ಮಂಡ್ಯ ಕ್ಷೇತ್ರದ ವಾರ್ ಮತ್ತೊಮ್ಮೆ ಸುದ್ದಿ ಮಾಡ್ತಾ ಇದೆ. ಲೋಕಸಭಾ ಚುನಾವಣೆ ಇರೋದು ಕೆಲವೇ ದಿನ. ಈ ಮಧ್ಯೆ ಸುಮಲತಾ ಅವರು ನಂಗೇ ಬಿಜೆಪಿ ಟಿಕೆಟ್ ಕೊಡುತ್ತೆ ಅನ್ನೋ ವಿಶ್ವಾಸ ಇದೆ ಎನ್ನುತ್ತಿದ್ದರೆ, ಮಂಡ್ಯ ಟಿಕೆಟ್ ಫೈನಲ್ ಆಗಿದೆ ಅಂತಿದ್ಧಾರೆ ಜೆಡಿಎಸ್ ನಾಯಕ ಜಿ ಟಿ ದೇವೇಗೌಡ. ಸುಮಲತಾ ಅವರು ನಡೆಸುತ್ತಿರುವ ತಂತ್ರಗಾರಿಕೆ ಜಿಟಿ ದೇವೇಗೌಡರಿಗೆ ಗೊತ್ತೇ ಇಲ್ಲವಂತೆ. ಜಿಟಿ ದೇವೇಗೌಡರು ಸೇರಿದಂತೆ ಕುಮಾರಸ್ವಾಮಿ ಮತ್ತಿತರರು ನೀಡುತ್ತಿರೋ ಹೇಳಿಕೆಗಳು ಸುಮಲತಾ ಅವರಿಗೂ ಗೊತ್ತಿಲ್ವಂತೆ.
ಸುಮಲತಾ ಏನೇನೆಲ್ಲ ಮಾಡಿದ್ರು..?
ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದ ಸುಮಲತಾ ಪ್ರಧಾನಿ ಮೋದಿ ಅವರು ಬ್ಲೆಸ್ಸಿಂಗ್ ರೀತಿಯಲ್ಲಿ ಮಾತನಾಡಿಸಿ ಕಳುಹಿಸಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದಿದ್ದಾರೆ. ಮಂಡ್ಯದಿಂದ ಸುಮಲತಾ ನಿವಾಸಕ್ಕೆ 40ಕ್ಕೂ ಹೆಚ್ಚು ಬೆಂಬಲಿಗರು ಬಂದು ಮಾತುಕತೆ ನಡೆಸಿ ಹೋಗಿದ್ದಾರೆ. ಮಂಡ್ಯದ ಬಿಜೆಪಿ ಮುಖಂಡ ಸಚ್ಚಿದಾನಂದ ಅವರನ್ನು ಬೆಂಗಳೂರಿಗೆ ಕರೆಸಿದ ನಟ ದರ್ಶನ್, ಇಬ್ಬರೊಂದಿಗೆ ಕೂತು ಮಾತನಾಡಿ ಸಂಧಾನ ನಡೆಸಿದ್ಧಾರೆ. ಸಂಧಾನ ಯಶಸ್ವಿಯಾಗಿದೆ ಎನ್ನಲಾಗಿದೆ.
ನಾನು ಸಚ್ಚಿದಾನಂದ ಚೆನ್ನಾಗಿ ಇದ್ದೇವೆ. ಯಾಕೆ ನಾವು ಸರಿ ಇಲ್ಲ ಎಂದು ರೂಮರ್ ಬಂತೊ ಗೊತ್ತಿಲ್ಲ. ಅವರು ಕಳೆದ ಬಾರಿ ಕೂಡ ನನ್ನ ಜೊತೆ ನಿಂತು ಕೆಲಸ ಮಾಡಿದ್ದಾರೆ ಎಂದಿರುವ ಸುಮಲತಾ ಅಂಬರೀಷ್, ಸಭೆಯಲ್ಲಿ ನಡೆದ ಮಾತುಕತೆ ವಿವರ ಹೇಳಿದ್ಧಾರೆ. ಒಳ್ಳೆಯ ಚರ್ಚೆ ಆಯ್ತು. ಮುಂದೆ ಹೇಗೆ ನನ್ನ ನೋಡೋಕೆ ಇಷ್ಟ ಪಡ್ತಾರೆ ಎಂದು ಚರ್ಚೆ ಮಾಡಿದ್ವಿ. ಪಾಸಿಟಿವ್ ಚರ್ಚೆ ಆಯ್ತು. ಯಾವುದೇ ಗೊಂದಲ ಇಲ್ಲ. ಮೀಡಿಯಾ ಚರ್ಚೆ ಎಲ್ಲಾ ನೋಡಿ ಸ್ವಲ್ಪ ಗೊಂದಲ ಇತ್ತು ಜನರಿಗೆ. ಎಲ್ಲಾರೂ ಜೊತೆಗೆ ಇದ್ದಾರೆ ಎಂದಿದ್ದಾರೆ.
ಮೈತ್ರಿ ಆಗಿದೆ, ನಾವು ಒಟ್ಟಾಗಿ ಹೋಗಬೇಕಿದೆ. ಮೋದಿಗೆ ನಿಸ್ವಾರ್ಥ ಸೇವೆ ಉದ್ದೇಶ ಇದೆ ಎಂದ ಸುಮಲತಾ ಮೋದಿ ನನಗೆ ಬ್ಲೆಸಿಂಗ್ ತರವೇ ಮಾತಾಡಿ ಕಳಿಸಿದ್ದಾರೆ. ಟಿಕೆಟ್ ಒಂದೇ ದಿನ ನಿರ್ಣಯ ಆಗೋದಿಲ್ಲ. ಮೋದಿಜಿಗೂ ಮಂಡ್ಯದಲ್ಲಿ ಬೆಳೆಸಬೇಕು ಎಂದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
ಬೆಂಗಳೂರು ನಾರ್ಥ್ ನನಗೆ ಬೇಡ. ನಂಗೆ ಬೆಂಗಳೂರು ನಾರ್ಥ್ ಟಿಕೆಟ್ ಬೇಕು ಅಂದರೆ ಬಹಳ ಸುಲಭ ಪಡೆಯೋದು. ಆದರೆ ನಂಗೆ ಮಂಡ್ಯದಲ್ಲೆ ರಾಜಕೀಯ ಮಾಡಬೇಕು. ಅಂಬರೀಶ್ ಮಂಡ್ಯದ ಗಂಡು ಎಂದೇ ದೇಶಕ್ಕೆ ಫೇಮಸ್ ಆದ್ರು ಎಂದ ಸುಮಲತಾ ಮಂಡ್ಯ ಜೆಡಿಎಸ್ ಪಾಲಾದ್ರೆ ಎಂಬ ಪ್ರಶ್ನೆಗೆ ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ಪಕ್ಷ ಅಲ್ಲ. ಅವರಿಗೆ ಕೇವಲ ಮಂಡ್ಯ ಅಲ್ಲ. ಅವರು ಯಾವ ರೀತಿ ಅಲಯನ್ಸ್ ಮಾಡಿಕೊಳ್ತಾರೋ ಗೊತ್ತಿಲ್ಲ. ಆದ್ರೆ ಅವರ ನಿರ್ಧಾರ ಏನಾಗಲಿದೆ ನೋಡಬೇಕು. ಈಗಾಗಲೇ ಮೈತ್ರಿ ಕೂಡ ಫಿಕ್ಸ್ ಇದೆ. 400+ ಸೀಟು ಗೆಲ್ಲುವ ಟಾರ್ಗೆಟ್ ಇದೆ. ಗೆಲ್ಲಬೇಕು ಅಂದಾಗ ಎಲ್ಲರ ನಿರ್ಧಾರ ಮುಖ್ಯ ಎಂದು ಹೇಳಿದ್ದಾರೆ. ಇಂಡಿಪೆಂಡೆಂಟ್ ಸ್ಪರ್ಧೆ ವಿಚಾರವಾಗಿ ಕೇಳಿದ ಪ್ರಶ್ನೆಗೆ. ಇಂಡಿಪೆಂಡೆಂಟ್ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಟಿ ದೇವೇಗೌಡ ಏನ್ ಹೇಳಿದ್ರು..?
ಸುಮಲತಾರವರು ಅಧಿಕೃತ ಬಿಜೆಪಿ ಮೆಂಬರ್ ಅಲ್ಲ. ಆದರೂ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಮಂಡ್ಯ ಕೇಳಿದರೆ ಬೆಂಗಳೂರು ನಾರ್ತ್ ಕೊಡಬಹುದು ಎಂಬ ಲೆಕ್ಕಾಚಾರ ಇರಬಹುದು. ನನಗೆ ಕೆಲವರು ಈ ಬಗ್ಗೆ ಹೇಳುತ್ತಿದ್ದಾರೆ ಎಂದು ಹೇಳಿರೋ ಜಿಟಿ ದೇವೇಗೌಡ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ಗೆ ಕನ್ಫರ್ಮ್ ಆಗಿದೆ ಎಂದಿದ್ದಾರೆ.
ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿ 5.5 ಲಕ್ಷ ಮತಗಳು ಜೆಡಿಎಸ್ ಪರ ಇವೆ. ಹಾಗಾಗಿ ಮಂಡ್ಯ ಉಳಿಸಿಕೊಳ್ಳಬೇಕೆಂಬುದು ಮುಖಂಡರ ಒತ್ತಾಯ. ನಮ್ಮ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.



