ಅಯೋಧ್ಯೆಯಲ್ಲಿ ಒಟ್ಟು 4 ರಾಮಲಲ್ಲ ವಿಗ್ರಹಗಳಿವೆ. ಎರಡು ವಿಗ್ರಹಗಳು ಕರ್ನಾಟಕದ್ದು. ಮೊದಲನೆಯದ್ದು ಅರುಣ್ ಯೋಗಿರಾಜ್ ಅವರ ರಾಮಲಲ್ಲ ವಿಗ್ರಹ ಪ್ರತಿಷ್ಟಾಪನೆಯಾಗಿದೆ. ಇನ್ನೊಂದು ಕನ್ನಡಿಗರೇ ಆದ ಜಿಎಲ್ ಭಟ್ ಅವರು ರೂಪಿಸಿದ್ದ 2ನೇ ರಾಮಲಲ್ಲ ವಿಗ್ರಹ. ಮತ್ತೊಂದು ರಾಜಸ್ಥಾನದ ಶಿಲ್ಪಿ ಕೆತ್ತಿದ್ದ ಅಮೃತಶಿಲೆಯ ರಾಮಲಲ್ಲ. 4ನೇಯದ್ದು ಹಲವಾರು ವರ್ಷಗಳಿಂದ ಟೆಂಟಿನಲ್ಲಿಯೇ ಪೂಜೆ ಪುನಸ್ಕಾರ ಮಾಡಿಸಿಕೊಳ್ತಿದ್ದ ರಾಮಲಲ್ಲ ವಿಗ್ರಹ.
ಇಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ಅರುಣ್ ಯೋಗಿರಾಜ್ ಅವರ ರಾಮಲಲ್ಲ ಹಾಗೂ ಟೆಂಟಿನಲ್ಲಿದ್ದ ಹಳೆಯ ರಾಮಲಲ್ಲ ವಿಗ್ರಹಗಳು ಗರ್ಭಗುಡಿಯಲ್ಲಿವೆ. ಇನ್ನುಳಿದ 2 ವಿಗ್ರಹಗಳಲ್ಲಿ ಒಂದು ವಿಗ್ರಹ ಜಿಎಲ್ ಭಟ್ ಅವರ ವಿಗ್ರಹವನ್ನು ಕರುನಾಡಿಗೇ ತಂದು ಪ್ರಾಣಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದಾರೆ ಶಾಸಕ ಇಕ್ಬಾಲ್ ಹುಸೇನ್. ಗ್ರಹವನ್ನು ರಾಮನಗರದಲ್ಲಿ ಪ್ರತಿಷ್ಠಾಪನೆ ಮಾಡಲು ಮುಂದಾಗಿರುವ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ಗೆ ಪತ್ರ ಬರೆಯಲು ಮುಂದಾಗಿದ್ದಾರೆ.
ಅಯೋಧ್ಯೆಯಲ್ಲಿ ಮೂರು ವಿಗ್ರಹ ಪೈಕಿ ಕನ್ನಡಿಗ ಗಣೇಶ್ ಭಟ್ ವಿಗ್ರಹವನ್ನು ರಾಮನಗರಕ್ಕೆ ನೀಡುವಂತೆ ಪತ್ರ ಬರೆಯಲಾಗುವುದು. ಗಣೇಶ್ ಭಟ್ ಅವರು ನಿನ್ನೆ ಕರೆಮಾಡಿದ್ದರು. ಜಿಲ್ಲೆಯ ಪರವಾಗಿ ಅವರಿಗೆ ಶುಭಾಶಯ ತಿಳಿಸಿದ್ದೇನೆ. ಸೂಕ್ಷ್ಮವಾದ ವಿಷಯ ನಿಜವಾದ ರಾಮಭಕ್ತರು ಎಂದು ತೋರುತ್ತದೆ. ವಿಗ್ರಹಕ್ಕಾಗಿ ಖಂಡಿತವಾಗಿಯೂ ಪತ್ರ ಬರೆಯುತ್ತೇನೆ ಎಂದಿದ್ದಾರೆ ಇಕ್ಬಾಲ್ ಹುಸೇನ್.
ದೇವರಿಗಿಂತ ದೊಡ್ಡದು ಯಾವುದೂ ಇಲ್ಲ. ಈ ಬಜೆಟ್ನಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬೇಡಿಕೆಯಿಟ್ಟಿದ್ದೇನೆ. ಪ್ರವಾಸೋದ್ಯಮ ಇಲಾಖೆಗೂ ಸಹ ಮನವಿ ಮಾಡಿದ್ದೇವೆ. ವಿಶೇಷವಾಗಿ ರಾಮೋತ್ಸವ ಹಾಗೂ ರಾಮ ಮಂದಿರ ಕಟ್ಟಲು ಮುಂದಾಗುತ್ತೇವೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಂತರ ರಾಮನಗರದಲ್ಲಿ ಅದ್ದೂರಿಯಾಗಿ, ವಿಜೃಂಭಣೆಯಿಂದ ಮತ್ತು ಭಾರೀ ಪ್ರಮಾಣದಲ್ಲಿ ರಾಮೋತ್ಸವ ಮಾಡಬೇಕೆಂಬ ಮಾತು ಕಾಂಗ್ರೆಸ್ ನಾಯಕರ ಬಾಯಲ್ಲಿ ಬರುತ್ತಿದೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡುತ್ತಾ, ರಾಮನಗರದಲ್ಲಿ ರಾಮೋತ್ಸವ ಆಯೋಜಿಸುವುದು ನಿಶ್ಚಿತ, ಇದು ಸಾಮಾನ್ಯಮಟ್ಟದ ಕಾರ್ಯಕ್ರಮವಲ್ಲ, ಇತಿಹಾಸದ ಪುಟಗಳಲ್ಲಿ ದಾಖಲಾಗಬಹುದಾದ ಉತ್ಸವ ಆಗಲಿದೆ ಹೇಳಿದ್ಧಾರೆ.
ಹೊನ್ನಾವರದ ಗಣೇಶ್ ಭಟ್ ಅವರಿಗೆ ವಿಗ್ರಹವನ್ನು ಮ್ಯೂಸಿಯಮ್ಮಿನಲ್ಲಿಡುವುದಕ್ಕೆ ಇಷ್ಟವಿಲ್ಲ. ದೇಶದ ಯಾವುದಾದರೂ ದೇವಸ್ಥಾನದಲ್ಲಿ ವಿಗ್ರಹವನ್ನು ಪ್ರಾಣಪ್ರತಿಷ್ಠಾಪನೆ ಮಾಡಿ, ದಿನನಿತ್ಯ ಪೂಜೆ ನೆರವೇರುವಂತಾಗಲಿ ಎಂದೇ ಹೇಳುತ್ತಾರೆ. ವಿಗ್ರಹ ಪ್ರಾಣಪ್ರತಿಷ್ಠಾಪನೆ ಕರ್ನಾಟಕದಲ್ಲೇ ಆದರೆ ಸಂತೋಷವೇ ಬೇರೆ ಎಮದು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಗಣೇಶ್ ಭಟ್ ಅವರು ರಾಘವೇಶ್ವರ ಸ್ವಾಮಿಗಳ ಶಿಷ್ಯರೂ ಹೌದು. ರಾಘವೇಶ್ವರ ಭಾರತಿಯವರೂ ವಿಗ್ರಹವನ್ನು ತರುವುದಕ್ಕೆ ಉತ್ಸುಕರಾಗಿದ್ಧಾರೆ.
ಮತ್ತೊಂದು ಕಡೆ ವಿಗ್ರಹದ ಮೂಲ ಶಿಲೆ ದೊರೆತಿದ್ದ ಚಾಮರಾಜನಗರದಲ್ಲಿಯೂ ರಾಮಮಂದಿರ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಜಿಟಿ ದೇವೇಗೌಡರೂ ವಿಗ್ರಹವನ್ನು ತರಲು ಮನಸ್ಸು ಮಾಡಿದ್ಧಾರೆ.
ಟ್ರಸ್ಟ್ ಹೇಳಿದ್ದೇ ಅಂತಿಮ :
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಮೊದಲೇ ಹೇಳಿದಂತೆ ಆಯ್ಕೆಯಾಗುವ ವಿಗ್ರಹವನ್ನು ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು ಹಾಗೂ ಉಳಿದ ವಿಗ್ರಹಗಳನ್ನೂ ದೇವಸ್ಥಾನದಲ್ಲಿಯೇ ಇಡಲಾಗುವುದು ಎಂದು ಮೊದಲೇ ಹೇಳಿತ್ತು. ಆದರೆ ಈಗ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆಯೋ.. ಕಾದು ನೋಡಬೇಕು.



