ಇದು ಮಾರ್ಟಿನ್ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್. ಆರಂಭದಲ್ಲಿ ಇದು ದಾಖಲೆಗಳನ್ನೆಲ್ಲ ಚಿಂದಿ ಉಡಾಯಿಸಲಿದೆ ಎಂದೇ ಹೇಳಲಾಗಿತ್ತು. ಏಕೆಂದರೆ ಎದ್ದಿದ್ದ ಹವಾ ಆಗಿತ್ತು. ಮೂರೂ..ಮೂರೂವರೆ ವರ್ಷಗಳ ನಂತರ ಧ್ರುವ ಸರ್ಜಾ ಬೆಳ್ಳಿತೆರೆ ಪ್ರವೇಶ ಮಾಡಿದ್ದರು. ಹಿಂದಿನ ಪೊಗರು ಕೂಡಾ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿಸಿ ಸೋತಿದ್ದರೂ, ಮಾರ್ಟಿನ್ ಬಗ್ಗೆ ಜನರ ನಿರೀಕ್ಷೆ ಬೇರೆಯದ್ದೇ ಇತ್ತು.
ಇಷ್ಟೆಲ್ಲ ನಿರೀಕ್ಷೆ ಹುಟ್ಟಿಸಿದ್ದ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ ಚಿತ್ರ ಮಾರ್ಟಿನ್ ಆಯುಧಪೂಜೆಯಂದು ರಿಲೀಸ್ ಆಗಿತ್ತು. ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ‘ಮಾರ್ಟಿನ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಕ್ಕೆ ತಕ್ಕಂತೆ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿದ ಯೂಟ್ಯೂಬರ್ ವಿರುದ್ಧ ಅಭಿಮಾನಿಗಳು ಹಾಗೂ ಚಿತ್ರತಂಡ ಮುಗಿಬಿದ್ದಿತ್ತು. ಒಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿತ್ತು. ಇಷ್ಟೆಲ್ಲ ಆಗಿದ್ದರೂ, ಮಾರ್ಟಿನ್ ಚಿತ್ರ ಸಮಾಧಾನಕರ ಕಲೆಕ್ಷನ್ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಮಾರ್ಟಿನ್, ಕರ್ನಾಟಕದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದೆ.
ಮಾರ್ಟಿನ್ ಬಾಕ್ಸ್ ಆಫೀಸ್ ಕಲೆಕ್ಷನ್ (ಕರ್ನಾಟಕ)
ಮೊದಲ ದಿನ 6.5 ಕೋಟಿ ರೂ.
ಎರಡನೇ ದಿನ 5.1 ಕೋಟಿ ರೂ.
೩ನೇ ದಿನ 4.1 ಕೋಟಿ ರೂ.
೪ನೇ ದಿನ 1.7 ಕೋಟಿ ರೂ.
೫ನೇ ದಿನ 1.0 ಕೋಟಿ ರೂ.
೬ನೇ ದಿನ 1.0 ಕೋಟಿ ರೂ.
೭ನೇ ದಿನ 90 ಲಕ್ಷ ರೂ.
೮ನೇ ದಿನ 60 ಲಕ್ಷ ರೂ.
೯ನೇ ದಿನ 40 ಲಕ್ಷ ರೂ.
೧೦ನೇ ದಿನ 50 ಲಕ್ಷ ರೂ.
೧೧ನೇ ದಿನ 25 ಲಕ್ಷ ರೂ.
ಕಲೆಕ್ಷನ್ ಮಾಡಿದೆ ಎಂದು ಅನಧಿಕೃತ ಮೂಲಗಳು ಹೇಳಿವೆ. ಒಟ್ಟು ಕಲೆಕ್ಷನ್ 22.05 ಕೋಟಿ ರೂ. ದಾಟಿದೆ ಎನ್ನಲಾಗಿದೆ. ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರು ಕಥೆ ಬರೆದಿದ್ದರು. ಮಾರ್ಟಿನ್ ಈಗಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ನಿರ್ಮಾಪಕ ಉದಯ್ ಕೆ ಮೆಹ್ತಾ ಅವರಿಗೆ ಹಾಕಿದ ಬಂಡವಾಳ ಒಟಿಟಿ, ಸ್ಯಾಟಲೈಟ್ ಮಾರಾಟದಿಂದ ವಾಪಸ್ ಆಗಬಹುದು ಎಂಬ ನಿರೀಕ್ಷೆಗಳಿವೆ. ಚಿತ್ರವನ್ನು ನಿಗದಿತ ಬಜೆಟ್ಟಿನಲ್ಲೇ ಮುಗಿಸಿದ್ದರೆ ಖಂಡಿತಾ ಚಿತ್ರ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರುತ್ತಿತ್ತು. ಹಾಗಾಗದೆ ಚಿತ್ರದ ಬಜೆಟ್ ಮಿತಿಮೀರಿ ಹೋಗಿದ್ದೇ ಚಿತ್ರದ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ.
ಈಗ ಚಿತ್ರವನ್ನು ಕಾಪಾಡುವ ಶಕ್ತಿ ಇರುವುದು ಚಿತ್ರದ ಸ್ಯಾಟಲೈಟ್, ಒಟಿಟಿ ಹಕ್ಕುಗಳಿಗೆ ಮಾತ್ರ. ಏಕೆಂದರೆ ಚಿತ್ರವಿನ್ನೂ ತಯಾರು ಮಾಡುವ ಹಂತದಲ್ಲಿದ್ದಾಗ ಮಾರ್ಟಿನ್ ಚಿತ್ರಕ್ಕೆ ಒಟಿಟಿಯವರು 60 ಕೋಟಿಗೂ ಹೆಚ್ಚು ಹಣ ಕೊಡೋಕೆ ಮುಂದೆ ಬಂದಿದ್ದರಂತೆ. ಆದರೆ ಉದಯ್ ಕೆ ಮೆಹ್ತಾ ಒಪ್ಪಿರಲಿಲ್ಲ. ಚಿತ್ರದ ಕಥೆ, ನಿರ್ದೇಶನ ಹಾಗೂ ಧ್ರುವ ಸರ್ಜಾ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಉದಯ್ ಕೆ ಮೆಹ್ತಾ, ಈಗ ಪರಿತಪಿಸುವಂತಾಗಿದೆ. ಚಿತ್ರ ಹಿಟ್ ಆಗದೇ ಇರುವ ಕಾರಣ, ಈಗ ಒಟಿಟಿಯವರಂತೂ ಖಂಡಿತಾ ಅಷ್ಟೆಲ್ಲ ಹಣ ಕೊಡೋದಿಲ್ಲ. ಲಕ್ಷಗಳ ಲೆವೆಲ್ಲಿಗೆ ಇಳಿದರೂ ಆಶ್ಚರ್ಯ ಪಡಬೇಕಿಲ್ಲ. ಒಟ್ಟಿನಲ್ಲಿ ಮಾರ್ಟಿನ್ ಹಳ್ಳಕ್ಕೆ ಬಿದ್ದಿದೆ. ಸಿನಿಮಾವನ್ನು ಚೆನ್ನಾಗಿ ಮಾಡಿದ್ದರೆ, ಧ್ರುವ ಸರ್ಜಾರ ಮಾರ್ಕೆಟ್ ವ್ಯಾಲ್ಯೂ ಖಂಡಿತಾ ಏರುತ್ತಿತ್ತು. ಆದರೆ, ಅವರ ಮೇಲೆ ಇವರು.. ಇವರ ಮೇಲೆ ಅವರು ಪಾರುಪಥ್ಯ ಸಾಧಿಸೋದಕ್ಕೆ ಹೋಗಿ, ನಿರ್ಮಾಪಕ ಬೀದಿಗೆ ಬರುವಂತಾಗಿದೆ.



