ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರೀತಿಸುವವರೂ ಇದ್ದಾರೆ. ದ್ವೇಷಿಸುವವರೂ ಇದ್ದಾರೆ. ಅದು ಪತ್ರಕರ್ತರಲ್ಲೂ ಇದೆ. ಒದು ವರ್ಗದ ಪತ್ರಕರ್ತರಂತೂ ಮೋದಿ ಹೆಸರು ಹೇಳಿದರೆ ಸಾಕು..ಉರಿದು ಬೀಳುತ್ತಾರೆ. ಮೋದಿ ಅಥವಾ ಬಿಜೆಪಿಯ ಸೋಲು ಅವರಿಗೆ ಟಾನಿಕ್ ಇದ್ದಂತೆ. ಅಂತಹವರಲ್ಲಿ ಒಬ್ಬ ಪತ್ರಕರ್ತರು ಇತ್ತೀಚೆಗೆ ಕ್ಯಾನ್ಸರ್ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಅದನ್ನು ತಿಳಿದು ಸ್ವತಃ ನರೇಂದ್ರ ಮೋದಿ ಅವರೇ ಆ ಪತ್ರಕರ್ತರಿಗೆ ಫೋನ್ ಮಾಡಿ ವಿಚಾರಿಸಿಕೊಂಡಿದ್ದಾರೆ. ಆ ಪತ್ರಕರ್ತನ ಹೆಸರು ರಾಜ್‌ದೀಪ್ ಸರ್ದೇಸಾಯಿ .
ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ 30 ನಿಮಿಷಗಳ ಕಾಲ ಫೋನ್ ಮೂಲಕ ಮಾತನಾಡಿ, ಆರೋಗ್ಯ ಸಲಹೆ ನೀಡಿದ್ದಾರೆ ಎಂದು ಸರ್ದೇಸಾಯಿ ಅವರೇ ಬಹಿರಂಗಪಡಿಸಿದ್ದಾರೆ. ಅಂದಹಾಗೆ ರಾಜ್ ದೀಪ್ ಸರ್ ದೇಸಾಯಿ ಇಂಡಿಯಾ ಟುಡೇ ಟಿವಿ ಚಾನೆಲ್ ಸಂಪಾದಕರೂ ಹೌದು. ಮೋದಿ ಮತ್ತು ಬಿಜೆಪಿ ಸೋತಾಗ ಸ್ಟುಡಿಯೋನಲ್ಲೇ.. ಲೈವ್ʻನಲ್ಲಿಯೇ ಡ್ಯಾನ್ಸ್ ಮಾಡುವಷ್ಟು ಮೋದಿ ವಿರೋಧಿ.
ಇನ್ನು ರಾಜ್ ದೀಪ್ ಅವರ ಪತ್ನಿ ಸಾಗರಿಕಾ ಘೋಷ್, ಮಮತಾ ಬ್ಯಾನರ್ಜಿ ಅವರ ಟಿಎಂಸಿಯಿಂದ ರಾಜ್ಯಸಭಾ ಸದಸ್ಯೆಯಾಗಿರುವವರು. ಅವರೂ ಮೋದಿಯವರ ವಿರೋಧಿಯೇ. ಆಕೆಯೂ ಪತ್ರಕರ್ತೆಯಾಗಿದ್ದವರೇ. ಅಂತಹುದರಲ್ಲಿ ಮೋದಿಯವರೇ ಖುದ್ದು ಕರೆ ಮಾಡಿ, ರಾಜ್ ದೀಪ್ ಸರ್ ದೇಸಾಯಿ ಆರೋಗ್ಯ ವಿಚಾರಿಸಿರುವುದು ಕುತೂಹಲ ಮೂಡಿಸಿದೆ.
ರಾಜ್‌ದೀಪ್ ಸರ್ದೇಸಾಯಿ ಅವರೇ ಅಕ್ಟೋಬರ್ 2025ರಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರಂತೆ. ಶಸ್ತ್ರಚಿಕಿತ್ಸೆಯ ತಕ್ಷಣದ ನಂತರ ಪಿಎಂ ಮೋದಿ ಅವರ ಕರೆ ಬಂದಿತು. ಪ್ರಧಾನಿ ಮೋದಿ ಅವರು ಆರೋಗ್ಯ ನಿರ್ವಹಣೆಯ ಬಗ್ಗೆ ವಿವರವಾಗಿ ಮಾತನಾಡಿದರು. ಬೆಳಿಗ್ಗೆ 6 ಗಂಟೆಗೆ ಎದ್ದು ನಡೆಯುವುದು, ವಾಕಿಂಗ್, ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು, ಆಹಾರ ಮತ್ತು ವಿಶ್ರಾಂತಿಯಲ್ಲಿ ಶಿಸ್ತು ಬೆಳೆಸಿಕೊಳ್ಳುವುದು, ಸಕಾರಾತ್ಮಕ ಚಿಂತನೆಯನ್ನು ಕಾಪಾಡಿಕೊಳ್ಳುವುದು.. ಇತ್ಯಾದಿ ಸಲಹೆಗಳನ್ನು ನೀಡಿದರು ಎಂದು ಹೇಳಿಕೊಂಡಿದ್ದಾರೆ.
ಇದು ನನಗೆ ಸಂಪೂರ್ಣ ಅನಿರೀಕ್ಷಿತ ಕರೆಯಾಗಿತ್ತು. ನಾನು ಬಿಜೆಪಿ ಸರ್ಕಾರದ ತೀಕ್ಷ್ಣ ವಿಮರ್ಶಕ. ಹೀಗಿದ್ದರೂ, ಮೋದಿ ಅವರು ರಾಜಕೀಯ ವ್ಯತ್ಯಾಸವನ್ನು ಮೀರಿ ಮಾನವೀಯತೆಯನ್ನು ತೋರಿಸಿದರು ಎಂದು ಸರ್ದೇಸಾಯಿ ಹೇಳಿದ್ದಾರೆ. ಇದು ರಾಜಕೀಯ ವಿರೋಧದ ಮೇಲೆ ಮನುಷ್ಯತ್ವವು ಯಾವಾಗಲೂ ಮೇಲಿರಬೇಕು ಎಂಬ ಸಂದೇಶವನ್ನು ನೀಡುತ್ತದೆ ಎಂದಿದ್ದಾರೆ. ಸರ್ದೇಸಾಯಿ ಅವರ ಸಹೋದರಿ ಮತ್ತು ಮಕ್ಕಳು ಮೋದಿಯವರ ಕರೆಗೆ ಖುಷಿಯಾಗಿದ್ದಾರೆ.
ಅಂದಹಾಗೆ ರಾಜ್ ದೀಪ್ ಸರ್ ದೇಸಾಯಿ ಈಗ ಇಂಡಿಯಾ ಟುಡೇ ಸಲಹೆಗಾರ ಸಂಪಾದಕರಾಗಿರಬಹುದು. ಆದರೆ.. ಮೋದಿ ಮತ್ತು ರಾಜ್ ದೀಪ್ ಅವರಿಗೆ ದಶಕಗಳ ಹಿಂದಿನಿಂದಲೂ ಪರಿಚಯ ಇದೆ. ಸ್ನೇಹ ಇದೆ. ವೈಯಕ್ತಿಕ ಸಿದ್ಧಾಂತಗಳನ್ನು ಮೀರಿದ ಒಂದು ಗೆಳೆತನವೂ ಇದೆ.



