ಸುದೀಪ್ (Kichcha Sudeep) ಮತ್ತು ಕುಮಾರ್ ನಡುವಿನ ವಿವಾದ, ಸಂಘರ್ಷ ಬಗೆಹರಿಸೊಕೆ ಖುದ್ದು ರವಿಚಂದ್ರನ್ (Ravichandran) ಎಂಟ್ರಿ ಕೊಟ್ಟಾಗಿದೆ. ರವಿಚಂದ್ರನ್ ಅವರ ಮನೆಯೇ ಈಗ ಸಂಧಾನದ ಕೋರ್ಟು. ರವಿಚಂದ್ರನ್ (Ravichandran) ಮನೆಯಲ್ಲೇ ಸಂಧಾನ ಸಭೆ ನಡೆಯುತ್ತಿದೆ. ಮೊದಲಿಗೆ ವಿವಾದ ಬೆಳಕಿಗೆ ಬಂದಿದ್ದು, ಕುಮಾರ್ ಸುದ್ದಿಗೋಷ್ಠಿ ಮಾಡುವ ಮೂಲಕ. ಅದಾದ ಮೇಲೆ ಸುದೀಪ್ ನೇರವಾಗಿ ಕೋರ್ಟಿಗೇ ಹೋಗಿದ್ದರು. ಚಿತ್ರರಂಗದ ವಿವಾದಗಳು ಕೋರ್ಟ್ ಮೆಟ್ಟಿಲೇರುವುದು ಹೊಸದಲ್ಲ. ಕೊನೆಯೂ ಅಲ್ಲ. ಆದರೆ ಈ ಬಾರಿ ಸೂಪರ್ ಸ್ಟಾರ್ ನಟನ ಮೇಲೆ ಆರೋಪ ಕೇಳಿ ಬಂದಿತ್ತು. ಸುದೀಪ್ ನೇರವಾಗಿ ಕೋರ್ಟಿಗೆ ಹೋಗಿದ್ದು ಹೊಸದಾಗಿತ್ತು, ಅಷ್ಟೆ.
ವಿವಾದ ರವಿಚಂದ್ರನ್ (Ravichandran) ಮತ್ತು ಶಿವಣ್ಣ (Shiva Rajkumar) ಇಬ್ಬರ ಬಳಿಗೂ ಹೋಗಿತ್ತು. ಅವರು ಇವರ ಬಳಿಗೆ, ಇವರು ಅವರ ಬಳಿಗೆ ಕಳಿಸಿದ್ದರು. ಕೊನೆಗೆ ದೊಡ್ಮನೆಯಿಂದ ಕೇಸ್ ರವಿಚಂದ್ರನ್ (Ravichandran) ಮನೆಗೆ ಶಿಫ್ಟ್ ಆಗಿದ್ದಷ್ಟೇ ಅಲ್ಲ, ಏನೇನು ಕಂಪ್ಲೇಂಟ್ ಇವೆಯೋ.. ಅವನ್ನೆಲ್ಲ ರೈಟಿಂಗ್`ನಲ್ಲಿ ಕೊಡಿ ಎಂದು ಬರೆಸಿಕೊಂಡಿದ್ದರು ರವಿಚಂದ್ರನ್. ಅದಾದ ಮೇಲೆ ಪ್ರತಿಭಟನೆ ಕೈಬಿಟ್ಟು ಬನ್ನಿ ಎಂದಿದ್ದರು. ಮೊದಲ ಹಂತದಲ್ಲಿ ಸುದೀಪ್ (Kichcha Sudeep) ಮತ್ತು ಕುಮಾರ್ ನಡುವೆ ಪರಸ್ಪರ ಮಾತನಾಡುವಂತೆ ಮಾಡಿದ್ದಾರೆ. ಅದೇ ತಮ್ಮ ಮೊದಲ ಟಾಸ್ಕ್ ಎಂದು ಹೇಳಿಕೊಂಡಿದ್ದ ರವಿಚಂದ್ರನ್, ಮೊದಲ ಗುರಿ ಈಡೇರಿದೆ. ಸಕ್ಸಸ್ ಆಗಿದ್ದಾರೆ. ಆದರೆ ವಿವಾದ ಅಂತ್ಯವನ್ನೇನೂ ಕಂಡಿಲ್ಲ.
ಸತತ 7 ಗಂಟೆಗಳ ಕಾಲ ನಡೆದ ಸಂಧಾನ ಸಭೆಯಲ್ಲಿ ಸುದೀಪ್ (Kichcha Sudeep), ಎಂಎನ್ ಕುಮಾರ್ ತಮ್ಮ-ತಮ್ಮ ವಾದ ಮಂಡಿಸಿದ್ದಾರೆ. ರವಿಚಂದ್ರನ್ ಅವರ ಹೊಸಕೇರೆಹಳ್ಳಿ ಮನೆಯಲ್ಲಿ ನಡೆದ ಸಭೆಯಲ್ಲಿ ಸುದೀಪ್, ಎಂಎನ್ ಕುಮಾರ್ ಜೊತೆ ರಾಕ್ ಲೈನ್ ವೆಂಕಟೇಶ್, ಜಾಕ್ ಮಂಜು, ಭಾ.ಮ.ಹರೀಶ್, ಉಮೇಶ್ ಬಣಕಾರ್ ಅವರುಗಳೂ ಸಭೆಯಲ್ಲಿ ಭಾಗವಹಿಸಿದ್ದರು. ಶಿವರಾಜ್ ಕುಮಾರ್ ಸಭೆಗೆ ಬರಲು ಸಾಧ್ಯವಾಗಲಿಲ್ಲ. ಹೈದರಾಬಾದ್ನಲ್ಲಿ ಚಿತ್ರೀಕರಣದ ಕೆಲಸದಲ್ಲಿ ಬ್ಯುಸಿ ಇದ್ದರು. ಆದರೆ ಸಭೆಯ ಸಂಪೂರ್ಣ ಮಾಹಿತಿ ಅವರಿಗೂ ಇತ್ತು ಎನ್ನಲಾಗಿದೆ. ಆದರೆ ಸಭೆ ಯಾವುದೇ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ.
ಜುಲೈ 23 ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಅಂದು ಅಂತಿಮ ತೀರ್ಮಾನವನ್ನು ಸುದೀಪ್ ಹಾಗೂ ಎಂಎನ್ ಕುಮಾರ್ ಅವರ ಎದುರು ರವಿಚಂದ್ರನ್ ಒಂದು ನಿರ್ಧಾರ ಮುಂದಿಡುತ್ತಾರೆ. ಅಷ್ಟೇ ಅಲ್ಲ, ಸಭೆಯ ನಂತರ ಯಾವ ರೀತಿ ನಡೆದುಕೊಳ್ಳಬೇಕು ಎಂದು ಕೂಡಾ ಷರತ್ತು ಹಾಕುತ್ತಾರೆ ಎಂಬ ವರದಿಗಳಿವೆ.
ಫಸ್ಟ್ ಸಕ್ಸಸ್ ಕಂಡಿರೋ ರವಿಚಂದ್ರನ್, ವಿವಾದವನ್ನೂ ಸಂಪೂರ್ಣ ಇತ್ಯರ್ಥ ಮಾಡುವ ಯೋಚನೆಯಲ್ಲಿದ್ದಾರೆ. ಆದರೆ ರವಿಚಂದ್ರನ್ ಹೇಳಿದ್ದನ್ನು ಚಾಚೂತಪ್ಪದೆ ಕೇಳಬೇಕಷ್ಟೆ. ಒಂದು ಮಾತು ಉಲ್ಟಾ ಆದರೂ, ರವಿಚಂದ್ರನ್ ವಿವಾದ ಇತ್ಯರ್ಥದಿಂದ ಎದ್ದು ಹೋಗುತ್ತಾರೆ. ಆಮೇಲೆ ಕುಮಾರ್ ಕೋರ್ಟಿನಲ್ಲಿ ಹೋರಾಡಬೇಕಷ್ಟೆ.



