ಪ್ರಧಾನಿ ನರೇಂದ್ರ ಮೋದಿ ಅವರೇನೋ ಎದುರಾಳಿಗಳನ್ನೂ ಸಮಯ ಸಂದರ್ಭ ಸಿಕ್ಕಾಗ ಮಾತನಾಡಿಸುತ್ತಾರೆ. ಆದರೆ ರಾಹುಲ್ ಗಾಂಧಿ ಹಾಗಲ್ಲ. ಇತ್ತೀಚೆಗಂತೂ ತಾವು ವಿರೋಧಿಸುವವರ ಬಳಿ ಎದುರಾ ಬದುರು ಸಿಕ್ಕಾಗ ಮುಗುಳ್ನಗುವುದನ್ನೂ ಮರೆತಿದ್ದಾರೆ. ಅವರು ಒಂದು ರೀತಿಯಲ್ಲು ರಾಜಕೀಯ ಮತ್ತು ಸೋಲುಗಳನ್ನು ಪರ್ಸನಲ್ ಆಗಿ ತೆಗೆದುಕೊಂಡಿದ್ದಾರೆ. ಹೀಗಿರುವಾಗಲೇ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ಮಧ್ಯೆ ಒಂದು ಸುದೀರ್ಘ ಮೀಟಿಂಗ್ ಆಗಿದೆ. ಅದೂ ಬರೋಬ್ಬರಿ 88 ನಿಮಿಷ. ಅಂದ್ರೆ ಒಂದೂವರೆ ಗಂಟೆ. ಆದರೆ ಮೀಟಿಂಗ್ ಮ್ಯಾಟರ್ಸ್ ಗುಪ್ತ್ ಗುಪ್ತ್.
ಅಧಿಕೃತವಾಗಿ ಹೊರಬಿದ್ದಿರುವ ಮಾಹಿತಿಗಳ ಪ್ರಕಾರ..
ಪ್ರಧಾನಿ ಮೋದಿ ಅವರು, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಸೆಕ್ಷನ್ 12 (3) ರ ಅಡಿಯಲ್ಲಿ ರಚನೆಯಾಗಿರುವ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯೂ ಇದ್ದಾರೆ. ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ಹಾಗೂ ಕೇಂದ್ರ ಮಾಹಿತಿ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಸಂಬಂಧಿಸಿದಂತೆ ಸಭೆ ಮಾಡಿದ್ದಾರೆ ಎನ್ನುವುದು ಒಂದು ಮಾಹಿತಿ. ಆಯೋಗದಲ್ಲಿ ಮುಖ್ಯ ಆಯುಕ್ತ ಸೇರಿದಂತೆ ಒಟ್ಟು 11 ಹುದ್ದೆಗಳಿದ್ದು, ಪ್ರಸ್ತುತ ಎಂಟು ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಆಯೋಗದ ಮುಂದೆ ಬಾಕಿ ಇರುವ ಮೇಲ್ಮನವಿಗಳು ಮತ್ತು ದೂರುಗಳ ಸಂಖ್ಯೆ ಹೆಚ್ಚುತ್ತಿದ್ದು, ನಾಗರಿಕರ ಮಾಹಿತಿ ಹಕ್ಕುಗಳು ವಿಳಂಬಕ್ಕೆ ಒಳಗಾಗುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸಲು 88 ನಿಮಿಷ ಮೀಟಿಂಗ್ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.
ಆದರೆ.. ಕಾಂಗ್ರೆಸ್ ಮೂಲಗಳನ್ನು ಕೆದಕಿದರೆ ಅವರು ಇತ್ತೀಚೆಗೆ ಬಹಿರಂಗ ಭಾಷಣಗಳಲ್ಲಿ ಆದಿವಾಸಿ, ದಲಿತ, ಸೈನ್ಯದಲ್ಲೂ ಜಾತಿ ಗಣತಿ, ಅಂಬಾನಿ-ಅದಾನಿ ವಿಷಯ.. ಇತ್ಯಾದಿಗಳನ್ನೆಲ್ಲ ಚರ್ಚೆ ಮಾಡಿದರು ಎನ್ನುತ್ತಿದ್ದಾರೆ. ಬಹುಶಃ ಕಟ್ಟರ್ ಕಾಂಗ್ರೆಸ್ಸಿಗರು ಮಾತ್ರವೇ ಅದನ್ನು ನಂಬಬೇಕು.
ಒಂದೂವರೆ ಗಂಟೆ ಇಬ್ಬರ ಮಧ್ಯೆ ಏನೇನು ನಡೆಯಿತು ಎನ್ನುವುದೇ ಸದ್ಯಕ್ಕೆ ಕುತೂಹಲ. ಈ ಹಿಂದೆ ಮೋದಿ ಅವರನ್ನು ಸಂಸತ್‌ನಲ್ಲಿಯೇ ಅಪ್ಪಿಕೊಂಡಿದ್ದ ರಾಹುಲ್ ಗಾಂಧಿ ಒಂದು ಸೀನ್ ಕ್ರಿಯೇಟ್ ಮಾಡಿದ್ದರು. ಆದರೆ ಇತ್ತೀಚೆಗಂತೂ ಮೋದಿ ಅವರನ್ನು ಮುಖಾಮುಖಿಯಾಗುವ ಹಲವು ಅವಕಾಶಗಳನ್ನು ರಾಹುಲ್ ತಪ್ಪಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಮೋದಿಯವರ ಸರ್ಕಾರವೂ ರಾಹುಲ್ ಅವರನ್ನು ದೂರವೇ ಇಟ್ಟಿದೆ. ಈ ಎಲ್ಲದರ ಮಧ್ಯೆ ದೇಶದ ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರ ಮಧ್ಯೆ ಒಂದೂವರೆ ಗಂಟೆಯಷ್ಟು ಕಾಲ ನಡೆದ ಸುದೀರ್ಘ ಮಾತುಕತೆ, ಆ ಮಾತುಕತೆಯ ವೇಳೆ ಯಾವೊಬ್ಬ ನಾಯಕ ಅಥವಾ ಅಧಿಕಾರಿಯೂ ಇಲ್ಲದೇ ಇರುವುದು ಎಲ್ಲವೂ ಕುತೂಹಲ ಹುಟ್ಟುಹಾಕಿದೆ.
ಈ ಚರ್ಚೆ ನಿರೀಕ್ಷೆಗೂ ಮೀರಿ ಸಮಯ ತೆಗೆದುಕೊಂಡ ಕಾರಣ ರಾಜಕೀಯ ವಲಯದಲ್ಲಿ ವಿವಿಧ ಊಹಾಪೋಹಗಳು ಹರಿದಾಡಿದವು. ರಾಹುಲ್ ಗಾಂಧಿ ಮಧ್ಯಾಹ್ನ 1 ಗಂಟೆಗೆ ಪ್ರಧಾನ ಮಂತ್ರಿ ಕಚೇರಿಗೆ ಆಗಮಿಸಿದ್ದು, ಸಭೆ 1.07ಕ್ಕೆ ಪ್ರಾರಂಭವಾಯಿತು. ಆದರೆ ಸಭೆಯು ನಿರೀಕ್ಷೆಗಿಂತ ಹೆಚ್ಚು ಕಾಲ ಮುಂದುವರೆದಿದ್ದು, ಸಂಸದರಲ್ಲಿ ಕುತೂಹಲ ಹೆಚ್ಚಿಸಿತ್ತು.



