ಅದೊಂದು ಹೇಳಿಕೆ ಬಾರದೇ ಇದ್ದಿದ್ದರೆ, ಹಂಸಲೇಖ (Hamsalekha) ವಿವಾದರಹಿತ ಆಯ್ಕೆಯಾಗುತ್ತಿದ್ದರಾ.. ಗೊತ್ತಿಲ್ಲ. ಹಂಸಲೇಖ (Hamsalekha) ಅವರನ್ನು ಪ್ರೀತಿಸುವವರು, ಬೆಂಬಲಿಸುವವರೂ ಆ ಹೇಳಿಕೆ ಕೊಡಬಾರದಿತ್ತು ಎಂದಿದ್ದರು. ಕೊನೆಗೆ ಹಂಸಲೇಖ ಕ್ಷಮೆಯಾಚಿಸಿದರು ಎನ್ನಿ. ಇದೀಗ ಅದೇ ಹಂಸಲೇಖ ನಾಡಹಬ್ಬ ದಸರಾ ಉದ್ಘಾಕರಾಗಿದ್ದಾರೆ. ನಾಡಿನ 413ನೇ ಮೈಸೂರು ದಸರಾ ಮಹೋತ್ಸವವನ್ನು ಖ್ಯಾತ ಸಾಹಿತಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಉದ್ಘಾಟಿಸಲಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೇ ಸಿಕ್ಕ ಗರಿಮೆ. ಕನ್ನಡ ಚಿತ್ರರಂಗದವರಿಗೆ 22 ವರ್ಷಗಳ ಈ ದಸರಾ ಭಾಗ್ಯ ಒಲಿದು ಬಂದಿದೆ. 2001ರಲ್ಲಿ ಬಿ.ಸರೋಜಾ ದೇವಿ (B Sarojadevi) ಉದ್ಘಾಟಿಸಿದ್ದೇ ಕೊನೆ. ಅದಾದ ಬಳಿಕ ಚಿತ್ರರಂಗದವರಿಗೆ ದಸರಾ ಉದ್ಘಾಟಿಸುವ ಭಾಗ್ಯ ಸಿಕ್ಕಿರಲಿಲ್ಲ. 1993ರಲ್ಲಿ ಮೊದಲ ಬಾರಿಗೆ ಡಾ.ರಾಜ್ ಕುಮಾರ್ (Dr.Rajkumar) ಅವರು ದಸರಾ ಉದ್ಘಾಟಿಸಿದ್ದರು. 1994ರಲ್ಲಿ ರೆಬಲ್`ಸ್ಟಾರ್ ಅಂಬರೀಶ್ (Ambareesh) ಉದ್ಘಾಟಿಸಿದ್ದರು. ಆದರೆ 22 ವರ್ಷಗಳ ನಂತರ ಸಿಕ್ಕ ಸೌಭಾಗ್ಯವನ್ನೂ ಚಿತ್ರರಂಗ ಸಂಭ್ರಮಿಸುವ ಸ್ಥಿತಿಯಲ್ಲಿ ಇಲ್ಲ.
ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವ ಮೈಸೂರಿನ ದಸರಾವನ್ನು (Mysooru Dasara) ಈ ಬಾರಿ ಅದ್ಧೂರಿಯಾಗಿ ಮಾಡಲಾಗುತ್ತದೆ. ಅಕ್ಟೋಬರ್ 15ರ ಬೆಳಗ್ಗೆ 10.15ರಿಂದ 10.30ರ ನಡುವಿನ ಮುಹೂರ್ತದಲ್ಲಿ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಾಗುತ್ತದೆ. ಕಳೆದ ಬಾರಿಯ 412ನೇ ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಉದ್ಘಾಟನೆ ಮಾಡಿದ್ದರು.. ಈ ಬಾರಿ ಈ ಗೌರವ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ಅವರಿಗೆ ಒಲಿದು ಬಂದಿದೆ. ಹಾಗಂತ ಹಂಸಲೇಖ ಅವರನ್ನು ಜನ ಸಂಪೂರ್ಣವಾಗಿ ಒಪ್ಪಿಕೊಂಡೂ ಇಲ್ಲ. ಹಂಸಲೇಖ ಆಯ್ಕೆ ಎಂದು ಫೈನಲ್ ಆಗುತ್ತಿದ್ದಂತೆಯೇ ಪರ ವಿರೋಧ ಚರ್ಚೆಗಳು ಜೋರಾಗಿ ಕೇಳಿ ಬಂದಿವೆ. ಆದರೆ ಅದಕ್ಕೆಲ್ಲ ಕಾರಣ ಹಂಸಲೇಖ ಅವರು (Pejavara Shree) ಪೇಜಾವರ ಶ್ರೀಗಳ ಕುರಿತಂತೆ ನೀಡಿದ್ದ ರಕ್ತಮಾಂಸದ ಹೇಳಿಕೆ, ಬಿಜೆಪಿ ವಿರುದ್ಧದ ಪ್ರತಿಭಟನೆ ಮೊದಲಾದುವು. ಕಾಂಗ್ರೆಸ್ ಋಣ ತೀರಿಸಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ಇದಕ್ಕೆಲ್ಲ ಪ್ರತಿಕ್ರಿಯೆ ನೀಡಿರುವ ಹಂಸಲೇಖ “ ಇದು ನಾಲ್ವಡಿ ಕೃಷ್ಣರಾಜ ಒಡೆಯರ ಕನಸು. ಜಗತ್ತು ಕಂಡ ಅತ್ಯಂತ ಶ್ರೀಮಂತ ರಾಜ ಅವರು. ನನಗೆ ಈಗ ಸಂತೋಷವನ್ನೂ ತಡೆದುಕೊಳ್ಳುವ ವಯಸ್ಸು. ಅದಕ್ಕೂ ಒಂದು ನಿಯಂತ್ರಣ ಬೇಕು. 35 ವರ್ಷದ ಹಿಂದೆ ಆಗಿದ್ದರೆ ನಾನು ಏನೇನೋ ಮಾತನಾಡುತ್ತಿದ್ದೆ. ಮೊದಲು ನಾವು ರಾಜ್ಯ ಸರ್ಕಾರಕ್ಕೆ ಎಲ್ಲ ಕಲಾವಿದರ ಪರವಾಗಿ ಧನ್ಯವಾದ ತಿಳಿಸಬೇಕು. ಕಳೆದ ವರ್ಷ ನನಗೆ ಆರೋಗ್ಯದಲ್ಲಿ ಏರುಪೇರು ಆದಾಗ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದರು. ದಸರಾ ಎಂಬುದು ದೊಡ್ಡ ಸಂಭ್ರಮ. ಅಂಥ ಸಂಭ್ರಮವನ್ನು ಉದ್ಘಾಟಿಸಲು ನನ್ನಂತಹ ಸ್ಟ್ರೀಟ್ ಫೈಟರ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಮನೆಯವರು ಪ್ರತ್ಯೇಕವಾಗಿ ಅಭಿನಂದನೆ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.
ಆದರೆ ಈ ಪದಗಳ ಚಮತ್ಕಾರ ಬಳಸುವುದು ಬೇರೆ. ನಡೆಯುವುದೇ ಬೇರೆ. ಹಂಸಲೇಖ ಅವರ ಸರಸ್ವತಿಯನ್ನು ಯಾರೂ ಟೀಕೆ ಮಾಡುವುದಿಲ್ಲ. ಡಬಲ್ ಮೀನಿಂಗ್ ಸಾಹಿತ್ಯವನ್ನು ಇರಲಿ ಬಿಡಿ, ಹೊಟ್ಟೆಪಾಡು ಎಂದು ಹೊಟ್ಟೆಗಿಟ್ಟುಕೊಂಡವರೂ, ಆ ಹೇಳಿಕೆ ಬಂದಾಗ ಸಿಡಿದು ಬಿದ್ದಿದ್ದರು. ಆಗ ಹಂಸಲೇಖ ಚಿತ್ರರಂಗದಲ್ಲಿದ್ದುಕೊಂಡು ನಡೆಸುತ್ತಿರುವ ಹುಚ್ಚಾಟಗಳೂ ಬೆಳಕಿಗೆ ಬಂದಿದ್ದವು. ಆದರೆ ಅದೆಲ್ಲವನ್ನೂ ಆತನ ಒಳಗಿರುವ ಸಂಗೀತ ಸಾಹಿತ್ಯ ಸರಸ್ವತಿ ನಿಭಾಯಿಸಿದ್ದಾಳೆ.
ಇನ್ನು ಟೀಕೆಗೆ ಕಾರಣ ರಾಜಕೀಯ. ಎಲ್ಲ ಕಡೆಯಂತೆ ಅಲ್ಲಿಯೂ ಪಾಲಿಟಿಕ್ಸ್ ಇದೆ. ಯಾವ ಪಕ್ಷಕ್ಕೆ ಸಪೋರ್ಟು ಎಂಬುದರ ಮೇಲೆಯೇ ಎಲ್ಲವೂ ನಿರ್ಧಾರವಾಗುತ್ತದೆ. ಯಾವ ಸಿದ್ಧಾಂತ ಎಂಬುದೂ ಮುಖ್ಯವಾಗುತ್ತದೆ. ಸಿದ್ಧಾಂತ ರಾಜಕೀಯ ಹೊರತಾದ ಪ್ರತಿಭೆಗಳಿಗೆ ಇಂಡಸ್ಟ್ರಿಯಲ್ಲಿ ಜಾಗವಿಲ್ಲ.



