ಕುಮಾರಸ್ವಾಮಿ ಒಂದು ದಿಕ್ಕಾದರೆ, ವಿಜಯೇಂದ್ರ ಮತ್ತೊಂದು ದಿಕ್ಕು. ಆರ್ ಅಶೋಕ್ ಅವರದ್ದೇ ಬೇರೆ. ಹೀಗಾದರೆ ಹೇಗೆ ಎನ್ನುವ ಪರಿಸ್ಥಿತಿ ಉದ್ಭವವಾಗಿರುವಾಗಲೇ, ಈ ಮೈತ್ರಿಕೂಟ 2029ರ ಚುನಾವಣೆ ಹೊತ್ತಿಗೆ ಇರೋದಿಲ್ಲ. ಅಷ್ಟು ಹೊತ್ತಿಗೆ ಅವರೂ.. ಇವರೂ.. ದೂರವಾಗಿರ್ತಾರೆ ಅನ್ನೋ ಮಾತುಗಳೂ ಕೇಳಿ ಬರ್ತಾ ಇದ್ವು. ಇದಕ್ಕೆಲ್ಲ ಫುಲ್ ಸ್ಟಾಪ್ ಇಡೋ ಪ್ರಯತ್ನ ಮಾಡಿದ್ಧಾರೆ ಜೆಪಿ ನಡ್ಡಾ. ಅದೂ ಕೂಡಾ ಪ್ರಧಾನಿ ನರೇಂದ್ರ ಮೋದಿಯಿಂದಲೇ ಸಿಗ್ನಲ್ ಬಂದ ನಂತರ. ಕರ್ನಾಟಕದಲ್ಲಿ ಏನಾಗ್ತಾ ಇದೆ, ಒಂದ್ಸಲ ನೋಡಿ. ಒಟ್ಟಿಗೇ ಹೋಗೋಕೆ ಹೇಳಿ ಅವರಿಗೆ ಎಂಬ ಒಂದೇ ಒಂದು ಮಾತು, ವಿಜಯೇಂದ್ರ ಅವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಅದನ್ನು ವಿಜಯೇಂದ್ರ ಮತ್ತು ಆರ್ ಅಶೋಕ್ ಅವರಿಗೆ ರವಾನಿಸಿರುವುದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಬಂದಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸ್ಥಳೀಯ ನಾಯಕರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮಿತ್ರಕೂಟ ಮನೆಯೊಂದು ಮೂರು ಬಾಗಿಲು ಎಂಬಂತಾಗಿತ್ತು. ಬಿಜೆಪಿಯಲ್ಲಿ ವಿಜಯೇಂದ್ರ ವರ್ಸಸ್ ಅಶೋಕ್ ಎಂಬ ಪರಿಸ್ಥಿತಿ ನೆಲೆಸಿದ್ದರೆ, ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡರೆ ನಾವು ಇಂಡಿಪೆಂಡೆಂಟ್ ಅಗಿ ಬೆಳೆಯಬಹುದು ಎಂಬ ಯೋಚನೆ ಬಿಜೆಪಿ ಪಾಳಯದಲ್ಲಿ ಕಾಣಿಸಿತ್ತು.
ಪಕ್ಷ ಮತ್ತು ಮಿತ್ರಕೂಟದಲ್ಲಿ ಇಂಥ ಒಡಕಿನ ಧ್ವನಿಗಳು ಕೇಳಿಸಿದ್ದು, ಸಹಜವಾಗಿಯೇ ಬಿಜೆಪಿ ವರಿಷ್ಠರಿಗೆ ಸಿಟ್ಟು ತರಿಸಿದೆ. ಇವತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಿದರೆ ನಾಳೆ ಸನ್ನಿವೇಶವನ್ನು ಎನ್‌ಕ್ಯಾಶ್ ಮಾಡಿಕೊಳ್ಳಬಹುದು. ಅದರಲ್ಲೂ ಅಧಿಕಾರ ಹಂಚಿಕೆ ಒಪ್ಪಂದದ ಮಾತು ಕಾಂಗ್ರೆಸ್ ಸರಕಾರವನ್ನು ಅಲುಗಾಡಿಸಿದರೆ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ಅಸಂಭವವೇನಲ್ಲ.
ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಬಳಿ ಮಾತನಾಡಿದ ನಡ್ಡಾ, “ನಿಮ್ಮ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿರಿ. ಅದೇ ರೀತಿ ಜೆಡಿಎಸ್ ಜತೆ ಸೇರಿ ರಾಜ್ಯದಲ್ಲಿ ಹೋರಾಟಗಳನ್ನು ಸಂಘಟಿಸಿ” ಎಂದು ಹೇಳಿದ್ದಾರೆ.
ಅಂಥ ಪರಿಸ್ಥಿತಿಯನ್ನು ಎದುರಿಸಲು ಒಗ್ಗಟ್ಟು ಬೇಕು. ಅದೇ ಇಲ್ಲವಾದರೆ ಎನ್‌ಕ್ಯಾಶ್ ಮಾಡಿಕೊಳ್ಳುವುದು ಅಸಾಧ್ಯ. ಇದನ್ನು ನಡ್ಡಾ ವಿಜಯೇಂದ್ರ, ಅಶೋಕ್ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಇಂಟರೆಸ್ಟಿಂಗ್ ಸಂಗತಿ ಎಂದರೆ, ನಡ್ಡಾ ಬೋಧಿಸಿ ಹೋದ ನಂತರ ಬಿಜೆಪಿ-ಜೆಡಿಎಸ್ ಮಿತ್ರಕೂಟದಲ್ಲಿ ಒಗ್ಗಟ್ಟಿನ ಸೂಚನೆ ಕಾಣಿಸಿವೆ.
ಕೆಎಸ್‌ಸಿಎ ಕ್ರೀಡಾಂಗಣದ ಬಳಿ ನಡೆದ ದುರ್ಘಟನೆ ಪ್ರಕರಣ ಇದೆಯಲ್ಲ? ಈ ಬಗ್ಗೆ ಜೆಡಿಎಸ್‌ನ ಕುಮಾರಸ್ವಾಮಿ, ಬಿಜೆಪಿಯ ವಿಜಯೇಂದ್ರ, ಅಶೋಕ್ ಒಟ್ಟಾಗಿ ಕುಳಿತು ಸರಕಾರದ ವಿರುದ್ಧ ಸಂಘಟಿತ ದಾಳಿ ನಡೆಸಿದ್ದಾರೆ. ಬಿಜೆಪಿಯೊಳಗಿನ ಮಾಹಿತಿ ಪ್ರಕಾರ ಆರ್ ಅಶೋಕ್ ಅವರಿಗೆ ಮೈತ್ರಿ ಬೇಕು. ಮೈತ್ರಿ ಇದ್ದರೆ ಮಾತ್ರ ಅವರು ಮುಂದಿನ ಚುನಾವಣೆಯಲ್ಲೂ ಗೆಲ್ಲೋಕೆ ಸಾಧ್ಯ. ಆದರೆ ವಿಜಯೇಂದ್ರ ಅವರಿಗೆ ಮೈತ್ರಿ ಬೇಡ. ಪಕ್ಷದ ಬೇರು ಗಟ್ಟಿ ಆಗುತ್ತಿರುವ ಕಾಲದಲ್ಲಿ ಮೈತ್ರಿ ಮಾಡಿಕೊಂಡರೆ, ಅದರಿಂದ ಬಿಜೆಪಿಗಿಂತ ಜೆಡಿಎಸ್ಸಿಗೆ ಲಾಭ ಹೆಚ್ಚು ಎನ್ನುವ ವಾದ ಅವರದ್ದು.
ಅಂದಹಾಗೆ ಜಂಟಿ ಸುದ್ದಿಗೋಷ್ಟಿ ವೇಳೆ ವಿಜಯೇಂದ್ರ ಅವರನ್ನು ಒಪ್ಪದ ಪ್ರತಾಪ್ ಸಿಂಹ ಅವರೂ ಪಕ್ಕದಲ್ಲೇ ಇದ್ದರು. ಕುಮಾರಸ್ವಾಮಿ ಅವರು ಅಶೋಕ್ ಅವರನ್ನು ಅಶೋಕಣ್ಣೋರು ಎನ್ನುತ್ತಿದ್ದರೆ, ಅಶೋಕ್ ಅವರು ನಮ್ ಕುಮಾರಣ್ಣ ನಮ್ ಕುಮಾರಣ್ಣ ಎನ್ನುತ್ತಿದ್ದರು. ನೋಡುವುದಕ್ಕೂ ಕೇಳುವುದಕ್ಕೂ ಮಜವಾಗಿತ್ತು. ಆದರೆ.. ಇದು ಎಷ್ಟು ದಿನ..?



