ಮೊದಲು ಶಾಕ್ ಕೊಟ್ಟಿದ್ದು ಜಿಯೋ. ಆಮೇಲೆ ಏರ್ ಟೆಲ್, ವೊಡಾಫೋನ್.. ಎಲ್ಲವೂ ಶಾಕ್ ಕೊಟ್ಟಿವೆ. ಜಿಯೋ ದರ ಏರಿಕೆಯ ಆಘಾತ ನೀಡಿದ ಬೆನ್ನಲ್ಲೇ, ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಮ್ ಆಪರೇಟರ್ ಭಾರ್ತಿ ಏರ್‌ಟೆಲ್ ಕೂಡ ತನ್ನ ಗ್ರಾಹಕರಿಗೆ ಬರೆ ಎಳೆದಿದೆ. ಶೇ 10- 21ರಷ್ಟು ಮೊಬೈಲ್ ಟಾರಿಫ್ ಏರಿಕೆ ಮಾಡುವುದಾಗಿ ಭಾರ್ತಿ ಏರ್‌ಟೆಲ್ ತಿಳಿಸಿದೆ.
ಜಿಯೋ ಹೊಸ ದರಗಳು ಜು.3 ರಿಂದ ಅನ್ವಯಿಸಲಿವೆ. ಇನ್ನು ವೊಡಾಫೋನ್ ಐಡಿಯಾ ಕೂಡಾ ಶೇ.11-ಶೇ.24ರಷ್ಟು ದರ ಹೆಚ್ಚಳ ಮಾಡಿದ್ದು, ಜು.4ರಿಂದ ಜಾರಿಗೆ ಬರಲಿದೆ. 47 ಕೋಟಿ ಬಳಕೆದಾರರನ್ನು ಹೊಂದಿರುವ ಜಿಯೋ ಎರಡೂವರೆ ವರ್ಷಗಳ ನಂತರ ದರ ಏರಿಕೆ ಮಾಡುತ್ತಿದೆ. ಮೊಬೈಲ್ ಸೇವಾ ವಲಯದಲ್ಲಿ ಜಿಯೋ ಶೇ. 41ರಷ್ಟು ಪಾಲು ಹೊಂದಿದೆ.
ಕನಿಷ್ಠ ರೀಚಾರ್ಜ್‌ಗೆ ಇದ್ದ 15 ರೂ. ದರ ಈಗ 19 ರೂ.ಗೆ ಏರಿದೆ. 84 ದಿನಗಳ ವ್ಯಾಲಿಡಿಟಿ ಹೊಂದಿರುವ ಜನಪ್ರಿಯ 666 ರೂ.ಗಳ ಅನಿಯಮಿತ ಯೋಜನೆಯ ಬೆಲೆ ಶೇ. 20ರಷ್ಟು ಹೆಚ್ಚಿದ್ದು, 799 ರೂ. ಆಗಿದೆ. ವಾರ್ಷಿಕ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು 1,559 ರೂ.ನಿಂದ 1,899 ರೂ.ಗೆ ಮತ್ತು 2,999 ರೂ.ಗಳಿಂದ 3,599 ರೂ.ಗೆ ಏರಿಕೆ ಮಾಡಲಾಗಿದೆ.
ಸದ್ಯ ದಿನಕ್ಕೆ 2 ಜಿಬಿ ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಗಳಲ್ಲಿ ಅನಿಯಮಿತ 5 ಜಿ ಡೇಟಾ ಲಭ್ಯವಿದೆ. ಇನ್ನು 239 ರೂ.ಗಿಂತ ಹೆಚ್ಚಿನ ಬೆಲೆಯ ಯೋಜನೆಗಳನ್ನು ಪಡೆಯುವ ಚಂದಾದಾರರು ಅನಿಯಮಿತ ಉಚಿತ 5 ಜಿ ಸೇವೆ ಪಡೆಯಲು ಅರ್ಹರಾಗಿರುತ್ತಾರೆ. ಉಳಿದ ಗ್ರಾಹಕರು ಅನಿಯಮಿತ 5 ಜಿ ಸೇವೆಯನ್ನು ಪಡೆಯಲು 61 ರೂ. ವೋಚರ್‌ನೊಂದಿಗೆ ತಮ್ಮ ಯೋಜನೆಯನ್ನು ಟಾಪ್ ಅಪ್ ಮಾಡಬೇಕಾಗುತ್ತದೆ.
ಮೊಬೈಲ್ ಸೇವೆಗಳ ದರಗಳ ಹೆಚ್ಚಳದ ಜೊತೆಗೆ, ಜಿಯೋ ಸೇಫ್ ಮತ್ತು ಜಿಯೋ ಟ್ರಾನ್ಸ್‌ಲೇಟ್ ಎಂಬ ಎರಡು ಅಪ್ಲಿಕೇಶನ್‌ಗಳನ್ನು ಪರಿಚಯಿಸಲಾಗಿದೆ. ಜಿಯೋ ಸೇಫ್ ಅನ್ನು ಕರೆ, ಸಂದೇಶ ರವಾನೆ ಮತ್ತು ಕಡತ ವರ್ಗಾವಣೆಗೆ ಬಳಸಬಹುದು. ಇದಕ್ಕೆ ತಿಂಗಳ ದರ 199 ರೂ. ಆಗಿದೆ. ಜಿಯೋ ಭಾಷಾಂತರವನ್ನು ಧ್ವನಿ ಕರೆಗಳು, ಸಂದೇಶಗಳು, ಪಠ್ಯವನ್ನು ಭಾಷಾಂತರಿಸಲು ಎಐ-ಚಾಲಿತ ಬಹು-ಭಾಷಾ ಸಂವಹನ ಅಪ್ಲಿಕೇಶನ್ ಕೂಡ ಬಿಡುಗಡೆಯಾಗಲಿದ್ದು, ಇದನ್ನು ಬಳಸಲು ತಿಂಗಳಿಗೆ 99 ರೂಪಾಯಿ ಪಾವತಿಸಬೇಕು.
ಪೋಸ್ಟ್ ಪೇಯ್ಡ್ ದರವೂ ಅಷ್ಟೆ, 30 ಜಿಬಿ ಡೇಟಾ ಯೋಜನೆಯ ಬೆಲೆ 299 ರೂ. ಇತ್ತು. ಅದೀಗ 349 ರೂ. ಆಗಿದೆ.
75 ಜಿಬಿ ಪೋಸ್ಟ್ ಪೇಯ್ಡ್ ಡೇಟಾ ಯೋಜನೆಯ ಬೆಲೆ ಈಗ 399 ರೂ.ಗಳಿಂದ 449 ರೂ.ಗೆ ಏರಿದೆ.
ಇನ್ನು ಏರ್ ಟೆಲ್ ವಿಷಯಕ್ಕೆ ಬಂದರೆ… 179 ರೂ ಇರುವ ಮಾಸಿಕ ಪ್ಲ್ಯಾನ್ (28 ದಿನಗಳು) ಇನ್ನು ಮುಂದೆ 199 ರೂ ಆಗಲಿದೆ. ಇದು ಪ್ರತಿ ದಿನ 2 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಒಳಗೊಂಡಿರುತ್ತದೆ. 1799 ರೂ ವಾರ್ಷಿಕ ಯೋಜನೆ ದರವು ಇನ್ನು ಮುಂದೆ 1,999 ರೂ ಆಗಲಿದೆ. ದಿನದ ಡೇಟಾ ಆಡ್ ಆನ್ ಯೋಜನೆಗಳು ಈ ಹಿಂದೆ 19 ರೂನಿಂದ ಆರಂಭವಾಗುತ್ತಿದ್ದವು. ಅದೀಗ 22 ರೂಗೆ ಏರಿಕೆಯಾಗಿದೆ.
ಪೋಸ್ಟ್‌ಪೇಯ್ಡ್ ಯೋಜನೆಯ ಶ್ರೇಣಿಯು 449 ರೂನಿಂದ 1,199ರೂವರೆಗೆ ಇದೆ. ದೈನಂದಿನ ಡೇಟಾ ಯೋಜನೆಗಳು 265 ರೂನಿಂದ ಆರಂಭವಾಗುತ್ತವೆ.
84 ದಿನಗಳ 455 ರೂ ಟಾರಿಫ್ ಯೋಜನೆ ಹೊಂದಿರುವ ಗ್ರಾಹಕರು, ಇನ್ನು ಮುಂದೆ ಅದಕ್ಕೆ 509 ರೂ ತೆರಬೇಕಾಗುತ್ತದೆ. ಈ ಯೋಜನೆಯು 6 ಜಿಬಿ ಡೇಟಾ, ಅನಿಯಮಿತ ಕರೆ ಹಾಗೂ ದಿನಕ್ಕೆ 100 ಎಸ್‌ಎಂಎಸ್ ಒಳಗೊಂಡಿದೆ.
ಇನ್ನು ವೊಡಾಫೋನ್ ವಿಷಯಕ್ಕೆ ಬಂದರೆ. ವಿಐ ನ 179 ರೂಗಳ ಅಗ್ಗದ ಯೋಜನೆಯು 199 ರೂಗಳಿಗೆ ಲಭ್ಯವಿರುತ್ತದೆ. ಇದು 28 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕರೆ ಮತ್ತು 2GB ಡೇಟಾವನ್ನು ನೀಡುತ್ತದೆ. ಇನ್ನು 269 ರ ಯೋಜನೆಯು ರೂ 299 ಕ್ಕೆ ಲಭ್ಯವಿರುತ್ತದೆ. ಇದರಲ್ಲಿ, ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ 2ಜಿಬಿ ಡೇಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯ.
ಪೋಸ್ಟ್‌ಪೇಯ್ಡ್ ಪ್ಲಾನ್‌ನಲ್ಲಿ ರೂ. 401 ಪ್ಲಾನ್‌ಗೆ ರೂ.451, ರೂ.501 ಪ್ಲಾನ್‌ಗೆ ರೂ.551, ರೂ.601 ಫ್ಯಾಮಿಲಿ ಪ್ಲಾನ್‌ಗೆ ರೂ.701 ಮತ್ತು ರೂ.1001 ಫ್ಯಾಮಿಲಿ ಪ್ಲಾನ್‌ಗೆ ರೂ.1201 ಪಾವತಿಸಬೇಕಾಗುತ್ತದೆ.



