ನಟಿ ಸಮಂತಾ, ದಕ್ಷಿಣ ಭಾರತದ ಲೇಡಿ ಸ್ಟಾರ್ ನಟಿಯರಲ್ಲಿ ಒಬ್ಬರು. ಅಂತಹ ನಟಿಯನ್ನು ಮಂತ್ರಿಯೊಬ್ಬ ಅವಳನ್ನು ನನ್ನ ಹತ್ತಿರ ಕಳಿಸು ಎನ್ನುತ್ತಾನೆ. ಆಕೆಯ ಮಾವ ಅಕ್ಕಿನೇನಿ ನಾಗಾರ್ಜುನ ಮತ್ತು ಪತಿ ನಾಗಚೈತನ್ಯ ಒಪ್ಪಿಕೊಳ್ತಾರೆ. ಸಮಂತಾಳನ್ನು ಹೋಗು ಅಂತಾ ಡಿಮ್ಯಾಂಡ್ ಮಾಡ್ತಾರೆ. ಆಕೆ ಒಪ್ಪೋದಿಲ್ಲ. ಮಂತ್ರಿಯ ಆಸೆ ಪೂರೈಸದ ಸಮಂತಾಳನ್ನು ಬೈತಾರೆ. ಗೆಟ್ ಔಟ್ ಅಂತಾರೆ. ಆಮೇಲೆ ಅವರಿಬ್ಬರಿಗೆ ಡಿವೋರ್ಸ್ ಆಗುತ್ತೆ. ಇಡೀ ಚಿತ್ರರಂಗವನ್ನು ಕಾಸ್ಟಿಂಗ್ ಕೌಚ್ ಕಾಡುತ್ತಿರುವ ಹೊತ್ತಿನಲ್ಲೇ ಚಿತ್ರರಂಗವೇ ಬೆಚ್ಚಿ ಬೀಳುವ ಮತ್ತೊಂದು ಭಯಾನಕ ಸುದ್ದಿ ತೆಲಂಗಾಣದಿಂದ ಬಂದಿದೆ.
ತೆಲುಗು ಚಿತ್ರರಂಗದಲ್ಲಿ ಇವತ್ತಿಗೂ ಉತ್ತರ ಸಿಗದ ಪ್ರಶ್ನೆ ಎಂದರೆ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್. ಡಿವೋರ್ಸ್ ಏಕಾಯ್ತು ಅನ್ನೋದಕ್ಕೆ ಅಕ್ಕಿನೇನಿ ನಾಗಾರ್ಜುನ ಕೂಡಾ ಉತ್ತರ ಕೊಟ್ಟಿಲ್ಲ. ಸಮಂತಾ ಕೊಡುವ ಮಾರ್ಮಿಕ ಉತ್ತರಗಳು ಯಾರಿಗೂ ಅರ್ಥವಾಗುತ್ತಿಲ್ಲ. ಹೀಗಿರುವಾಗಲೇ ತೆಲಂಗಾಣ ಸರ್ಕಾರದ ಮಂತ್ರಿಯೂ ಆಗಿರುವ ಕಾಂಗ್ರೆಸ್ ನಾಯಕಿ ಸುರೇಖಾ ವಿಸ್ಫೋಟಕ ಹೇಳಿಕೆ ನೀಡಿದ್ದಾರೆ.
ಆಕೆ ಮಾತನಾಡಿರುವುದು ಅಕ್ಕಿನೇನಿ ಕುಟುಂಬದ ಬಗ್ಗೆ ಹಾಗೂ ಮಾಜಿ ಸಿಎಂ ಕುಟುಂಬದ ಬಗ್ಗೆ. ಅಕ್ಕಿನೇನಿ ಕುಟುಂಬಕ್ಕೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ಅಕ್ಕಿನೇನಿ ನಾಗೇಶ್ವರ ರಾವ್, ತೆಲುಗು ಚಿತ್ರರಂಗವನ್ನು ಬೆಳೆಸಿದ ಮಹಾನ್ ಕಲಾವಿದ. ಎನ್‌ಟಿಆರ್ ಅವರಿಗೆ ಯಾವ ಸ್ಥಾನ ಇದೆಯೋ, ಅಂತಹುದೇ ದೊಡ್ಡ ಸ್ಥಾನ ಎಎನ್ʻಆರ್ ಅವರಿಗೂ ಇದೆ. ಅವರ ಪುತ್ರ ನಾಗಾರ್ಜುನ, ತೆಲುಗು ಚಿತ್ರರಂಗ ಕಂಡ ಅಪರೂಪದ ಕಲಾವಿದ. ಅವರ ಮಕ್ಕಳು ಕೂಡಾ ಸ್ಟಾರ್ ನಟರೇ. ಅಂತಹ ಒಬ್ಬ ಮಗ ನಾಗಚೈತನ್ಯ (ನಾಗಾರ್ಜುನ ಅವರ ಮೊದಲ ಪತ್ನಿಯ ಮಗ) ಅವರು ನಟಿ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದವರು. ಜೋಡಿ ಎಂದರೆ ಹೀಗಿರಬೇಕು ಎಂದುಕೊಂಡಿದ್ದಾಗಲೇ ಸಮಂತಾ, ನಾಗಚೈತನ್ಯ ಅವರಿಗೆ ಡಿವೋರ್ಸ್ ಕೊಟ್ಟಿದ್ದರು. ಪತಿ ನಾಗಚೈತನ್ಯ ಅವರಿಗೆ ಕಂಪೇರ್ ಮಾಡಿದರೆ, ಸಮಂತಾ ಪತಿಗಿಂತ ದೊಡ್ಡ ಸ್ಟಾರ್ ನಟಿ. ತೆಲುಗು, ತಮಿಳಿನಲ್ಲಿ ಹಲವು ಹಿಟ್ ಕೊಟ್ಟಿದ್ದಾರೆ. ಅಂತಹ ನಟಿಯನ್ನು ತೆಲಂಗಾಣದಲ್ಲಿ ಸಚಿವನಾಗಿದ್ದವನೊಬ್ಬ ಮಂಚಕ್ಕೆ ಕರೆದಿದ್ದ ಎಂದು ಆರೋಪಿಸಿರುವುದು ಯಾರೋ ಸಾಮಾನ್ಯ ವ್ಯಕ್ತಿಯಲ್ಲ. ತೆಲಂಗಾಣದ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿರುವ ಸುರೇಖಾ.
ಭಾರತ ರಾಷ್ಟ್ರೀಯ ಸಮಿತಿ (ತೆಲಂಗಾಣ ರಾಷ್ಟ್ರೀಯ ಸಮಿತಿ. ಟಿ.ಆರ್.ಎಸ್) ಪಕ್ಷದ ನಾಯಕರಾಗಿರುವ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್ ಅವರೇ ಡಿವೋರ್ಸ್ ಆಗುವುದಕ್ಕೆ ಕಾರಣ ಎನ್ನುವುದು ಸುರೇಖಾ ಅವರ ಹೇಳಿಕೆ. ಸುರೇಖಾ ಹೇಳಿಕೆ ಪ್ರಕಾರ ಈ ಹಿಂದೆ ತೆಲಂಗಾಣದಲ್ಲಿ ಬಿಆರ್‌ಎಸ್ ಸರ್ಕಾರವಿತ್ತು. ಆ ಸರ್ಕಾರದಲ್ಲಿ ಕೆಸಿಆರ್ ಸಿಎಂ ಆಗಿದ್ದರೆ, ಅವರ ಮಗ ಕೆಟಿಆರ್ (ಕೆಟಿ ರಾಮರಾವ್) ಮಿನಿಸ್ಟರ್ ಆಗಿದ್ದರು.
ಇತ್ತೀಚೆಗೆ ನಾಗಾರ್ಜುನ ಅವರ ಒಡೆತನದ ಕನ್ವೆನ್ಷನ್ ಹಾಲ್ ಧ್ವಂಸ ಮಾಡಿದರಲ್ಲ, ಆ ಧ್ವಂಸವಾದ ಕಟ್ಟಡವನ್ನು ಕೆಡವಿ ಹಾಕುವ ಪ್ರಸ್ತಾಪ, ಆಗಲೂ ಸರ್ಕಾರದ ಮುಂದೆ ಬಂದಿತ್ತು. ಬೇಡ, ಕೆಡವಬೇಡಿ ಎಂದು ಕೇಳಿದಾಗ, ಸಮಂತಾಳನ್ನು ನನ್ನ ಹತ್ತಿರ ಕಳಿಸು ಎಂದಿದ್ದರಂತೆ ಆಗ ಮಿನಿಸ್ಟರ್ ಆಗಿದ್ದ ಕೆಟಿಆರ್. ನಾಗಾರ್ಜುನ ಕೂಡಾ ಸಮಂತಾಳನ್ನು ಕಳಿಸೋದಕ್ಕೆ ಒಪ್ಪಿದ್ದರಂತೆ. ಆದರೆ ಗಂಡ ಮತ್ತು ಮಾವ ಎಷ್ಟು ಬೇಡಿಕೊಂಡರೂ ಸಮಂತಾ ಒಪ್ಪಲಿಲ್ಲ. ನನ್ನ ಮಾತು ಕೇಳೋದಿಲ್ಲ ಎಂದಾದ್ರೆ, ಹೊರಟು ಹೋಗು ಎಂದು ಹೇಳಿದ್ದರಂತೆ ನಾಗಾರ್ಜುನ. ಹೀಗಾಗಿ ಡಿವೋರ್ಸ್ ಆಯ್ತು ಎಂದು ಹೇಳಿಕೆ ಕೊಟ್ಟಿದ್ದಾರೆ ಸಮಂತಾ.
ಸುರೇಖಾ ಅವರ ಹೇಳಿಕೆ ಟಾಲಿವುಡ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ನಾಗಾರ್ಜುನ ಆಧಾರರಹಿತ, ಕೀಳು ಮಟ್ಟದ ಹೇಳಿಕೆ. ಸುರೇಖಾ ಹೇಳಿರುವುದೆಲ್ಲ ಸುಳ್ಳು ಎಂದು ಉತ್ತರ ಕೊಟ್ಟಿದ್ದಾರೆ. ಚಿತ್ರರಂಗದವರನ್ನು ರಾಜಕೀಯಕ್ಕೆ ಎಳೆದು ತರಬೇಡಿ. ಗೌರವಯುತ ಸ್ಥಾನದಲ್ಲಿರುವವರು ಇಂತಹ ಹೊಲಸು ಹೇಳಿಕೆ ನೀಡಬಾರದು. ತಕ್ಷಣ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವೆ ಸುರೇಖಾ ಈ ಹಿಂದೆಯೂ ಕೆಟಿಆರ್ ಅವರನ್ನು ಹೆಣ್ಣುಬಾಕ ಎಂದು ಆರೋಪಿಸಿದ್ದರು. ಕೆಟಿಆರ್ ಕಿರುಕುಳದ ಕಾರಣಕ್ಕೆ ತೆಲುಗು ಚಿತ್ರರಂಗದ ಹಲವು ನಟಿಯರು ಬೇಗನೇ ಮದುವೆಯಾಗುತ್ತಿದ್ದಾರೆ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದರು. ಸಮಂತಾ ವಿಚಾರದಲ್ಲಿಯೂ ಅಷ್ಟೇ, ಸಮಂತಾ ಅವರ ಡಿವೋರ್ಸ್ ಕಾರಣ ಚಿತ್ರರಂಗದ ಬಹುತೇಕರಿಗೆ ಗೊತ್ತು. ಮಾಧ್ಯಮದವರಿಗೂ ಕೆಲವರಿಗೆ ಗೊತ್ತು. ಆದರೆ ಯಾರೂ ಹೇಳುತ್ತಿಲ್ಲ ಎಂದಿದ್ದಾರೆ ಸುರೇಖ. ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರನಾಗಿರುವ ಕೆಟಿಆರ್, ಚಿತ್ರನಟಿಯರ ಫೋನ್ ಟ್ಯಾಪ್ ಮಾಡಿ, ಅವರ ಮಾತುಗಳನ್ನು ಕದ್ದು ಆಲಿಸಿ, ನಂತರ ಅದನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಕರೆಸಿಕೊಳ್ಳುತ್ತಿದ್ದರು ಎಂದು ಕೂಡಾ ಸುರೇಖ ಆರೋಪಿಸಿದ್ದಾರೆ. ಸುರೇಖ ಹೇಳಿಕೆ, ಕೇವಲ ತೆಲುಗು ಚಿತ್ರರಂಗದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿಯೂ ಸಂಚಲನ ಹುಟ್ಟುಹಾಕಿದೆ.
ನಟಿಯರು ಹಾಗೂ ರಾಜಕಾರಣಿಗಳ ನಡುವಿನ ನಂಟಿನ ಬಗ್ಗೆ ಮಾತುಗಳು ನಡೆಯುತ್ತಲೇ ಇರುತ್ತವೆ. ಆ ನಟಿಗೆ ಈ ರಾಜಕಾರಣಿಯ ಜೊತೆ ನಂಟಿದ್ಯಂತೆ, ಸಂಬಂಧ ಇದ್ಯಂತೆ ಎಂಬ ಮಾತುಗಳು ಬರುತ್ತಲೇ ಇರುತ್ತವೆ. ಆದರೆ, ಅವರೂ ಒಪ್ಪಲ್ಲ. ಇವರೂ ಒಪ್ಪಲ್ಲ. ಹೀಗಾಗಿ ಅದೆಷ್ಟೋ ಕಥೆಗಳು ಕಥೆಗಳಾಗಿಯೇ ಇವೆ. ಆದರೆ ಬೆಂಕಿ ಇಟ್ಟಿರುವುದು ತೆಲಂಗಾಣದ ಮಿನಿಸ್ಟರ್ ಸುರೇಖ ಅವರ ಹೇಳಿಕೆ. ಬೆಂಕಿ ಬಿದ್ದಿರುವುದು ನಾಗಾರ್ಜುನ ಮನೆಯಲ್ಲಿ.



