ಜೋಗಿ ಪ್ರೇಮ್ ಏನ್ ಮಾಡಿದರೂ ಭಯಂಕರ ಸುದ್ದಿ ಮಾಡ್ತಾರೆ. ಇದೀಗ ಕೆಡಿ ಚಿತ್ರದಲ್ಲಿ ಬ್ಯುಸಿಯಾಗಿರುವ ಪ್ರೇಮ್, ಆ ಚಿತ್ರಕ್ಕೆ ಧ್ರುವ ಸರ್ಜಾ ಜೊತೆಗೆ ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ಸಂಜಯ್ ದತ್ ಅವರನ್ನು ಒಂದು ಕಡೆ ಸೇರಿಸಿದ್ದಾರೆ. ಕೆಡಿ ಮುಗಿದ ಮೇಲೆ ಶುರುವಾಗಲಿರೋ ಚಿತ್ರಕ್ಕೂ ದರ್ಶನ್ ಜೊತೆ ಚಿರಂಜೀವಿ ಸೇರಿಸುವ ಉತ್ಸಾಹದಲ್ಲಿದ್ದಾರೆ.
ನಟ ದರ್ಶನ್ ಸದ್ಯಕ್ಕೆ ಕಾಟೇರ ಸಂಭ್ರಮದಲ್ಲಿದ್ದಾರೆ. ಸಂಭ್ರಮ ಮುಗಿಯುತ್ತಿದ್ದಂತೆಯೇ ಡೆವಿಲ್ ಶೂಟಿಂಗ್ ಶುರುವಾಗಲಿದೆ. ಅದು ಮುಗಿಯುವ ವೇಳೆಗೆ ಕರಿಯ ಪ್ರೇಮ್ ನಿರ್ದೇಶನದ ಸಿನಿಮಾ ಶುರುವಾಗಲಿದೆ. ಆ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಬರಲಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.
ಈ ಹಿಂದೆ ದರ್ಶನ್ ಜತೆಗೆ ‘ಕರಿಯ’ ಸಿನಿಮಾವನ್ನು ಮಾಡಿದ್ದ ಪ್ರೇಮ್, ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮೆಜೆಸ್ಟಿಕ್ ಮೂಲಕ ಹೀರೋ ಆಗಿ ಚಿತ್ರರಂಗ ಪ್ರವೇಶಿಸಿದ್ದ ದರ್ಶನ್, ಸ್ಟಾರ್ ನಟರಾಗಿದ್ದು ಕರಿಯ ಚಿತ್ರದ ಮೂಲಕ. ಇದೀಗ ದರ್ಶನ್-ಪ್ರೇಮ್ ಕಾಂಬಿನೇಷನ್ ಮತ್ತೊಮ್ಮೆ ತೆರೆಯ ಮೇಲೆ ಒಂದಾಗುತ್ತಿದೆ. ಆ ಚಿತ್ರದಲ್ಲಿ ಚಿರಂಜೀವಿ ನಟಿಸುತ್ತಾರೆ ಎನ್ನುವುದು ಸೆನ್ಸೇಷನ್.
ಚಿರಂಜೀವಿ ಈ ಹಿಂದೆಯೂ ಕನ್ನಡದಲ್ಲಿ ಅಭಿನಯಿಸಿದ್ದರು. ರವಿಚಂದ್ರನ್ ಅವರೊಂದಿಗೆ ಸಿಪಾಯಿಯಲ್ಲಿ, ಶ್ರೀ ಮಂಜುನಾಥ ಚಿತ್ರದಲ್ಲಿ ಈಶ್ವರನಾಗಿ ನಟಿಸಿದ್ದರು. ಪ್ರೇಮ್-ದರ್ಶನ್ ಕಾಂಬಿನೇಷನ್ ಸಿನಿಮಾ ೨೦೨೪ರ ಜೂನ್ʻನಲ್ಲಿ ಶುರುವಾಗಲಿದೆ. ಪ್ರೇಮ್ ಡೈರೆಕ್ಟರ್ ಆಗಿರುವ ಕಾರಣ ಹೈಪ್ ಎಂದಿನಂತೆ ಈಗಿನಿಂದಲೇ ಶುರುವಾಗಿದೆ.



