ರಾಜಕಾರಣದಲ್ಲಿ ಅಷ್ಟೇ ಅಲ್ಲ, ಜೀವನದಲ್ಲಿ ಆಳು ಹಳ್ಳಕ್ಕೆ ಬಿದ್ದರೆ, ಆಳಿಗೊಂದು ಕಲ್ಲು ಎಂಬ ಗಾದೆಯೇ ಇದೆ. ಅದು ಪದೇ ಪದೇ ಪ್ರೂವ್ ಆಗುತ್ತಿದೆ. ಈಗ ಮುನಿರತ್ನ ಅವರಿಗೆ ಆಗಿರುವುದು ಕೂಡಾ ಅದೇ. ಕೇಸು ಬೀಳ್ತಿದ್ದಂತೆ ಮಿತ್ರರು ಎನಿಸಿಕೊಂಡಿದ್ದವರೆಲ್ಲ ದೂರವಾಗಿದ್ದಾರೆ. ದೂರವಾಗುತ್ತಿದ್ದಾರೆ.
ಎಸ್‌ಬಿಎಂ ಎಂದೇ ಖ್ಯಾತಿ ಪಡೆದಿದ್ದ ಮಿತ್ರಕೂಟ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ ಹಾಗೂ ಮುನಿರತ್ನ. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರನ್ನು ಸಿದ್ಧರಾಮಯ್ಯ ಕೂಡಾ ಎಸ್‌ಬಿಎಂ ಎಂದೇ ಕರೆಯುತ್ತಿದ್ದರು. ಆಪರೇಷನ್ ಕಮಲದಲ್ಲಿ ಇತರ ಕಾಂಗ್ರೆಸ್ ಶಾಸಕರು ಒಳಗಾಗಿದ್ದರು. ವಿಚಿತ್ರ ಎಂದರೆ ಈ ಮೂರೂ ಜನ ಇವತ್ತಿಗೂ ಸಿದ್ಧರಾಮಯ್ಯ ವಿರುದ್ಧ ಮಾತನಾಡುವುದಕ್ಕೆ ಹಿಂದೇಟು ಹಾಕ್ತಾರೆ. ಅಂತಹ ಎಸ್‌ಬಿಎಂ ಗ್ರೂಪಿನಲ್ಲಿದ್ದ ಎಸ್ ಟಿ ಸೋಮಶೇಖರ್ ಅವರು ತಮ್ಮ ಒಂದು ಕಾಲದ ಗುಂಪಿನ ಸದಸ್ಯನ ವಿರುದ್ಧವೇ ಅಖಾಡಕ್ಕಿಳಿದಿದ್ದಾರೆ. ಬಿಜೆಪಿ ಪಕ್ಷದಲ್ಲಿದ್ದರೂ.. ತಾವೂ ಸ್ವತಃ ಬಿಜೆಪಿ ಶಾಸಕರಾಗಿದ್ದರೂ.. ಮುನಿರತ್ನ ವಿರುದ್ಧ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮುನಿರತ್ನ ವಿರುದ್ಧ ನಿಂತಿರುವವರಲ್ಲಿ ಅವರಷ್ಟೇ ಅಲ್ಲ, ಕೆಲವು ಮಿತ್ರರೂ ಬಹಿರಂಗವಾಗಿ ಮಾತನ್ನೇ ಆಡುತ್ತಿಲ್ಲ.
ಹಲವು ವಿಷಯಗಳಲ್ಲಿ ಪಕ್ಷದಲ್ಲಿಯೂ ವೈರತ್ವ ಕಟ್ಟಿಕೊಂಡಿದ್ದ ಮುನಿರತ್ನ ಅವರ ಪರವಾಗಿ ಒಬ್ಬರೇ ಒಬ್ಬ ಶಾಸಕರೂ ನಿಂತಿಲ್ಲ. ಯಡಿಯೂರಪ್ಪ ವಿರೋಧಿ ಬಣದಲ್ಲಿದ್ದರೂ, ಯತ್ನಾಳ್ ಮತ್ತು ಯಡಿಯೂರಪ್ಪ ಬಣ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು. ಆದರೆ, ಇದ್ದುದರಲ್ಲಿ ವಿಜಯೇಂದ್ರ ಅವರೇ ಮುನಿರತ್ನ ಅವರ ಪರವಾಗಿ ಮಾತನಾಡುತ್ತಿದ್ದಾರೆ. ಆದರೆ, ಮುನಿರತ್ನ ಅವರಿಂದ ಟಿಪ್ಪೂ ಸುಲ್ತಾನ್ ವಿರೋಧಿ ಹೋರಾಟದಲ್ಲಿ ಮೈಲೇಜ್ ಪಡೆದುಕೊಂಡಿದ್ದ ಒಬ್ಬ ನಾಯಕರೂ ಮುನಿರತ್ನ ಬೆನ್ನಿಗೆ ನಿಂತಿಲ್ಲ.
ಈ ಮಧ್ಯೆ ಬಿಬಿಎಂಪಿ ಗುತ್ತಿಗೆದಾರನಿಗೆ ಜಾತಿ ನಿಂದನೆ, ಜೀವ ಬೆದರಿಕೆ ಹಾಗೂ ವಂಚನೆ ಪ್ರಕರಣದಲ್ಲಿ ಬಂಧನವಾಗಿದ್ದ ಬಿಜೆಪಿ ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರಿನ ಬಿಬಿಎಂಪಿ ಗುತ್ತಿಗೆದಾರನೊಬ್ಬನಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ದಲಿತರಿಗೆ ಜಾತಿ ನಿಂದನೆ ಮಾಡಿದ್ದರು. ಜೊತೆಗೆ, ಇದೇ ವ್ಯಕ್ತಿಯ ಮೇಲೆ ಜೀವ ಬೆದರಿಕೆ ಹಾಗೂ ವಂಚನೆಯನ್ನೂ ಮಾಡಿದ್ದಾರೆ ಎಂದು ಕೇಸ್ ದಾಖಲಿಸಲಾಗಿತ್ತು. ಈ ಬಗ್ಗೆ ಆಡಿಯೋ ಸಮೇತ ದೂರು ನೀಡಲಾಗಿದ್ದ ಆಧಾರದಲ್ಲಿ ಪೊಲೀಸರು ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದರು.
ಇದೀಗ ಜಾಮೀನು ಪಡೆದಿರುವ ಮುನಿರತ್ನ ಅವರ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿದೆ. ಸಮಾಜ ಸೇವಕಿಯಾಗಿ ಗುರುತಿಸಿಕೊಂಡು ಬಿಜೆಪಿಯಲ್ಲೂ ಸಕ್ರಿಯವಾಗಿರುವ ರಾಜರಾಜೇಶ್ವರಿ ನಗರದ ಸುಮಾರು 40 ವರ್ಷದ ಮಹಿಳೆಯೊಬ್ಬರು ಮುನಿರತ್ನ, ಅವರ ಗನ್‌ಮ್ಯಾನ್ ವಿಜಯಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಎಂಬುವರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2020ರಿಂದ 2022ರವರೆಗೆ ಬಲಾತ್ಕಾರ ನಡೆಸಿ, ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ವಿಡಿಯೋಗಳೂ ಇವೆಯಂತೆ.
ದೂರಿನಲ್ಲಿ ಏನಿದೆ..?
ಕೋವಿಡ್ ಸಂದರ್ಭದಲ್ಲಿ ನನ್ನ ಸೇವಾ ಕಾರ್ಯ ಗುರುತಿಸಿದ್ದ ಮುನಿರತ್ನ ವಾಟ್ಸ್ ಆ್ಯಪ್ ಕರೆ ಮಾಡಿದ್ದರು. ನಿಮ್ಮ ಸೇವೆಯ ಬಗ್ಗೆ ಗೊತ್ತಾಯ್ತು, ಒಮ್ಮೆ ಬಂದು ಭೇಟಿ ಮಾಡಿ ಎಂದಿದ್ದರು. ಆಗ ಪರಿಚಯ ಮಾಡಿಕೊಂಡಿದ್ದರು. ಆಗಾಗ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದ ಮುನಿರತ್ನ ಅವರರು. ಒಮ್ಮೆ ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದರು. ನಾನು ನಿರಾಕರಿಸಿದೆ.
ಮತ್ತೊಮ್ಮೆ ಕರೆ ಮಾಡಿ, ನಿಮ್ಮಿಂದ ಒಂದು ಸಹಾಯವಾಗಬೇಕು ಎಂದು ಕೇಳಿ, ಸ್ಥಳವೊಂದಕ್ಕೆ ಬರಲು ಸೂಚಿಸಿದ್ದರು. ಅದರಂತೆ, ನಾನು ಹೋದಾಗ ನಿನ್ನ ನೋಡಿದರೆ ಮೈ ಜುಮ್ ಎನ್ನುತ್ತದೆ ಎನ್ನುತ್ತಾ ತಬ್ಬಿಕೊಳ್ಳಲು ಮುಂದಾದರು. ನಾನು ಆಕ್ಷೇಪಿಸಿದಾಗ, ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲಾ ಕಾಮನ್ ಎಂದು ಹೇಳಿ ಮುಂದುವರಿದರು. ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ‘ನಾನು ಶಾಸಕ. ಅಪಾರ ಜನಬೆಂಬಲವಿದೆ. ನಿನ್ನ ವಿರುದ್ದವೇ ಕಂಪ್ಲೆಂಟ್ ಮಾಡುತ್ತೇನೆ. ಸುಮ್ಮನಿದ್ದರೆ ಸರಿ’ ಎಂದು ಅತ್ಯಾಚಾರ ಎಸಗಿದ್ದಾರೆ.
ಇಲ್ಲಿ ನಡೆದ ವಿಷಯವನ್ನು ಯಾರಿಗೂ ತಿಳಿಸಬೇಡ. ಈ ಕೊಠಡಿಯಲ್ಲಿ ಕ್ಯಾಮೆರಾ ಅಳವಡಿಸಿದ್ದು, ಎಲ್ಲವೂ ರೆಕಾರ್ಡ್ ಆಗಿದೆ. ನಿನ್ನ ವಿಡಿಯೋ ಎಡಿಟ್ ಮಾಡಿ ಹಂಚುತ್ತೇನೆ ಎಂದು ಹೆದರಿಸಿದ್ದಾರೆ. ಅಲ್ಲದೆ ವಿಡಿಯೋ ಚಿತ್ರವನ್ನು ಟಿ.ವಿ.ಯಲ್ಲಿ ಹಾಕಿ ನನಗೆ ತೋರಿಸಿದ್ದಾರೆ. ಕಾಲು ಹಿಡಿದು ಕೇಳಿಕೊಂಡರೂ ವಿಡಿಯೋ ಡಿಲಿಟ್ ಮಾಡಲಿಲ್ಲ. ಆ ವಿಡಿಯೋ ಇಟ್ಟುಕೊಂಡು ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ,
ವಿಪಕ್ಷದಲ್ಲಿರುವ ಮುಖಂಡರೊಬ್ಬರ ವಿಡಿಯೋ ಮಾಡಿಸಿದ್ದಾರೆ. ಪೊಲೀಸರ ವಿಡಿಯೋಗಳನ್ನು ಕೂಡ ತಮ್ಮ ಬಳಿ ಇರಿಸಿಕೊಂಡು ಅವರಿಗೆಲ್ಲ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೆ, ಮಾಗಡಿ ಕ್ಷೇತ್ರದ ಮಾಜಿ ಶಾಸಕರೊಬ್ಬರು ನನ್ನ ಜೊತೆ ಸಲುಗೆಯಿಂದ ಮಾತನಾಡುವಂತೆ ಮಾಡಿ, ಅದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲೆ ಮಾಡಿದ್ದಾರೆ. ರೆಸಾರ್ಟ್ , ಹೋಟೆಲ್ , ಹೋಮ್ ಸ್ಟೇಗಳಿಗೆ ನನ್ನನ್ನು ಹಾಗೂ ಇತರ ಮಹಿಳೆಯರನ್ನು ಕರೆಸಿಕೊಂಡು ಬಳಸಿಕೊಂಡಿದ್ದಾರೆ. ಈ ಪೈಕಿ ಕೆಲ ಎಚ್‌ಐವಿ ಸೋಂಕು ಇರುವ ಮಹಿಳೆಯರನ್ನು ಸಹ ಬಳಸಿಕೊಂಡಿದ್ದಾರೆ. ಮರ್ಯಾದೆ ಹಾಗೂ ಪ್ರಾಣಕ್ಕೆ ಅಂಜಿ ಅವರು ಹೇಳಿದಂತೆ ಕೇಳಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಮುನಿರತ್ನ ಅವರಿಗೀಗ ಎಲ್ಲವೂ ಏಕಕಾಲಕ್ಕೆ ಒದ್ದುಕೊಂಡು ಅಟಕಾಯಿಸಿರುವಂತೆ ಕಾಣುತ್ತಿದೆ. ಅತ್ತ ಮಿತ್ರರೂ ಜೊತೆಯಲ್ಲಿಲ್ಲ. ಇತ್ತ ಮಿತ್ರರಂತಿದ್ದವರೇ ಶತ್ರುಗಳಾಗಿದ್ಧಾರೆ. ಶತ್ರುಗಳ ಶಕ್ತಿಯೂ ಈಗ ಹೆಚ್ಚಾಗಿದೆ.



