ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರ ಆಯ್ಕೆ ಆದ ದಿನದಿಂದಲೂ ಕೆಲವು ನಾಯಕರು ವಿಜಯೇಂದ್ರ ಅವರನ್ನು ಒಪ್ಪಿಕೊಳ್ಳುತ್ತಿಲ್ಲ. ಅರವಿಂದ ಬೆಲ್ಲದ್, ವಿ.ಸೋಮಣ್ಣ, ರಮೇಶ್ ಜಾರಕಿಹೊಳಿ, ರಮೇಶ್ ಜಿಗಜಿಣಗಿ, ಅರವಿಂದ ಲಿಂಬಾವಳಿ ಮೊದಲಾದವರೆಲ್ಲ ಹೊಟ್ಟೆಯೊಳಗಿನ ಸಿಟ್ಟು ಬಾಯಿಗೆ ಬರದಂತೆ ನೋಡಿಕೊಂಡು ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ಸಿಟಿ ರವಿ, ಸುನಿಲ್ ಕುಮಾರ್ ಮೊದಲಾದವರು ಪಕ್ಷಕ್ಕೆ ನಿಷ್ಠರು. ಯಾವುದೇ ಅಸಮಾಧಾನಗಳಿದ್ದರೂ ಹೊರಗೆ ತೋರಿಸುವುದೂ ಇಲ್ಲ. ಪಕ್ಷದ ನಿಯಮ ಮೀರುವುದೂ ಇಲ್ಲ. ಆದರೆ ಯತ್ನಾಳ್ ಹಾಗಲ್ಲ,
ವಿಜಯೇಂದ್ರ ಅವರು ಕಾಟಾಚಾರಕ್ಕೆ ಬಂದು ಹಾರ ಹಾಕುವುದಾಗಲಿ, ನಾಟಕೀಯವಾಗಿ ಮಾಧ್ಯಮಗಳ ಮುಂದೆ ಪೋಸ್ ಕೊಡುವುದಾಗಲಿ ಬೇಡ. ನಾವು ಪಕ್ಷ ನಿಷ್ಠರಿದ್ದೇವೆ, ಲೋಕಸಭೆಯಲ್ಲಿ ಶ್ರಮಿಸುತ್ತೇವೆ. ಮೋದಿ ಗೆಲುವು ನಮಗೆ ಮುಖ್ಯ. ಇದಕ್ಕೆ ದೇವರು-ತಾಯಿ ಸಾಕ್ಷಿ ಎಂದಿದ್ದಾರೆ ಬಸನಗೌಡ ಪಾಟೀಲ ಯತ್ನಾಳ್. ವಿಜಯೇಂದ್ರ ಅವರು ನಮ್ಮ ಮನೆಗೆ ಬಂದು ಎಲ್ಲ ಸರಿಯಾಗಿದೆ ಎಂದು ಹೇಳುವುದು ಬೇಡ. ನನ್ನನ್ನು ಪಕ್ಷದಿಂದ ಹೊರಹಾಕುವಲ್ಲಿ ಅವರ ಪಾತ್ರವೇನು ಎಂಬುದೂ ಗೊತ್ತಿದೆ. ಮಂತ್ರಿ ಮಾಡದೆ ನನ್ನನ್ನು ತುಳಿಯುವ ಪ್ರಯತ್ನವಾಗಿದೆ. ನಮ್ಮದೇ ಸರ್ಕಾರ ಇದ್ದಾಗ ವಿಜಯಪುರ ಅಭಿವೃದ್ಧಿಗೆ ನೀಡಿದ್ದ ₹125 ಕೋಟಿ ಹಣ ವಾಪಸ್ ಪಡೆದಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಾನು ನೀಡಿದ ಪತ್ರಗಳನ್ನು ವಿಜಯೇಂದ್ರ ತನ್ನ ಬಳಿ ಇಟ್ಟುಕೊಂಡಿರುವುದು ಎಲ್ಲವೂ ಗೊತ್ತಿದೆ. ವಿಜಯೇಂದ್ರ ಮಾಡಿರುವ ಕೆಲಸಗಳ ಎಲ್ಲ ಮಾಹಿತಿ ನನ್ನ ಬಳಿ ಇದೆ ಎಂದಿರುವ ಯತ್ನಾಳ್ . ವಿಜಯೇಂದ್ರ ಈ ಹಿಂದೆ ನನಗೆ ಏನೆಲ್ಲ ಮಾಡಿದ್ದಾರೆ ಎಂಬುದು ಗೊತ್ತಿದೆ. ಅಧಿಕಾರ ಇದ್ದಾಗ ಎಲ್ಲದಕ್ಕೂ ಅಡ್ಡಗಾಲು ಹಾಕಿದ್ದರು. ನಗರ, ಜಿಲ್ಲೆಗೆ ಬಂದ ಅನುದಾನ ವಾಪಸ್ ಪಡೆದಿದ್ದರು. ಈಗ ಅವರು ಬಂದು ಭೇಟಿಯಾಗಿ, ಸರಿ ಮಾಡೋಣ ಅಂದರೆ ಅದೆಲ್ಲ ಆಗಲ್ಲ. ಲೋಕಸಭೆ ಚುನಾವಣೆ ಮುಗಿದ ನಂತರ ಎಲ್ಲ ನಿರ್ಧಾರ ಆಗಲಿದೆ. ಆಗ ಎಲ್ಲವೂ ಗೊತ್ತಾಗುತ್ತದೆ ಎಂದಿದ್ದಾರೆ.
ಅಲ್ಲಿಗೆ ಯಡಿಯೂರಪ್ಪ ಸಿಎಂ ಆಗಿದ್ಧಾಗ ಉಗುಳಲೂ ಆಗದ ನುಂಗಲೂ ಆಗದ ಬಿಸಿ ತುಪ್ಪವಾಗಿದ್ದ ಬಸನಗೌಡ ಪಾಟೀಲ ಯತ್ನಾಳ್ ಇದೀಗ ವಿಜಯೇಂದ್ರ ಅವರು ರಾಜ್ಯಾಧ‍್ಯಕ್ಷರಾದಾಗಲೂ ಕಟುಕುವುದನ್ನು ಮುಂದುವರೆಸಿದ್ದಾರೆ.



