ಚಿಲಕೂರು. ಈ ಊರು ಇರೋದು ಆಂಧ್ರಪ್ರದೇಶದಲ್ಲಿ. ಚಿಲಕೂರು ಅಂದ್ರೆ ಗಿಣಿಗಳ ಊರು ಎಂದರ್ಥ. ಇದಿರೋದು ಹೈದರಾಬಬಾದಿನ ಸಮೀಪ. ರಂಗಾರೆಡ್ಡಿ ಜಿಲ್ಲೆಯಲ್ಲಿ ಬರುವ ಈ ಊರಿನಲ್ಲಿ ಬಾಲಾಜಿ ಟೆಂಪಲ್ ಇದೆ. ಹೈದರಾಬಾದಿನಿಂದ ಹೊರಟರೆ ಟ್ರಾಫಿಕ್ ಇಲ್ಲದಿದ್ದರೆ ಅರ್ಧ ಗಂಟೆಯಲ್ಲಿ ಈ ಚಿಲಕೂರು ತಲುಪಬಹುದು. ಸುಮಾರು 27 ಕಿಮೀ ದೂರ ಇದೆ ಈ ಚಿಲಕೂರಿನ ಬಾಲಾಜಿ ದೇವಸ್ಥಾನ.
ಈ ಚಿಲಕೂರು ದೇವಸ್ಥಾನ ಪ್ರೇಮಿಗಳ ಪಾಲಿಗೆ ಲವರ್ಸ್ ಟೆಂಪಲ್. ವಿದೇಶಕ್ಕೆ ಹೋಗೋವ್ರ ಪಾಲಿಗೆ ವೀಸಾ ಟೆಂಪಲ್. ಚಿಲಕೂರು ಬಾಲಾಜಿ ದೇಗುಲ ‘ವೀಸಾ ದೇಗುಲ’ ಎಂದೇ ಖ್ಯಾತವಾಗಿದೆ. ಅಮೆರಿಕಗೆ ಹೋಗಬೇಕು ಅನ್ನೋ ಕನಸು ಹೊತ್ತ ಸಾವಿರಾರು ಜನರನ್ನು ನಿತ್ಯವೂ ಬರಮಾಡಿಕೊಳ್ತಿದೆ ಈ ದೇಗುಲ. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಲು, ನೌಕರಿ ಸಂಪಾದಿಸಲು ಬಯಸುವವರು ಈ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರತಿ ದಿನವೂ ಸಾವಿರಾರು ಜನರು ಈ ದೇಗುಲಕ್ಕೆ ಬಂದು ಬಾಲಾಜಿಯ ಧ್ಯಾನ ಮಾಡುತ್ತಾ ಪ್ರದಕ್ಷಿಣೆ ಹಾಕುತ್ತಾರೆ.
ಆಂಧ್ರ ಪ್ರದೇಶ ಮಾತ್ರವಲ್ಲ, ನೆರೆಯ ಹಲವು ರಾಜ್ಯಗಳ ವಿದ್ಯಾರ್ಥಿಗಳು ಚಿಲಕೂರಿಗೆ ಆಗಮಿಸಿ ಬಾಲಾಜಿಯ ದರ್ಶನ ಪಡೆದ ಬಳಿಕ ಅಮೆರಿಕ ವೀಸಾಗಿ ಅರ್ಜಿ ಹಾಕುತ್ತಾರೆ. ತಮ್ಮ ಅಮೆರಿಕ ಕನಸುಗಳಿಗೆ ಇಲ್ಲಿಂದಲೇ ಸಿದ್ದತೆ ನಡೆಸುತ್ತಾರೆ.
ಸಣ್ಣ ಪುಟ್ಟ ಬೇಡಿಕೆ ಇದ್ದವರು ಈ ಚಿಲಕೂರಿಗೆ ಹೋಗಿ ಬಾಲಾಜಿ ದೇವಸ್ಥಾನಕ್ಕೆ 11 ಸುತ್ತು ಪ್ರದಕ್ಷಿಣೆ ಹಾಕ್ತಾರೆ. ಆದರೆ, ಪ್ರೇಮಿಗಳು ಹಾಗೂ ವೀಸಾ ಆಕಾಂಕ್ಷಿಗಳು ಮಾತ್ರ 108 ಸುತ್ತು ಪ್ರದಕ್ಷಿಣೆ ಹಾಕ್ತಾರೆ. ಇಲ್ಲಿಗೆ ಬರುವ ಭಕ್ತರ ಮನೋಭಿಲಾಷೆಗಳು ಒಂದೆರಡಲ್ಲ! ಉನ್ನತ ಶಿಕ್ಷಣ, ಪರೀಕ್ಷೆಯಲ್ಲಿ ಪಾಸ್ ಆಗಬೇಕು, ಅಮೆರಿಕದಲ್ಲಿ ಉದ್ಯೋಗ ಸಿಗಬೇಕು, ಪ್ರೇಮ ಫಲಿಸಬೇಕು, ಮದುವೆ ಆಗಬೇಕು, ಮಕ್ಕಳು ಆಗಬೇಕು.. ಹೀಗೆ ಹಲವು ಹರಕೆಗಳನ್ನು ಭಕ್ತರು ವಿಷ್ಣು ರೂಪಿಯಾದ ಬಾಲಾಜಿ ಬಳಿ ಕೇಳಿಕೊಳ್ಳುತ್ತಾರೆ.
ವೀಸಾ ಆಗಲಿ, ಪ್ರೀತಿಯಾಗಲಿ, ಗೆಲ್ಲುವುದು ಬಿಡುವುದು ಅವರವರ ಸಾಮರ್ಥ್ಯಕ್ಕೆ ಬಿಟ್ಟ ಪ್ರಶ್ನೆ. ಆದರೆ, ದೈವ ಬಲವೂ ಇರಬೇಕು. ಹಾಗಾಗಿ ಬರುತ್ತೇವೆ, ಭಕ್ತಿಯಿಂದ ಪೂಜಿಸುತ್ತೇವೆ ಅನ್ನೋದು ಭಕ್ತರ ಮಾತು. ಹುಡುಗಿ ಅಥವಾ ಹುಡುಗ ಪ್ರೀತಿಯಿಂದ ದೂರವಾಗುತ್ತಿದ್ದಾರೆ ಎಂಬ ಭಾವನೆ ಹೆಚ್ಚಾದ ಸಂದರ್ಭದಲ್ಲಿ ಪ್ರೇಮಿಗಳು ಈ ದೇಗುಲಕ್ಕೆ ಬರುತ್ತಾರೆ. ಪ್ರದಕ್ಷಿಣೆ ಹಾಕ್ತಾರೆ. ಪ್ರೀತಿಯನ್ನೂ ಗೆಲ್ಲುತ್ತಾರೆ ಅನ್ನೋದು ಇಲ್ಲಿಗೆ ಬರುವ ಭಕ್ತರ ನಂಬಿಕೆ.
ಈ ದೇವಸ್ಥಾನದ ಇನ್ನೂ ಒಂದು ವಿಶೇಷತೆ ಎಂದರೆ.. ಈ ದೇವಸ್ಥಾನದಲ್ಲಿ ಹುಂಡಿ ಇಲ್ಲ. ಭಕ್ತರಿಂದ ಯಾವುದೇ ವಿಶೇಷ ಸೇವೆ ಎಂದು ಅದೂ ಇದೂ ಎಂದು ಹಣ ಪಡೆಯುವುದಿಲ್ಲ. ಯಾವ ವಿಐಪಿಗಳು ಹೋದರೂ.. ಅಷ್ಟೇ.. ವಿಐಪಿ ಟ್ರೀಟ್ʻಮೆಂಟ್ ಇಲ್ಲ. ಸ್ಪೆಷಲ್ ದರ್ಶನವೂ ಇಲ್ಲ. ಸ್ಪೆಷಲ್ ಪೂಜೆಯೂ ಇಲ್ಲ. ಸಾಮಾನ್ಯ ಭಕ್ತರಂತೆ ಹೋಗಬೇಕು. ಬರಬೇಕು. ಪೂಜೆ ಮಾಡಿಸಬೇಕು. ಹರಕೆ ಹೊತ್ತಿದ್ದರೆ ತೀರಿಸಿಕೊಂಡು ಬರಬೇಕು. ಅಷ್ಟೆ.



