕೆಶಿ ನಮಗೆ ವರ ಅಂತ ಹೇಳಿದ್ದರು. ಕಾಂಗ್ರೆಸ್ ಪಕ್ಷದ ನಾಯಕ ವೀಕ್ ಆದ್ರೆ, ಇಲ್ಲಿ ಸಿದ್ದರಾಮಯ್ಯ ಸ್ಟ್ರಾಂಗ್ ಆಗುತ್ತಾರೆ. ಸಿದ್ದರಾಮಯ್ಯ ದೇಶದ ಎಲ್ಲಾ ಪಕ್ಷದಲ್ಲಿ ಇದ್ದವರು. ಜೆಡಿಯು, ಜೆಡಿಎಸ್, ಕಾಂಗ್ರೆಸ್, ಎಡಪಕ್ಷ ಎಲ್ಲದರಲ್ಲೂ ಇದ್ದರು. ರಾಹುಲ್ ಗಾಂಧಿಗೆ ಪುಂಗಿ ಊದಿ ಸಿದ್ದರಾಮಯ್ಯ ಆಡಿಸುತ್ತಾರೆ. ರಾಜಕೀಯ ವಿಷಯ, ನಿರ್ಧಾರ ಇಷ್ಟು ಸುಲಭವಾಗಿ ಡಿಕ್ಲೇರ್ ಆಗುವುದಿಲ್ಲ. ಡಿಸೈಡ್ ಕೂಡಾ ಆಗಲ್ಲ.



