ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ, ಡಾ. ಶ್ರೀ ಶರಣಬಸಪ್ಪ ಅಪ್ಪಾ. ಅವರ ಸಾವಿಗೆ ಉತ್ತರ ಕರ್ನಾಟಕದ ಲಕ್ಷಾಂತರ ಜನ ಕಂಬನಿ ಮಿಡಿಯುತ್ತಿದ್ದಾರೆ. ಮೃತಪಟ್ಟಾಗ ಅವರ ವಯಸ್ಸು 92. ಆಸ್ಪತ್ರೆಯಲ್ಲಿದ್ದ ಶರಣಬಸಪ್ಪ ಅಪ್ಪಾ ಅವರು, ಕೊನೆಗಳಿಗೆಯಲ್ಲಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆಯುವ ಆಸೆ ವ್ಯಕ್ತಪಡಿಸಿದ್ದರು. ಅದರಂತೆ.. ಡಾ. ಶ್ರೀ ಶರಣಬಸಪ್ಪ ಅಪ್ಪ ಅವರು ತಮ್ಮ ಅಂತಿಮ ಇಚ್ಛೆಯಂತೆ ಶ್ರೀ ಶರಣಬಸವೇಶ್ವರರ ದರ್ಶನ ಪಡೆದು ಲಿಂಗೈಕ್ಯರಾಗಿದ್ದಾರೆ.
ಶರಣಬಸಪ್ಪ ಅಪ್ಪಾ ಅವರ ಸಾಧನೆ ಬಗ್ಗೆ ಹೇಳಬೇಕೆಂದರೆ.. 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾರಂಭಿಸಿದ್ದ ಶಿಕ್ಷಣ ಸಂಸ್ಥೆಗಳ ಹರಿಕಾರ. 1973 ರಿಂದ 2017 ರವರೆಗೆ ಬರೋಬ್ಬರಿ 60 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾರಂಭ ಮಾಡಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮಾಡಿದ್ದರು. IAS ಮತ್ತು IPS ತರಬೇತಿ ಕೇಂದ್ರ ಸ್ಥಾಪನೆ ಮಾಡಿದ್ದರು. ಆಧ್ಯಾತ್ಮ, ಧರ್ಮಚಿಂತನೆ, ತತ್ವಜ್ಞಾನದತ್ತ ಹೆಚ್ಚಿನ ಆಸಕ್ತಿ ಹೊಂದಿದ್ದರು. ಡಾ.ಅಪ್ಪಾ ಅವರನ್ನ ರಾಜಾಕಾರಣ ಹಾವಳಿಯಿಂದ ತಪ್ಪಿಸಲು 13ನೇ ವಯಸ್ಸಿನಲ್ಲಿ ಸೋಲ್ಹಾಪುರಕ್ಕೆ ಕರೆದೊಯ್ಯಲಾಗಿತ್ತು. ಸೋಲ್ಹಾಪುರದಲ್ಲಿ ತ್ರಿಕಾಲ ಪೂಜೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಡವರ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವುದು ಅವರ ಕನಸಾಗಿತ್ತು. ಆ ಕನಸನ್ನು ನನಸು ಮಾಡಲು ಇನ್ನಿಲ್ಲದಂತೆ ಶ್ರಮಿಸಿದವರು ಶರಣಬಸಪ್ಪ ಅಪ್ಪಾ.
ವೈಯಕ್ತಿಕ ಬದುಕು :
ಹಾವೇರಿಯ ಶಿವಪ್ಪ ಆನೂರ್ ಶೆಟ್ಟರ ಮಗಳು ಕೋಮಲಾ ದೇವಿ ಮೊದಲ ಪತ್ನಿ. ಮೊದಲ ಪತ್ನಿಯಿಂದ ಐವರು ಹೆಣ್ಣು ಮಕ್ಕಳು ಜನಿಸಿದರು. ಡಾ.ಗಂಗಾಂಬಿಕೆ, ಪ್ರೊ.ನೀಲಾಂಬಿಕೆ, ಮುಕ್ತಾಂಬಿಕೆ, ಉಮಾ ಹಾಗೂ ಗೋದಾವರಿ ಸೇರಿ ಐದು ಹೆಣ್ಣುಮಕ್ಕಳು. ಇವರಲ್ಲಿ ಮುಕ್ತಾಂಬಿಕಾ ಸಣ್ಣ ವಯಸ್ಸಿನಲ್ಲಿಯೇ ನಿಧನರಾದರು. ಮೊದಲ ಪತ್ನಿ ಕೋಮಲಾ ಕೂಡಾ ನಿಧನರಾದರು. ಮೊದಲ ಪತ್ನಿ ಲಿಂಗೈಕ್ಯ ಬಳಿಕ ಡಾ.ಅಪ್ಪಾ ದಾಕ್ಷಾಯಿಣಿ ಅವ್ವಾ ಜೊತೆ ಎರಡನೇ ಮದುವೆಯಾದರು. ದಾಕ್ಷಾಯಿಣಿ ಅವ್ವಾ-ಅಪ್ಪಗೆ ನಾಲ್ವರು ಮಕ್ಕಳು ಜನಿಸಿದ್ದಾರೆ. ಕುಮಾರಿ ಶಿವಾನಿ, ಕುಮಾರಿ ಕೋಮಲಾ, ಕುಮಾರಿ ಮಹೇಶ್ವರಿ ಹಾಗೂ ಚಿ. ದೊಡ್ಡಪ್ಪ ಅಪ್ಪ ಎಂಬ ಮಕ್ಕಳಿದ್ದಾರೆ. ಇನ್ನು 9ನೇ ಪಿಠಾಧಿಪತಿ ಚಿ.ದೊಡ್ಡಪ್ಪ ಅಪ್ಪಾ.
1963ರಲ್ಲಿ ಅಖಿಲ ಭಾರತ ಶಿವಾನುಭವ ಮಂಟಪ ಸ್ಥಾಪನೆ, ಶರಣಬಸವಪ್ಪ ಅಪ್ಪ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಅನುಭವ ಮಂಟಪಗಳ ಮಹಾ ಸಮ್ಮೇಳನ, 1996ರಲ್ಲಿ ದಾಸೋಹ ಜ್ಞಾನರತ್ನ ಸಾಹಿತಿಕ ಪಾಕ್ಷಿಕ ಪತ್ರಿಕೆ ಪ್ರಾರಂಭ, ಮಹಾದಾಸೋಹಿ ಶರಣಬಸವ ಎಂಬ ಅಂಕಿತವಿಟ್ಟು 21 ವಚನಗಳ ರಚನೆ , ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸತತ 15 ವರ್ಷ ಸೇವೆ ಮಾಡಿದ್ದು ಎಲ್ಲವೂ ಇವರ ಸಾಧನೆಗಳೇ.
26 ಎಕರೆ ಜಮೀನಿನಲ್ಲಿ ಗೋ ಶಾಲೆ ನಿರ್ಮಾಣ ಮಾಡಿದ್ದ ಶರಣಬಸಪ್ಪ ಅಪ್ಪಾ, 2019ರಲ್ಲಿ ಪ್ರವಾಹ ಸಂದರ್ಣದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ದಾನ ಮಾಡಿದ್ದರು. 2003 ರಲ್ಲಿ ದೆಹಲಿಯ ಪಾರ್ಲಿಮೆಂಟ್ ಅವರಣದ 9ನೇ ಗೇಟ್ ಬಳಿ ಬಸವಣ್ಣನವರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಿಸಿದ್ದ ಕೀರ್ತಿಯೂ ಇವರದ್ದೇ.



