ಕಾಟೇರ. 2023ರ ಕೊನೆಗೆ ರಿಲೀಸ್ ಆಗಿ ಭರ್ಜರಿ ಲಾಭ ಗಳಿಸಿದ ಸಿನಿಮಾ. 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿರುವ ಸಿನಿಮಾ. ಈ ಸಿನಿಮಾ ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂದ ಉಳುವವನೇ ಹೊಲದೊಡೆಯ ನೀತಿಯನ್ನು ಜನರಿಗೆ ತಲುಪುವಂತೆ ವಿವರಿಸಿತು. ಜೊತೆಗೆ ಕೆಳಜಾತಿಗಳವರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆಯನ್ನೂ ತೆರೆದಿಟ್ಟಿತು. ಅಂತಾದ್ದೊಂದು ಚಿತ್ರ ಕೊಟ್ಟ ಕಾಟೇರ ಚಿತ್ರತಂಡವನ್ನು ಮಂಡ್ಯದ ರೈತ ಸಂಘ ಅಭಿನಂದಿಸುತ್ತಿದೆ.
ದರ್ಶನ್ ಅವರಿಂದ ದರ್ಶನ್ ಅವರಿಗೆ ಅಭಿನಂದನೆ ಸಮಾರಂಭ ನಡೆಯುತ್ತಿದೆ. ಅಭಿನಂದನೆ ಸಲ್ಲಿಸುತ್ತಿರುವ ದರ್ಶನ್ ಮಂಡ್ಯದ ಪಾಂಡವಪುರ ಕ್ಷೇತ್ರದ ಶಾಸಕ. ರೈತ ಸಂಘದ ನಾಯಕರೂ ಹೌದು. ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ನಡೆಸಿದ್ದ ದರ್ಶನ್, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಗೆದ್ದಿದ್ದಾರೆ. ಪಕ್ಷೇತರ ಎಂದರೆ ರೈತ ಸಂಘದ ಪರವಾಗಿ ನಿಂತಿದ್ದರು. ಆದ ರಾಜಕೀಯ ಬದಲಾಗಿತ್ತು. ಸುಮಲತಾ ಅವರು ದರ್ಶನ್ ಪರ ಪ್ರಚಾರಕ್ಕೆ ಬರಲಿಲ್ಲವಾದರೂ, ನಟ ದರ್ಶನ್ ಪ್ರಚಾರ ಮಾಡಿದ್ದರು.
ಇತ್ತೀಚೆಗೆ ಕಾಟೇರ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದ ದರ್ಶನ್, ದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸಲು ಮಂದಾಗಿದ್ಧಾರೆ. ಶಾಸಕ ದರ್ಶನ್, ರೈತ ಸಂಘದ ಪುಟ್ಟಣ್ಣಯ್ಯ ಅವರ ಪುತ್ರ. ಪುಟ್ಟಣ್ಣಯ್ಯ ಕಡೆಯ ದಿನಗಳವರೆಗೂ ರೈತ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು. ಪುಟ್ಟಣ್ಣಯ್ಯ ಅವರ 75ನೇ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಜನವರಿ 26ರಂದು ಸಮಾರಂಭ ನಡೆಯುತ್ತಿದೆ. ಪಾಂಡವಪುರ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ. ಕಾರ್ಯಕ್ರಮ ನಡೆಯುವುದು ಮಧ್ಯಾಹ್ನ 3 ಗಂಟೆಯ ನಂತರ.
ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಷ್ಟೇ ಅಲ್ಲ, ಸಂಸದೆ ಸುಮಲತಾ ಅಂಬರೀಷ್, ಕಾಟೇರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಕಥೆಗಾರ ಜಡೇಶ್ ಕೆ ಹಂಪಿ, ಸಂಭಾಷಣೆ ಬರೆದಿದ್ದ ಮಾಸ್ತಿ, ನಾಯಕಿ ಆರಾಧನಾ, ಮಾಲಾಶ್ರೀ, ಶೃತಿ, ಅವಿನಾಶ್, ಬಿರಾದಾರ್, ಕುಮಾರ್ ಗೋವಿಂದ್, ಶ್ವೇತಾ ಪ್ರಸಾದ್, ಸಂಗೀತ ನಿರ್ದೇಶಕ ಹರಿಕೃಷ್ಣ ಎಲ್ಲರೂ ಇರುತ್ತಾರೆ.



