ಯಜಮಾನ. 25 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದ ಸಿನಿಮಾ. ಆದರೆ ಈ ಚಿತ್ರ ವಿಷ್ಣುವರ್ಧನ್ ಅವರ ಅತ್ಯುತ್ತಮ ಸಿನಿಮಾ ಅಲ್ಲ. ಅರೆ.. ಅದು ಹೇಗೆ.. ಎಂಬ ಪ್ರಶ್ನೆಗಳಿಗೆ ಉತ್ತರಗಳೂ ಇವೆ.
ʻಯಜಮಾನʼ ಡಾ. ರಾಜ್ ಕುಮಾರ್ ಕೂಡಾ ಮೆಚ್ಚಿಕೊಂಡಿದ್ದ ಸಿನಿಮಾ. ಬಾಕ್ಸಾಫೀಸಿನಲ್ಲಿ ಹೆಚ್ಚೂ ಕಡಿಮೆ 50 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ. ದೂರವಾಗಿದ್ದ ಅಣ್ಣ ತಮ್ಮಂದಿರನ್ನು ಒಂದು ಮಾಡಿದ್ದ ಸಿನಿಮಾ. ಹಾಡುಗಳಂತೂ ಸೂಪರ್ ಡ್ಯೂಪರ್ ಹಿಟ್. 130ಕ್ಕೂ ಹೆಚ್ಚು ಕಡೆ ಶತದಿನೋತ್ಸವ, 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಪ್ಪತ್ತೈದು ವಾರ ಹಾಗೂ 4 ಕಡೆಗಳಲ್ಲಿ 1 ವರ್ಷ ಈ ಸಿನಿಮಾ ಓಡಿದ್ದ ಸಿನಿಮಾ.. ಯಾಕೆ ವಿಷ್ಣುವರ್ಧನ್ ಅವರ ಬೆಸ್ಟ್ ಸಿನಿಮಾ ಅಲ್ಲ ಅಂದರೆ.. ಅದು ತಮಿಳಿನ ವಾನತ್ತೈಪೋಲ ಚಿತ್ರದ ರೀಮೇಕ್.
ಯಾವ ಮಟ್ಟಿನ ರೀಮೇಕ್ ಎಂದರೆ.. ವಿಷ್ಣುವರ್ಧನ್ ಸೇರಿದಂತೆ ಹಲವು ಕಲಾವಿದರ ಮೀಸೆಯನ್ನೂ ಯಥಾವತ್ ಕಾಪಿ ಮಾಡಾಲಾಗಿತ್ತು.
ವಾನತ್ತೈಪೋಲ ಚಿತ್ರದ ತಮಿಳು ಸಾಹಿತ್ಯವನ್ನು ಕೆ ಕಲ್ಯಾಣ್ ಅಷ್ಟೇ ಸುಂದರವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದರು.
ಅನುವಾದವನ್ನು ಸಾಹಿತ್ಯ ಎಂದು ಕರೆಯವುದು, ಅವುಗಳಿಗೆ ಕ್ರೆಡಿಟ್ ನೀಡುವುದು ಹೇಗೆ..
ನೀವೇ ನೋಡಿ..
ʻಪ್ರೇಮಚಂದ್ರಮ ಕೈಗೆ ಸಿಗುವುದೇ..ʼ
ʻನಮ್ಮ ಮನೆಯಲ್ಲಿ ದಿನವೂ ಮಿನುಗೋ ಚೈತ್ರವೇ..ʼ
ʻಶ್ರೀಗಂಧದಾ ಗೊಂಬೆ.. ಮೆಲ್ಲ ಮೆಲ್ಲಗೆ ಬರುತಾಳಮ್ಮ..ʼ
ʻಓ ಮೈನಾ.. ಓ ಮೈನಾ.. ಏನಿದು ಮಾಯೆ..ʼ
ʻನವಿಲೇ.. ಪಂಚರಂಗಿ ನವಿಲೇ..ʼ
ʻಮೈಸೂರು ಮಲ್ಲಿಗೆ.. ಮೈ ಎಲ್ಲ ಹೋಳಿಗೆ..ʼ
ಹೀಗೆ ಹಾಡುಗಳ ಸಾಹಿತ್ಯವೂ ತಮಿಳಿನ ಯಥಾವತ್ ಅನುವಾದ. ರಾಜೇಶ್ ರಾಮನಾಥ್ ಅವರು ಮೂಲ ಟ್ರ್ಯಾಕ್‌ಗಳನ್ನೇ ಬಳಸಿದ್ದರು.. ʻನಮ್ಮ ಮನೆಯಲ್ಲಿ ದಿನವೂ ಮಿನುಗೋ ಚೈತ್ರವೇ..ʼ ಟ್ರ್ಯಾಕ್‌ನ ಮೂಲ ಹಿಂದಿಯ ʻದಾಗ್ʼ ಚಿತ್ರದ ದಿಲ್ ದೀವಾನ… ಅಷ್ಟೇ ಅಲ್ಲ.. ʻಪ್ರೇಮಚಂದ್ರಮ ಕೈಗೆ ಸಿಗುವುದೇ..ʼ ಹಾಗೂ ʻಓ ಮೈನಾ.. ಓ ಮೈನಾ.. ಏನಿದು ಮಾಯೆ..ʼ ಸಾಹಿತ್ಯವನ್ನೂ ಯಥಾವತ್ ತಮಿಳಿಂದ ಕನ್ನಡ ಭಟ್ಟಿ ಇಳಿಸಲಾಗಿತ್ತು.
ಹೀಗಿದ್ದರೂ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಆಗಿನ್ನೂ ಕೆಸೆಟ್ ಕಾಲ ಇತ್ತು. ಸಿಡಿಗಳು ಬಂದಿದ್ದವಾದರೂ ಹೆಚ್ಚಿನ ಬಳಕೆ ಇರಲಿಲ್ಲ. ಚಿತ್ರದ ಕೆಸೆಟ್ಟುಗಳ ಮಾರಾಟದಿಂದಲೇ ಸುಮಾರು 3 ಕೋಟಿಗೂ ಹೆಚ್ಚು ಲಾಭ ಮಾಡಿತ್ತಂತೆ ಆನಂದ್ ಆಡಿಯೋ. ನಿರ್ಮಾಪಕ ರೆಹಮಾನ್ ಕೂಡಾ ಅಷ್ಟೇ.. 40 ಕೋಟಿಗೂ ಹೆಚ್ಚು ಲಾಭ ಮಾಡಿದ ಚಿತ್ರವನ್ನು ರಿಲೀಸ್ ಆಗುವುದಕ್ಕೂ ಮುಂಚೆಯೇ ಕೆಲವು ಲಕ್ಷಗಳ ಲಾಭಕ್ಕೆ ಮಾರಿಬಿಟ್ಟಿದ್ದರು. ಹೀಗಾಗಿ ಯಜಮಾನ ವಿತರಕರಿಗೆ ದೊಡ್ಡ ಲಾಭ ಮಾಡಿಕೊಟ್ಟಿತ್ತು. ಈಗ ಮತ್ತೊಮ್ಮೆ 25 ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ ಯಜಮಾನ.
ವಿಷ್ಣು ಮತ್ತು ವಿಷ್ಣು, ಪ್ರೇಮಾ, ಅರ್ಚನಾ, ಅಭಿಜಿತ್, ಅವಿನಾಶ್, ರಮೇಶ್ ಭಟ್, ಶಶಿಕುಮಾರ್, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್, ಸ್ವಾತಿ, ಎಂಎನ್ ಲಕ್ಷ್ಮೀದೇವಿ, ಶಿವರಾಮ್, ಶೋಭರಾಜ್, ಮೈಕೇಲ್ ಮಧು.. ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿತ್ತು.
ಒಂದಂತೂ ನಿಜ. ಯಜಮಾನ ಚಿತ್ರದ ಕತೆ ಸೂಪರ್. ಆದರೆ.. ಅದು ಸ್ವಮೇಕ್ ಆಗಿದ್ದರೆ.. ಎಂದು ಅಭಿಮಾನಿಗಳಲ್ಲೂ ಕಾಡುವುದು ನಿಜ. ಏಕೆಂದರೆ ವಿಷ್ಣು ವೃತ್ತಿ ಬದುಕಿನ ಹಲವು ಸೂಪರ್ ಡ್ಯೂಪರ್ ಹಿಟ್ ಚಿತ್ರಗಳು ವೊರಿಜಿನಲ್ ಅಲ್ಲ. ಯಜಮಾನ, ಸೂರ್ಯವಂಶ, ಆಪ್ತಮಿತ್ರ, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ, ಒಂದೇ ಗುರಿ, ಖೈದಿ, ಗುರು ಶಿಷ್ಯರು, ನೀ ಬರೆದ ಕಾದಂಬರಿ, ಜೀವನ ಚಕ್ರ, ದೇವಾ, ದಿಗ್ಗಜರು, ಈ ಬಂಧನ.. ಇನ್ನೂ ಪಟ್ಟಿ ದೊಡ್ಡದೇ ಇದೆ. ಅಂತಹವುಗಳಲ್ಲೊಂದು ಯಜಮಾನ.



