ನರೇಂದ್ರ ಮೋದಿ ಪ್ರಧಾನಿಯಾಗಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ಮೋದಿ ಅಭಿಮಾನಿಗಳ ನಿರೀಕ್ಷೆಯಂತೆ ಮೋದಿಯವರೇ ಪ್ರಧಾನಿಯಾಗಿದ್ದರೂ.. ಸಮಧಾನ ಇಲ್ಲ. ಏಕೆಂದರೆ 400+ ಸೀಟುಗಳ ಗುರಿ ಇಟ್ಟುಕೊಂಡು ಹೊರಟಿದ್ದವರು, ಈಗ ಟಿಡಿಪಿ ಹಾಗೂ ಸಂಯುಕ್ತ ಜನತಾ ದಳದ ಕರುಣೆಯಲ್ಲಿ ಸರ್ಕಾರ ಮಾಡುವಂತಾಗಿದೆ. ಫಲಿತಾಂಶ ಬಂದ ಎರಡು ತಿಂಗಳ ಬಳಿಕ ಹೊಸ ಸಮೀಕ್ಷೆಯೊಂದು ಹೊರಬಿದ್ದಿದ್ದು ಮೋದಿ ಹಿಂಬಾಲಕರಿಗೆ ಒಂದಿಷ್ಟು ಆಘಾತಕಾರಿ ಮಾಹಿತಿಗಳಿವೆ. ಆದರೆ.. ಇದೇ ಸಮೀಕ್ಷೆ ರಾಹುಲ್ ಗಾಂಧಿ ಅಭಿಮಾನಿಗಳಿಗೆ ಸಂತೋಷಕರವಾಗಿಯೂ ಇದೆ.
ಸಮೀಕ್ಷೆಯಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಪ್ರಶ್ನೆಗೆ ಸಿಕ್ಕಿರುವ ಉತ್ತರ 299. ಅಂದರೆ ಈಗ ಗೆದ್ದಿರುವ ಸ್ಥಾನಗಳಿಗಿಂತ 6 ಸ್ಥಾನ ಹೆಚ್ಚು. ಆದರೆ, ಇಂಡಿಯಾ ಒಕ್ಕೂಟ ಒಂದು ಸ್ಥಾನ ಕಳೆದುಕೊಳ್ಳಲಿದೆ ಎಂಬುದು ಸಮೀಕ್ಷೆಯಲ್ಲಿ ಸಿಕ್ಕಿರುವ ಮಾಹಿತಿ.
ಇನ್ನು ಪ್ರಧಾನಿಯಾಗುವುದಕ್ಕೆ ಅರ್ಹ ನಾಯಕ ಯಾರು ಎಂಬ ಪ್ರಶ್ನೆಗೆ ಈಗಲೂ ಮೋದಿಯವರೇ ನಂ.1 ಆಯ್ಕೆಯಾಗಿದ್ದಾರೆ. ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಶೇ.49ರಷ್ಟು ಜನಪ್ರಿಯತೆ ಹೊಂದಿದ್ದಾರೆ. ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿರುವ ಪ್ರಮಾಣ ಶೇ.22.4ರಷ್ಟಿದೆ. ಆದರೆ.. ಒಟ್ಟಾರೆ ನಂ.1 ಸ್ಥಾನದಲ್ಲಿದ್ದರೂ.. ಮೋದಿ ಅಭಿಮಾನಿಗಳು ಖುಷಿ ಪಡುವ ವಿಷಯವೇನೂ ಇಲ್ಲ.
ಏಕೆಂದರೆ.. ಚುನಾವಣೆಗೂ ಮುನ್ನ ನಡೆದ ಸಮೀಕ್ಷೆಯಲ್ಲಿ ಇದ್ದ ಜನಪ್ರಿಯತೆಗಿಂತ ಮೋದಿಯವರ ಪರ ಮತ ಶೇ.8ರಷ್ಟು ಕಡಿಮೆಯಾಗಿದ್ದರೆ, ರಾಹುಲ್ ಗಾಂಧಿಯವರ ಪರ ಶೇ.6ರಷ್ಟು ಇಂಪ್ರೂವ್‌ಮೆಂಟ್ ಇದೆ. ಇದರ ಅರ್ಥ ಮೋದಿ ಜನಪ್ರಿಯತೆ ಕುಸಿತ ಕಾಣುತ್ತಿದ್ದರೆ, ರಾಹುಲ್ ಗಾಂಧಿಯವರ ಜನಪ್ರಿಯತೆ ದಿನೇ ದಿನೇ ಏರುತ್ತಲೇ ಇದೆ.
ಇನ್ನು ಮೋದಿಯವರ ನಂತರ ಪ್ರಧಾನಿ ಹುದ್ದೆಗೆ ಬಿಜೆಪಿಯಲ್ಲಿ ಬೆಸ್ಟ್ ಯಾರು ಎಂಬ ಪ್ರಶ್ನೆಗೂ ಉತ್ತರ ಹುಡುಕುವ ಪ್ರಯತ್ನ ನಡೆದಿದೆ. ಮೋದಿಯವರ ನಂತರ ಅಮಿತ್ ಶಾ ಪ್ರಧಾನಿ ಅಭ್ಯರ್ಥಿ ಎಂಬುದಕ್ಕೆ ಹೆಚ್ಚು ಜನಮತ ಸಿಕ್ಕಿದೆ. ಅಮಿತ್ ಶಾ ನಂತರ ಯೋಗಿ ಆದಿತ್ಯನಾಥ್ ಮತ್ತು ನಿತಿನ್ ಗಡ್ಕರಿ, ರಾಜ್ ನಾಥ್ ಸಿಂಗ್ ಅವರ ಹೆಸರೂ ಇದೆ.
ಮೋದಿ ನಂತರ ಅಮಿತ್ ಶಾ ಉತ್ತಮ ಪ್ರಧಾನಿಯಾಗಬಲ್ಲರು ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.25ರಷ್ಟು ಜನ ಹೇಳಿದ್ದರೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪರ ಶೇ.19ರಷ್ಟು ಜನ ವೋಟ್ ಹಾಕಿದ್ದಾರೆ. ರಸ್ತೆ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಅಪರೂಪದ ಸಾಧನೆಯನ್ನೇ ಬರೆದಿರುವ ನಿತಿನ್ ಗಡ್ಕರಿ ಅವರು 3ನೇ ಆಯ್ಕೆ. ಗಡ್ಕರಿ ಪರ ಶೇ.13ರಷ್ಟು ಜನ ಮತ ನೀಡಿದ್ದಾರೆ. ಮಧ್ಯಪ್ರದೇಶ ಸಿಎಂ ಆಗಿದ್ದ ಈಗ ಕೇಂದ್ರ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಅವರ ಪರ ತಲಾ ಶೇ.5ರಷ್ಟು ಜನ ಬೆಂಬಲ ವ್ಯಕ್ತವಾಗಿದೆ.
ಅಂದಹಾಗೆ ಕಳೆದ ಎರಡು ಸಮೀಕ್ಷೆಗಳಿಗೆ ಹೋಲಿಸಿದರೆ.. ಅಮಿತ್ ಶಾ ಅವರ ಜನಪ್ರಿಯತೆ ರೇಟಿಂಗ್ ಕಡಿಮೆಯಾಗಿದೆ ಎಂದೇ ಹೇಳಬೇಕು. ಹಿಂದಿನ ಸಮೀಕ್ಷೆಗಳಲ್ಲಿ ಅಮಿತ್ ಶಾ ಪರ ಶೇ.29 ಹಾಗೂ ಶೇ.28 ಜನಾಭಿಪ್ರಾಯ ವ್ಯಕ್ತವಾಗಿತ್ತು. ಉತ್ತರ ಭಾರತಕ್ಕೆ ಹೋಲಿಸಿದರೆ, ಅಮಿತ್ ಶಾ ಅವರನ್ನು ದಕ್ಷಿಣ ಭಾರತದಲ್ಲಿ ಹೆಚ್ಚು ಜನ ಒಪ್ಪಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಶಾ ಪರ ಶೇ.31ರಷ್ಟು ಅಪ್ರೂವಲ್ ರೇಟಿಂಗ್ ಇದೆ.
ಇನ್ನು ಯೋಗಿ ಆದಿತ್ಯನಾಥ್ ಅವರ ಪರ ಶೇ.25ರಷ್ಟಿದ್ದ ಒಪ್ಪಿಗೆಯ ಅಭಿಪ್ರಾಯ ಈಗ ಶೇ.19ಕ್ಕೆ ಇಳಿದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ದಯನೀಯ ವೈಫಲ್ಯವೂ ಇದಕ್ಕೆ ಕಾರಣವಾಗಿರಬಹುದು.
ನಿತಿನ್ ಗಡ್ಕರಿ ಅವರ ಅಪ್ರೂವಲ್ ರೇಟಿಂಗ್ ಏರಿಕೆಯಾಗಿದೆ. ಅಂದಹಾಗೆ ಇದೆಲ್ಲವೂ ಇಂಡಿಯಾ ಟುಡೇಯವರು ನಡೆಸಿರುವ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ವಿವರ.



