ಬಡವರು ಓದಬೇಕು. ಓದಿದರೆ ಜೀವನದಲ್ಲಿ ಮುಂದೆ ಬರುತ್ತಾರೆ. ಆದರೆ ಓದುವುದೇ ಕಷ್ಟ. ಏಕೆಂದರೆ ಖರ್ಚು ಲಕ್ಷ ಲಕ್ಷಗಳಲ್ಲಿರುತ್ತದೆ. ಜೀವನ ಸಾಗಿಸುವುದೇ ಕಷ್ಟ ಇರುವಾಗ, ಇನ್ನೆಲ್ಲಿಂದ ವಿದ್ಯೆ.. ಬ್ಯಾಂಕುಗಳು ಎಜುಕೇಷನ್ ಲೋನ್ ಏನೋ ಕೊಡುತ್ತವೆ. ಆದರೆ ಶ್ಯೂರಿಟಿ ಕೇಳುತ್ತವೆ. ಹೊಲ, ಜಮೀನು, ಮನೆ, ಸೈಟು.. ಹೀಗೆ ಯಾವುದಾದರೊಂದು ಪ್ರಾಪರ್ಟಿ ಅಡ ಇಟ್ಟುಕೊಳ್ಳುತ್ತವೆ. ಆದರೆ ಏನೂ ಇಲ್ಲದವರು ಎಜುಕೇಷನ್ ಲೋನ್ ಪಡೆಯೋಕೆ ಏನು ಮಾಡಬೇಕು..? ಅವುಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಇನ್ನೊಂದು ಹೊಸ ಯೋಜನೆ ಶುರುವಾಗಿದೆ.
ವಿದ್ಯಾಲಕ್ಷ್ಮಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದು ಜಾರಿಗೆ ಬಂದರೆ ಎಜುಕೇಷನ್ ಲೋನ್ ಪಡೆಯುವುದು ಸುಲಭವಾಗಲಿದೆ. ಈ ಶಿಕ್ಷಣ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ. ಈ ಯೋಜನೆಯಡಿಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಯಾವುದೇ ವಿದ್ಯಾರ್ಥಿ ಯಾವುದೇ ಮೇಲಾಧಾರ ಅಥವಾ ಜಾಮೀನು ಇಲ್ಲದೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಬಹುದಾಗಿದೆ. ಇದು ಬೋಧನಾ ಶುಲ್ಕ ಮತ್ತು ಇತರ ವೆಚ್ಚಗಳ ಸಂಪೂರ್ಣ ಮೊತ್ತವನ್ನು ಭರಿಸುತ್ತದೆ. ನೀವು ಮಾಡಬೇಕಾದ್ದು ಇಷ್ಟೇ. ಉನ್ನತ ಶಿಕ್ಷಣ ಸಂಸ್ಥೆಯಲ್ಲಿ, ಉನ್ನತ ಶಿಕ್ಷಣಕ್ಕೆ ಸೀಟು ಗಿಟ್ಟಿಸಿಕೊಳ್ಳೋದು.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿರುವ ಮಾಹಿತಿ ಪ್ರಕಾರ ʻʻ ದೇಶದ ಉನ್ನತ 860 ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ವಿಸ್ತರಿಸಲಾಗಿದೆ. ಇದರ ಅಡಿಯಲ್ಲಿ ಪ್ರತಿ ವರ್ಷ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಸಿಗಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು ದೊರಕಿದ್ದರೆ, ಅಂಥವರು ಹಣಕಾಸಿನ ಸಮಸ್ಯೆಯಿಂದ ಶಿಕ್ಷಣ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯು ಶಿಕ್ಷಣ ಸಾಲಗಳನ್ನು ಸುಲಭಗೊಳಿಸಲಿದೆ. ಭಾರತದಲ್ಲಿ ಅಥವಾ ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಲಾಗುವುದು. ವಾರ್ಷಿಕ ಎಂಟು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ವಿದ್ಯಾರ್ಥಿಗಳಿಗೆ ಶೇಕಡಾ ಮೂರರಷ್ಟು ಬಡ್ಡಿದರಲ್ಲಿ 10 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುವುದುʼʼ
ಇದರ ಅರ್ಥ ಸುಮಾರು 10 ಲಕ್ಷ ರೂ.ವರೆಗಿನ ಎಜುಕೇಷನ್ ಲೋನಿಗೆ ಸರ್ಕಾರವೇ ಗ್ಯಾರಂಟಿ ಅಥವಾ ಶ್ಯೂರಿಟಿ ಕೊಡಲಿದೆ. ಇದರ ಪ್ರಯೋಜನ ಪಡೆದು ಯುವಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಇನ್ನುಮುಂದೆ ಉನ್ನತ ಶಿಕ್ಷಣ ಸಿಗುವುದಿಲ್ಲ ಎನ್ನುವ ಕೊರಗು ಯುವ ಸಮುದಾಯವನ್ನು ದೂರ ಮಾಡಲಾಗಿದೆ ಎನ್ನುವುದು ಕೇಂದ್ರ ಸರ್ಕಾರದ ಭರವಸೆ.
ಯಾರೆಲ್ಲ ಅರ್ಹರು..?
ಉನ್ನತ ಶಿಕ್ಷಣ ಇಲಾಖೆಯು “ಪಿಎಂ-ವಿದ್ಯಾಲಕ್ಷ್ಮಿ” ಎಂಬ ಏಕೀಕೃತ ಪೋರ್ಟಲ್ ಅನ್ನು ಹೊಂದಿದೆ. ಎಲ್ಲ ಬ್ಯಾಂಕ್‌ಗಳು ಬಳಸಲು ಸಾಧ್ಯವಾಗುವಂತಹ ಸರಳೀಕೃತ ಅಪ್ಲಿಕೇಶನ್ ಪ್ರಕ್ರಿಯೆ ಇದೆ. ಈ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಇ-ವೋಚರ್ ಮತ್ತು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಅಃಆಅ) ವ್ಯಾಲೆಟ್‌ಗಳ ಮೂಲಕ ಬಡ್ಡಿ ಉಪದಾನದ ಪಾವತಿಯನ್ನು ಮಾಡಲಾಗುತ್ತದೆ. ವಾರ್ಷಿಕ ಕುಟುಂಬ ಆದಾಯದ 8 ಲಕ್ಷ ರೂ.ವರೆಗಿನ ವಿದ್ಯಾರ್ಥಿಗಳಿಗೆ ಈ ಯೋಜನೆಯು 10 ಲಕ್ಷ ರೂ.ವರೆಗಿನ ಸಾಲದ ಮೇಲೆ 3% ಬಡ್ಡಿ ರಿಯಾಯಿತಿಯನ್ನು ನೀಡುತ್ತದೆ. ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುವುದು. 7.5 ಲಕ್ಷ ರೂ.ವರೆಗಿನ ಸಾಲಕ್ಕಾಗಿ ವಿದ್ಯಾರ್ಥಿಗಳು 75% ಬಾಕಿ ಉಳಿದಿರುವ ಡೀಫಾಲ್ಟ್‌ನ ಕ್ರೆಡಿಟ್ ಗ್ಯಾರಂಟಿಯನ್ನು ಸಹ ಪಡೆಯಬಹುದು.
ಏನಿದು ಸಿಎಂ ಸಿದ್ದರಾಮಯ್ಯ 50 ಲಕ್ಷ ಗ್ಯಾರಂಟಿ ಸ್ಕೀಂ..?
ಈ ನಡುವೆ ರಾಜ್ಯ ಸರ್ಕಾರವೂ ಒಂದು ಸ್ಕೀಂ ಆರಂಭಿಸಿದೆ. ಎಂಬಿಬಿಎಸ್ ವಿದ್ಯಾರ್ಥಿಗಳಿಗೆ, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ 50 ಲಕ್ಷ ರೂ.ವರೆಗೂ ನೆರವು ಸಿಗಲಿದೆ. ಆದರೆ ಎಸ್ಸಿ, ಎಸ್ಟಿವಿದ್ಯಾರ್ಥಿಗಳಿಗೆ ಮಾತ್ರ. ಹಾಗೂ ಅವರು ಮ್ಯಾನೇಜ್ʻಮೆಂಟ್ ಕೋಟಾದಲ್ಲಿ ಸೀಟು ಪಡೆದಿರಬೇಕು. ಪಿಯುಸಿಯಲ್ಲಿ ಶೇ.95ರಷ್ಟು ಅಂಕ ಪಡೆದೂ ಕೂಡಾ, ಸರ್ಕಾರಿ ಸೀಟು ಸಿಗದೇ ಇದ್ದವರಿಗೆ ಮಾತ್ರ. ಅಂತಹವರು ಮ್ಯಾನೇಜ್ʻಮೆಂಟ್ ಕೋಟಾ ಸೀಟು ಪಡೆದಿದ್ದರೆ, ಅಂತಹವರಿಗೆ ಮೊದಲ ಹಂತವಾಗಿ 25 ಲಕ್ಷ ರೂ. ಕೊಡಲಾಗುತ್ತದೆ. ಅದೇ ವಿದ್ಯಾರ್ಥಿ ಮೊದಲ ವರ್ಷದ ಪರೀಕ್ಷೆಯಲ್ಲಿ ಶೇ.60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದು ಪಾಸ್ ಆದರೆ ಅವರಿಗೆ ಎರಡನೇ ಹಂತವಾಗಿ ಇನ್ನೂ 25 ಲಕ್ಷ ಕೊಡಲಾಗುತ್ತದೆ. ಇದು ಸಾಲ ಅಲ್ಲ. ಪ್ರೋತ್ಸಾಹಧನ.



