ನಟಿ ರಾಧಿಕಾ ಕುಮಾರಸ್ವಾಮಿ ಅವರು ಕೋಟಿ ಕೋಟಿಗಳ ಒಡತಿ. 38 ವರ್ಷ. 2002ರಲ್ಲಿ ನೀಲ ಮೇಘ ಶ್ಯಾಮ, ನಿನಗಾಗಿ ಚಿತ್ರದ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಅದಾದ ಮೇಲೆ ಶಿವಣ್ಣ ಎದುರು ತಂಗಿಯಾಗಿ, ದರ್ಶನ್, ವಿಜಯ್ ರಾಘವೇಂದ್ರ, ಉಪೇಂದ್ರ, ರವಿಚಂದ್ರನ್ ಎದುರು ನಾಯಕಿಯಾಗಿ ಮಿಂಚಿದ್ದ ರಾಧಿಕಾ, ಕುಮಾರಸ್ವಾಮಿ ಅವರ ಜೊತೆ ಸಂಸಾರಿಕ ಜೀವನ ಶುರುವಾದ ಮೇಲೆ ಚಿತ್ರರಂಗ ಬಿಟ್ಟರು. ಚಿತ್ರರಂಗ ಬಿಟ್ಟರು ಎಂದರೆ.. ಒಂದಿಷ್ಟು ಕಾಲ ಅಭಿನಯದಿಂದ ದೂರ ಉಳಿದರಷ್ಟೇ.
ನಂತರ ಕುಮಾರಸ್ವಾಮಿ ಅವರೂ ರಾಧಿಕಾ ಅವರಿಂದ ದೂರಾಗಿದ್ದಾರೆ. ಇತ್ತ ರಾಧಿಕಾ ನಟನೆ, ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ.
ಆದರೆ.. ಈ ಮಧ್ಯೆ ಅವರು ಸಚಿವ ಜಮೀರ್ ಅಹ್ಮದ್ ಅವರಿಗೇ ಸಾಲ ಕೊಟ್ಟಿದ್ದಾರೆ. ಅದೂ ಕಡಿಮೆ ಮೊತ್ತವೇನಲ್ಲ. ಬರೋಬ್ಬರಿ 2.5 ಕೋಟಿಯಷ್ಟು ಹಣ.
ರಾಧಿಕಾ ಕುಮಾರಸ್ವಾಮಿ ಸಂಪತ್ತಿನ ಲೆಕ್ಕ ಬಂದಿದ್ದೇಕೆ..?
ರಾಧಿಕಾ ಉದ್ಯಮಿಯಷ್ಟೇ. ಜನಪ್ರತಿನಿಧಿ ಅಲ್ಲ. ಕುಮಾರಸ್ವಾಮಿ ಅವರ ಅಧಿಕೃತ ಸಂಸಾರದಲ್ಲೂ ರಾಧಿಕಾ ಅವರ ಹೆಸರಿಲ್ಲ. ಹೀಗಿದ್ದೂ ಅವರ ಆಸ್ತಿಯ ಲೆಕ್ಕ ಬಂದಿದ್ದೇಕೆ ಎಂದರೆ.. 2019ರ ರೇಡ್ ಕಥೆ ಹೇಳಬೇಕು. ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಜಮೀರ್ ಅಹಮದ್ ಖಾನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ 2019 ರಲ್ಲಿ ಜಾರಿ ನಿರ್ದೇಶನಾಲಯ ರೇಡ್ ಮಾಡಿತ್ತು. ಆಗ ಜಮೀರ್ ಅವರಿಗೆ ಹಣಕಾಸು ನೆರವು ನೀಡಿದ್ದವರ ವಿವರಗಳನ್ನು ಇಡಿ ಸಂಗ್ರಹಿಸಿತ್ತು. ಆ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಇದ್ದರು.
ಆಗ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ಕುಮಾರಸ್ವಾಮಿ ಸಿಎಂ ಆಗಿದ್ದರು. ಆಗಲೂ ಜಮೀರ್ ಅಹ್ಮದ್ ಸಚಿವರಾಗಿದ್ದರು. ಅದಾದ ನಂತರ ಜಮೀರ್ ವಿರುದ್ಧ ಭ್ರಷ್ಟಾಚಾರ ವಿಗ್ರಹದಳ (ಎಸಿಬಿ) ಪ್ರಕರಣ ದಾಖಲಿಸಿತ್ತು. ಬಳಿಕ ರಾಜ್ಯದಲ್ಲಿ ಎಸಿಬಿ ರದ್ದಾದ ಕಾರಣ, ಪ್ರಕರಣ ಲೋಕಾಯುಕ್ತಕ್ಕೆ ಟ್ರಾನ್ಸ್‌ಫರಾಗಿತ್ತು. ಅದರಂತೆ ತನಿಖೆಗೆ ಹಾಜರಾಗುವಂತೆ ರಾಧಿಕಾ ಕುಮಾರಸ್ವಾಮಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್‌ಗೆ ರಾಧಿಕಾ ಕುಮಾರಸ್ವಾಮಿ ಈ ವಿವರಣೆ ಕೊಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಲಕ್ಕಿ ಚಿತ್ರದ ಲಾಭಾಂಶದಲ್ಲಿ ಸಾಲ ಕೊಟ್ಟಿದ್ದೆ : ರಾಧಿಕಾ
ಜಮೀರ್ ಅಹ್ಮದ್ ಅವರಿಗೆ ಸಾಲ ನೀಡಿದ್ದಾಗಿ ಒಪ್ಪಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಾಲ ಕೊಟ್ಟಿರುವುದಕ್ಕೆ ಆದಾಯದ ಮೂಲ ಯಾವುದು ಎಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಸಚಿವರ ಸಂಕಷ್ಟದ ಸಂದರ್ಭದಲ್ಲಿ ಹಣ ನೀಡಿದ್ದು ನಿಜ ಎಂದಿರುವ ರಾಧಿಕಾ, ಹಣದ ಮೂಲದ ಬಗ್ಗೆಯೂ ವಿವರಣೆ ಕೊಟ್ಟಿದ್ದಾರೆ.
2012ರಲ್ಲಿ ಶಮಿಕಾ ಎಂಟರ್ಪ್ರೈಸಸ್ ಹೆಸರಿನಲ್ಲಿ ಯಶ್ ಮತ್ತು ರಮ್ಯಾ ಅಭಿನಯದ ಚಿತ್ರ ನಿರ್ಮಾಣ ಮಾಡಿದ್ದು ಅದರ ಯಶಸ್ಸು ಮತ್ತು ಸ್ಯಾಟಲೈಟ್ ಹಕ್ಕಿನಿಂದ ದೊರೆತ ಲಾಭಾಂಶದಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿಯನ್ನು ಜಮೀರ್ ಅವರಿಗೆ ಸಾಲ ಕೊಟ್ಟಿದ್ದರಂತೆ. ಆ ಸಾಲದ ಹಣವನ್ನು ಜಮೀರ್ ವಾಪಸ್ ನೀಡಿದ್ದಾರೆಯೇ.. ಇಲ್ಲವೇ ಎನ್ನುವುದು ಬಹಿರಂಗವಾಗಿಲ್ಲ.
ರಾಧಿಕಾ ಆಸ್ತಿ ಎಷ್ಟಿದೆ..?
ರಾಧಿಕಾ ಅವರು ಇದುವರೆಗೆ ನಟಿಸಿರುವುದು 32 ಸಿನಿಮಾ. ನಿರ್ಮಾಪಕಿಯಾಗಿ ಲಕ್ಕಿ, ಸ್ವೀಟಿ ನನ್ನ ಜೋಡಿ ಹಾಗೂ ಭೈರಾದೇವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಲಕ್ಕಿಯಲ್ಲಿ ಯಶ್ ಹೀರೋ. ರಮ್ಯಾ ಹೀರೋಯಿನ್. ಇನ್ನುಳಿದ ಎರಡು ಸಿನಿಮಾಗಳಲ್ಲೂ ರಾಧಿಕಾ ಅವರೇ ಹೀರೋಯಿನ್ ಕಂ ಹೀರೋ. ಕುಮಾರಸ್ವಾಮಿ ಅವರ ಜೊತೆ ಸಾಂಸಾರಿಕ ಜೀವನ ಶುರುವಾಗೋಕೂ ಮುಂಚೆ ರತನ್ ಕುಮಾರ್ ಎಂಬುವವರ ಜೊತೆ ಮದುವೆಯಾಗಿತ್ತು. ಆತ 2002ರಲ್ಲೇ ಮೃತಪಟ್ಟಿದ್ದು, ಅದಾದ ನಂತರವೇ ರಾಧಿಕಾ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇನ್ನು ರಾಧಿಕಾ ಅವರಿಗೆ ಸಿನಿಮಾ ಹೊರತಾಗಿ ಬೇರೆ ಉದ್ಯಮಗಳೂ ಇವೆ.
ಆದರೆ ಅಧಿಕೃತ ಲೆಕ್ಕ ಸಿಕ್ಕಿಲ್ಲ. ಕುಮಾರಸ್ವಾಮಿ ಅವರು ಎಲೆಕ್ಷನ್ನಿನಲ್ಲಿ ಆಸ್ತಿ ವಿವರ ಘೋಷಿಸುವಾಗ ರಾಧಿಕಾ ಅವರ ಆಸ್ತಿಯ ಲೆಕ್ಕವನ್ನೂ ಸೇರಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಹೈಕೋರ್ಟ್ ಎದುರು ಬಂದಿತ್ತು. ಹೈಕೋರ್ಟ್, ಅರ್ಜಿಯನ್ನೇ ವಜಾ ಮಾಡಿ, ಅರ್ಜಿದಾರರಿಗೆ ದಂಡ ವಿಧಿಸಿತ್ತು. ಒಂದು ಮೂಲದ ಪ್ರಕಾರ ರಾಧಿಕಾ ಅವರ ಬಳಿ 100 ಕೋಟಿಗೂ ಹೆಚ್ಚು ಆಸ್ತಿ ಇದೆ.
ಯಶ್, ರಮ್ಯಾ ಅಭಿನಯದ ಚಿತ್ರ ಲಕ್ಕಿ. ಆ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿಯೇ ಪ್ರೊಡ್ಯೂಸರ್. ಸಿನಿಮಾ ಒಂದು ಲೆವೆಲ್ಲಿಗೆ ಹಿಟ್ ಕೂಡಾ ಆಗಿತ್ತು. ಈಗ ಆ ಚಿತ್ರದ ವಿಷಯ ಮತ್ತೊಮ್ಮೆ ಸುದ್ದಿ ಮಾಡಿದೆ. ಆ ಚಿತ್ರದ ಒಂದಿಷ್ಟು ಲಾಭದ ಹಣವನ್ನು ರಾಧಿಕಾ ಕುಮಾರಸ್ವಾಮಿ ಅವರು, ಸಚಿವ ಜಮೀರ್ ಅಹ್ಮದ್ ಅವರಿಗೆ ಸಾಲವಾಗಿ ಕೊಟ್ಟಿದ್ರಂತೆ.



