ರಾಜಗುರು ಎಂದೇ ಖ್ಯಾತರಾಗಿರುವ ದ್ವಾರಕಾನಾಥ್ ಗುರೂಜಿ, ರಾಜಕೀಯ ಭವಿಷ್ಯ ನುಡಿದಿದ್ದಾರೆ. ಜೊತೆಗೆ ಹಲವು ವಿಷಯಗಳ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ದ್ವಾರಕಾನಾಥ್ ಗುರೂಜಿ ಅವರ ಪ್ರಕಾರ ಜಮ್ಮು-ಕಾಶ್ಮೀರ, ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಯ ಬಿರುಗಾಳಿ ಬೀಸಲಿದೆ. ಅಕ್ಟೋಬರ್ 9ರಂದು ಗುರು ವಕ್ರ ಸ್ಥಾನಕ್ಕೆ ಹೋಗುವುದರಿಂದ ದೇಶದ ರಾಜಕಾರಣದಲ್ಲಿ ಹಲವು ಬದಲಾವಣೆಗಳ ಸಾಧ್ಯತೆ ಇದೆಯಂತೆ.
ಅಲುಗಾಡಲಿದೆ ಮೋದಿ ಕುರ್ಚಿ :
ನ.15ರಿಂದ ಶನಿ ವಕ್ರತ್ವ ಬಿಟ್ಟು ಮುಂದಕ್ಕೆ ಹೋಗುತ್ತಾನೆ. 2025ರ ಮಾ. 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಅದು ಗುರು ಮನೆ. ಗುರು ಬಲವಿಲ್ಲದ ನರೇಂದ್ರ ಮೋದಿ ಅವರಿಗೆ ಹಲವು ಕಷ್ಟಗಳು ಎದುರಾಗಲಿವೆ. ಪ್ರಧಾನಿ ಕುರ್ಚಿ ಅಲುಗಾಡಿಸಲು ಸಂಚುಗಳು ನಡೆಯಲಿವೆ. ರಾಷ್ಟ್ರೀಯ ಪಕ್ಷಗಳಲ್ಲಿ ಆಂತರಿಕ ಕಲಹ ಶುರುವಾಗವ ಲಕ್ಷಣಗಳು ಗೋಚರಿಸುತ್ತಿವೆ.
ಹಿಂದೂ ಧರ್ಮ ರಕ್ಷಣೆ ಹಾಗೂ ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಮೋದಿ ಹಂತ ಹಂತವಾಗಿ ಜನರ ನಂಬಿಕೆ ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಹೀಗಾಗಿ, ಗೆಲುವು ದಕ್ಕುತ್ತಿಲ್ಲ. ಬಿಜೆಪಿ ಬಲ ಹೀನವಾಗುತ್ತಿರುವುದು ಒಳ್ಳೆಯ ಬೆಳವಣಿಯಂತೂ ಖಂಡಿತಾ ಅಲ್ಲ. ಇದು ಆತಂಕಕಾರಿ. ವ್ಯಕ್ತಿ ನಿಷ್ಠೆಯೇ ಜಾಸ್ತಿಯಾಗಿದೆ. ಹೀಗಾಗಿ ಪಕ್ಷದ ಬೇರುಗಳು ಸಹಾಯ ಮಾಡುತ್ತಿಲ್ಲ. ಈ ಬಗ್ಗೆ ಸಮಗ್ರವಾಗಿ ಚಿಂತಿಸಿ ಎರಡನೇ ಹಂತದ ನಾಯಕರನ್ನು ಮುನ್ನಲೆಗೆ ತಂದರೆ ಒಳ್ಳೆಯದರು. ಇಲ್ಲದೇ ಹೋದರೆ ಬಿಜೆಪಿಗೆ ಕಾಂಗ್ರೆಸ್ ರೀತಿ 50 ವರ್ಷ ಅಧಿಕಾರ ನಡೆಸುವುದು ಸಾಧ್ಯ ಇಲ್ಲ.
ಸಿದ್ದರಾಮಯ್ಯ ಕುರ್ಚಿ ಉಳಿಯುತ್ತಾ..?
ಈ ಬಗ್ಗೆ ಹೌದು ಅಥವಾ ಇಲ್ಲ ಎಂದು ಸ್ಪಷ್ಟವಾಗಿ ಏನನ್ನೂ ಹೇಳದ ದ್ವಾರಕಾನಾಥ್ ಗುರೂಜಿ ನವೆಂಬರ್ 15ರ ಬಳಿಕ ಕೆಲ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ ಎನ್ನುತ್ತಾರೆ. ಶನಿ ಹಾಗೂ ಗುರು ಗ್ರಹಗಳ ಸ್ಥಾನಪಲ್ಲಟದ ಲೆಕ್ಕಾಚಾರದ ಮೇಲೆ ಹೇಳುವುದಾದರೆ ರಾಜ್ಯ ರಾಜಕಾರಣದಲ್ಲಿಯೂ. ರಾಜ್ಯ ಆಳುವವರಿಗೆ ದೈವ ಬಲ ಕುಸಿಯುತ್ತದೆ. ಚಿಂತೆ, ಸಮಸ್ಯೆ, ಅಧಿಕಾರ ದೋಷ, ಹೆಸರಿಗೆ ಕಳಂಕ ಬರುತ್ತದೆ. ಆದರೆ, ಈ ಬೆಳವಣಿಗೆಯಿಂದ ಪ್ರತಿ ಪಕ್ಷಗಳಿಗೆ ಯಾವುದೇ ಲಾಭ ಆಗುವುದಿಲ್ಲ. ಏನೇ ಬದಲಾವಣೆಗಳಾದರೂ ಅಧಿಕಾರದಲ್ಲಿರುವ ಪಕ್ಷವೇ ಆಡಳಿತದಲ್ಲಿ ಮುಂದುವರಿಯವ ಸನ್ನಿವೇಶ ಬರಲಿದೆ. ಅಂದರೆ ರಾಜಗುರು ಪ್ರಕಾರ ಸಿಎಂ ಬದಲಾವಣೆಯಾಗುತ್ತದೆ, ಆದರೆ ಕಾಂಗ್ರೆಸ್ಸಿನವರೇ ಸಿಎಂ ಆಗುತ್ತಾರೆ. ಯಾವ ಆಪರೇಷನ್ ನಡೆಯುವ ಸಾಧ್ಯತೆ ಇಲ್ಲ.ಇದೇ ವೇಳೆ ಮೋದಿ ನೇತೃತ್ವದ ಸರ್ಕಾರಕ್ಕೆ ಏಕೆ ಬಹುಮತ ಬರಲಿಲ್ಲ ಎನ್ನುವುದರ ವಿಶ್ಲೇಷಣೆ ಮಾಡಿದ್ದಾರೆ. ಶಂಕರಾಚಾರ್ಯರು ರಚಿಸಿದ ಪೀಠಗಳಿಂದ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿಸಬೇಕಿತ್ತು. ಆದರೆ, ಸಾಧು, ಸಂತರಿಂದ ಮಾಡಿಸಲಾಗಿದೆ. ಗುರುಗಳಿಲ್ಲದೆ ಗುರಿ ಮುಟ್ಟಲಾಗಲ್ಲ. ಇದರಿಂದಲೇ ಬಿಜೆಪಿ ಪೂರ್ಣ ಬಹುಮತದ ಗುರಿ ತಲುಪಲಿಲ್ಲ ಎನ್ನುವುದು ರಾಜಗುರು ವಿಶ್ಲೇಷಣೆ.
ಅಲ್ಲದೆ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ನಡೆದ ವಂಚನೆಯನ್ನೂ ಪ್ರಸ್ತಾಪ ಮಾಡಿದ್ದಾರೆ. ರಾಷ್ಟ್ರದ ಬುನಾದಿಯೇ ದೇವರು, ಧರ್ಮ. ದೇವರಿಗೆ ದ್ರೋಹ ಮಾಡಿದರೆ ಜನರನ್ನು ಹೇಗೆ ಕಾಪಾಡುತ್ತಾನೆ. ತಿರುಪತಿಯ ವೆಂಕಟೇಶ್ವರನಿಗೆ ಕಲಬೆರಕೆ ತುಪ್ಪದಲ್ಲಿ ಸಿದ್ಧಪಡಿಸಿದ ಲಡ್ಡುವನ್ನು ನೈವೇದ್ಯ ಇಟ್ಟಿದ್ದು ಅಕ್ಷಮ್ಯ. ಇದನ್ನು ಮಾಡಿದವರನ್ನು ದೇವರು ಶಿಕ್ಷಿಸದೆ ಬಿಡಲ್ಲ. ಇದು ಮುಂದಿನ 8-10 ತಿಂಗಳಲ್ಲಿ ವೇದ್ಯವಾಗುತ್ತದೆ. ಪ್ರಜಾ ರಕ್ಷಣೆ ಮಾಡುವ ಮಹಾ ವಿಷ್ಣುವಿಗೆ ತಾತ್ಸಾರ ತೋರಿ, ಪ್ರಸಾದದ ರೂಪದಲ್ಲಿ ಸೇವಿಸುವ ಆಹಾರ ಪದಾರ್ಥವನ್ನು ಕಲಬೆರಕೆ ಮಾಡಿ ಪ್ರಜೆಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಲಾಗಿದೆ. ಪ್ರಜೆಗಳ ಶಾಪವು ಆಳುವವರಿಗೂ ತಟ್ಟಲಿದೆ” ಎಂದು ನುಡಿದಿದ್ದಾರೆ.



