ಪ್ರಧಾನಿ ನರೇಂದ್ರ ಮೋದಿ. (PM Narendra Modi) ಅದ್ಯಾವಾಗ ಗುಜರಾತ್ ಸಿಎಂ ಆದರೋ, ಸೋತೇ ಇಲ್ಲ. ಇಂತಹ ಮೋದಿ ಕೇಂದ್ರದಲ್ಲೂ ಸತತ ಎರಡು ಬಾರಿ ಭಾರಿ ಬಹುಮತದೊಂದಿಗೆ ಗೆದ್ದು ಪ್ರಧಾನಿಯಾಗಿದ್ದಾರೆ. 3ನೇ ಬಾರಿಗೆ ಅಧಿಕಾರದ ಗದ್ದುಗೆಗೇರಲು ಬಿಡುವುದಿಲ್ಲ ಎಂಬ ಹಠಕ್ಕೆ ಬಿದ್ದಿರುವ ಎದುರಾಳಿಗಳೆಲ್ಲ ಒಂದಾಗಿ ಮೋದಿ ವಿರುದ್ಧ ಒಕ್ಕೂಟ ರಚಿಸುತ್ತಿವೆ. ವಿಶೇಷವೆಂದರೆ ರಾಜಕೀಯ ಪಕ್ಷಗಳ ಒಗ್ಗೂಡುವಿಕೆಯಲ್ಲಿ ಗೆದ್ದೂ ಇದ್ದಾರೆ. ಈ ಹಿಂದೆ ಮಹಾಘಟಬಂಧನ್`ಗೆ (Mahaghatabandhan) ನಡೆದಿದ್ದ ತಯಾರಿಯಲ್ಲಿ 15 ಪಕ್ಷಗಳ ಮುಖಂಡರಷ್ಟೇ ಭಾಗವಹಿಸಿದ್ದರು. ಇದೀಗ ಆ ಸಂಖ್ಯೆ 26ಕ್ಕೆ ಏರಿದೆ. ಅತ್ತ (NDA) ಎನ್`ಡಿಎ ಮಿತ್ರಕೂಟ 38 ಪಕ್ಷಗಳ ಒಕ್ಕೂಟದ ಸಭೆ ನಡೆಸುತ್ತಿದೆ.
ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ (Taj westend) ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ (Sonia Gandhi, Rahul Gandhi) 26 ಆಹ್ವಾನಿತ ವಿಪಕ್ಷಗಳ ಪೈಕಿ ಅನೇಕ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ. ಇಡೀ ಸಭೆಯ ನೇತೃತ್ವವೇ ಮಲ್ಲಿಕಾರ್ಜುನ ಖರ್ಗೆಯವರದ್ದು. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹಾಗೂ ಮುಖಂಡ ಟಿ.ಆರ್. ಬಾಲು (ಡಿಎಂಕೆ), ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಜೆಡಿಯು), ಆರ್ಜೆಡಿ ಅಧ್ಯಕ್ಷ ಲಾಲು ಯಾದವ್ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (ಆರ್ಜೆಡಿ), ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸಂಸದರಾದ ಸಂಜಯ ಸಿಂಗ್, ರಾಘವ ಛಡ್ಡಾ (ಆಪ್), ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಟಿಎಂಸಿ), ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ, ಸಂಸದ ಸಂಜಯ ರಾವುತ್ ಹಾಗೂ ಮಾಜಿ ಸಚಿವ ಆದಿತ್ಯ ಠಾಕ್ರೆ (ಶಿವಸೇನೆ ಉದ್ಧವ್ ಬಣ), ಡಿ. ರಾಜಾ (ಸಿಪಿಐ), ಜಯಂತ್ ಚೌಧರಿ (ಆರ್ಎಲ್ಡಿ), ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ), ಸೀತಾರಾಂ ಯೆಚೂರಿ (ಸಿಪಿಎಂ), ಮೆಹಬೂಬಾ ಮುಫ್ತಿ (ಪಿಡಿಪಿ), ಒಮರ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್) ಸೇರಿದಂತೆ ಘಟಾನುಘಟಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲರ ಗುರಿ ಒಂದೇ. ನರೇಂದ್ರ ಮೋದಿಯನ್ನು 2024ರಲ್ಲಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯುವುದು. ವಿಚಿತ್ರವೆಂದರೆ ಇದೇ..
ಮೋದಿ ವಿರುದ್ಧ ಯುದ್ಧದಲ್ಲಿ ಮಮತಾ ಬ್ಯಾನರ್ಜಿ ಇದ್ದಾರೆ. ಅವರು ಆಧಿಕಾರದಲ್ಲಿರುವುದು ಪ.ಬಂಗಾಳದಲ್ಲಿ ಮಾತ್ರ. ಅಲ್ಲಿ ಅವರ ಎದುರಾಳಿ ಇದೇ ಸಿಪಿಎಂ, ಸಿಪಿಐ ಮತ್ತು ಕಾಂಗ್ರೆಸ್. ಕಾರಣ ಮೋದಿ.
ಅತ್ತ ಕೇರಳದಲ್ಲಿ ಕಾಂಗ್ರೆಸ್ ಹೋರಾಟ ನಡೆಸುವುದು ಎಡಪಕ್ಷಗಳ ವಿರುದ್ಧವೇ. ವಿಚಿತ್ರವೆಂದರೆ ಕೇರಳದಲ್ಲಿ ಶತ್ರುಗಳಾಗಿದ್ದವರೆಲ್ಲ ಇಲ್ಲಿ ಮಿತ್ರರಾಗಿದ್ದಾರೆ. ಕಾರಣ ಮೋದಿ.
ಇನ್ನು ಪಂಜಾಬ್`ನಲ್ಲಿ ಆಮ್ ಆದ್ಮಿಗೆ ಕಾಂಗ್ರೆಸ್ಸೇ ಎದುರಾಳಿ. ದೆಹಲಿಯಲ್ಲಿ ಕಾಂಗ್ರೆಸ್ ಧೂಳೀಪಟವಾಗಿದ್ದರೂ, ಆಮ್ ಆದ್ಮಿ ಅಧಿಕಾರಕ್ಕೆ ಬಂದಿದ್ದೇ ಕಾಂಗ್ರೆಸ್`ನ್ನು ಸೋಲಿಸುವ ಮೂಲಕ. ಈಗ ಆ ಎರಡೂ ಪಕ್ಷಗಳು ಒಂದೇ ವೇದಿಕೆಯಲ್ಲಿ ಮಿತ್ರತ್ವದ ಮಾತನ್ನಾಡುತ್ತಿವೆ. ಕಾರಣ ಮೋದಿ.
ಬಿಹಾರದಲ್ಲಂತೂ ಇನ್ನೂ ವಿಚಿತ್ರ. ನಿತೀಶ್ ಕುಮಾರ್ ಅವರ ಜೆಡಿಯು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಗೆಲ್ಲುತ್ತದೆ. ಆರ್.ಜೆ.ಡಿ. ಜೊತೆ ಸರ್ಕಾ ಮಾಡುತ್ತದೆ. ಆರ್.ಜೆ.ಡಿ. ಜೊತೆ ಮೈತ್ರಿ ಮಾಡಿಕೊಂಡು ಗೆದ್ದು ಬಿಜೆಪಿ ಜೊತೆ ಸರ್ಕಾರ ಮಾಡುತ್ತದೆ. ನಿತೀಶ್ ಕುಮಾರ್ ಯಾವ ಸಮಯದಲ್ಲಿ ಯಾವ ದಿಕ್ಕಿಗೆ ಬೇಕಾದರೂ ಹೋಗಬಹುದು. ಈಗ ಅಲ್ಲಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಗೆದ್ದು, ಇದೀಗ ಲಾಲೂ ಪ್ರಸಾದ್ ಯಾದವ್ ಜೊತೆ ಸರ್ಕಾರ ಮಾಡಿದ್ದಾರೆ. ಕಾರಣವೇನೆಂದರೆ ಮೋದಿ.
ಅತ್ತ ಮಹಾರಾಷ್ಟ್ರದಲ್ಲಿ ಕೂಡಾ. ಉದ್ಧವ್ ಠಾಕೆ ಬಣದ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಜೊತೆ ಸೇರಿದೆ. ಅವರಿಗೂ ಅಷ್ಟೇ.. ಮೋದಿ ಸೋಲಬೇಕು.
ಇತ್ತ ತಮಿಳುನಾಡಿನಲ್ಲಿ ಡಿಎಂಕೆ ಇದೆ. ಈ ಹಿಂದೆ ಈ ಪಕ್ಷ ಎನ್`ಡಿಎ ಅಂಗಪಕ್ಷವಾಗಿತ್ತು. ಅಫ್`ಕೋರ್ಸ್ ಯುಪಿಎನಲ್ಲೂ ಡಿಎಂಕೆ ಇತ್ತು. ಉತ್ತರ ಪ್ರದೇಶದಲ್ಲಿ ಕೂಡಾ ಅಷ್ಟೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಂದಾಗಿ ಬಂದಿವೆ.
ಜಮ್ಮು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಮೆಹಬೂಬಾ ಮುಫ್ತಿ ಅವರ ಪಿಡಿಪಿ, ಇಷ್ಟೂ ವರ್ಷಗಳಲ್ಲಿ ಶತ್ರುಗಳಂತೆ ಹೊಡೆದಾಡಿಕೊಳ್ಳುತ್ತಿದ್ದವರೇ. ಅವರೂ ಈಗ ಒಟ್ಟಿಗೇ ಬಂದಿದ್ದಾರೆ. ಕಾರಣ ಮೋದಿ.
ಅಂದಹಾಗೆ ಇಲ್ಲಿ ಗೆಲ್ಲುವವರಿಗಷ್ಟೇ ಮಣೆ. ಕಳೆದ ಬಾರಿ ಇದೇ ರೀತಿಯ ಮಹಾಘಟಬಂಧನ್`ನಲ್ಲಿದ್ದ ಮಾಯಾವತಿಯ ಬಿಎಸ್`ಪಿಯನ್ನಾಗಲೀ, ದೇವೇಗೌಡರ ಜೆಡಿಎಸ್`ನ್ನಾಗಲೀ ಕರೆದೂ ಇಲ್ಲ. ಲೆಕ್ಕಕ್ಕೂ ಇಟ್ಟುಕೊಂಡಿಲ್ಲ. ಗೆಲ್ಲುವವರಿಗಷ್ಟೇ ಮರ್ಯಾದೆ. ಕಳೆದ ಬಾರಿ ಕಾಂಗ್ರೆಸ್ಸಿಗೆ ಉತ್ತರ ಪ್ರದೇಶದಲ್ಲಿ ಇದೇ ಗತಿಯಾಗಿತ್ತು. ಎರಡು ಸೀಟು ಕೊಡ್ತೇವೆ, ಬೇಕಾದ್ರೆ ನಿಲ್ಲಿ ಎಂಬ ಹಠಕ್ಕೆ ಬಿದ್ದಿತ್ತು ಸಮಾಜವಾದಿ ಪಾರ್ಟಿ. ಆ ಎರಡರಲ್ಲಿ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಗೆದ್ದರೆ, ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತರು. ಆದರೆ ಈಗ ಕರ್ನಾಟಕದ ಗೆಲುವು, ಕಾಂಗ್ರೆಸ್‍ನ್ನು ಮತ್ತೆ ಡ್ರೈವಿಂಗ್ ಸೀಟಿಗೆ ತಂದು ಕೂರಿಸಿದೆ.



