ಸರ್ಜಾ ಕುಟುಂಬದ ಮುದ್ದು ಸೊಸದೆ ನಟಿ ಮೇಘನಾ ರಾಜ್ ಅವರಿಗೆ ಮತ್ತೊಂದು ಮದುವೆ ಮಾಡಿಸುವ ಅಭಿಮಾನಿಗಳ ಅತ್ಯುತ್ಸಾಹ ಹೊಸದೇನಲ್ಲ. ಅವರು ಮತ್ತೊಂದು ಮದುವೆ ಆಗ್ತಿದ್ದಾರಂತೆ ಎಂಬ ಸುದ್ದಿಯೂ ಹೊಸದಲ್ಲ. ಮೇಘನಾ ಅವರ ಪುನರ್ ವಿವಾಹ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತದೆ. ಸ್ವಲ್ಪ ದಿನಗಳ ಬಳಿಕ ತಣ್ಣಗಾಗುತ್ತದೆ. ಮತ್ತೊಮ್ಮೆ ಯಾವಾಗಲೋ ಧುತ್ತನೆ ಸುದ್ದಿಯಾಗುತ್ತದೆ. ಇತ್ತೀಚೆಗೆ ಮೇಘನಾ ರಾಜ್ ಅವರು, ವಿಜಯ್ ರಾಘವೇಂದ್ರ ಜೊತೆ 2ನೇ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿಗಳು ಭರ್ಜರಿಯಾಗಿ ಓಡಾಡಿದ್ದವು.
ವಿಜಯ್ ರಾಘವೇಂದ್ರ ಅವರು ಕೂಡಾ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಮೇಘನಾ ರಾಜ್ ಅವರೂ ಪತಿಯನ್ನು ಕಳೆದುಕೊಂಡಿದ್ದಾರೆ. ಇವರಿಬ್ಬರೂ ಮದುವೆಯಾದರೆ ಹೇಗಿರುತ್ತದೆ ಎಂದು ಯಾವನೋ ಎಲ್ಲಿಯೋ ಹೇಳಿದ.. ಇನ್ನೊಬ್ಬ ಕನಸು ಕಂಡ.. ಮತ್ತೊಮ್ಮೆ ಮೇಘನಾ ಮತ್ತು ವಿಜಯ್ ರಾಘವೇಂದ್ರ ಇಬ್ಬರನ್ನೂ ಓಕೆ ಮಾಡಿಸಿದ. ಇನ್ನೂ ಒಬ್ಬ ಮದುವೆಗೆ ಕುಟುಂಬಸ್ಥರನ್ನೆಲ್ಲ ಒಪ್ಪಿಸಿದ್ದ. ದಿನ, ಮುಹೂರ್ತ ಮಾತ್ರ ನಿಗದಿಯಾಗಬೇಕಿತ್ತಷ್ಟೇ. ಇಂತಹ ಸುದ್ದಿಗಳಿಗೆಲ್ಲ ಮೇಘನಾ ರಾಜ್ ಉತ್ತರ ಕೊಟ್ಟಿದ್ದಾರೆ.
“ಇಂತಹ ಸುದ್ದಿಗಳನ್ನ ನೋಡಿದಾಗಲೆಲ್ಲ ಮನರಂಜನೆ ಸಿಗುತ್ತದೆ, ಅಷ್ಟೇ. ಜನ ಹೀಗೂ ಮಾತನಾಡ್ತಾರಾ ಅನ್ನೋದನ್ನ ನೋಡಿ ಎಂಜಾಯ್ ಮಾಡ್ತೇನೆ. ಆದರೆ ಏನೂ ಮಾಡೋಕಾಗಲ್ಲ. ನಾವು ಅದನ್ನು ಸ್ವೀಕರಿಸಬೇಕು, ಅಷ್ಟೇ. ನನ್ನ ವಿಚಾರದಲ್ಲಿ ಅಷ್ಟೇ ಅಲ್ಲ ವಿಜಯ ರಾಘವೇಂದ್ರ ಅವರ ಬಗ್ಗೆಯೂ ಹಾಗೆ ಮಾತನಾಡಿದ್ದಾರೆ. ಇದರಿಂದ ನನಗೆ ಹರ್ಟ್ ಆಗಲಿ ಅಂತ ಮಾಡುತ್ತಿದ್ದಾರೋ ಅಥವಾ ಖುಷಿ ಆಗಲಿ ಅಂತ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಈ ಬಗ್ಗೆ ತುಂಬಾ ಟ್ರೋಲ್ಸ್ ಕೂಡ ಮಾಡುತ್ತಾರೆ. ಪರವಾಗಿಲ್ಲ ಇದನ್ನೆಲ್ಲಾ ನೋಡಿ ನಾನು ಎಂಟರ್ಟೈನ್‌ಮೆಂಟ್ ತೆಗೆದುಕೊಳ್ಳುತ್ತೇನೆ ಅಷ್ಟೇ” ಎಂದಿದ್ದಾರೆ ಮೇಘನಾ ಸರ್ಜಾ.
ಹಾಗಾದರೆ ಮೇಘನಾ ರಾಜ್ ಅವರಿಗೆ 2ನೇ ಮದುವೆಯ ಆಲೋಚನೆಯೇ ಬಂದಿಲ್ಲವಾ ಎಂದರೆ ಮೇಘನಾ ಮುಚ್ಚು ಮರೆಯಿಲ್ಲದೆ ಆ ರೀತಿಯ ಆಲೋಚನೆ ಬಂದಿದ್ದು ನಿಜ ಎಂದು ಒಪ್ಪಿಕೊಳ್ತಾರೆ. ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದರೆ ಅದು ಸುಳ್ಳು. ನಾನೂ ಒಬ್ಬಳು ಹೆಣ್ಣು. ಒಂದು ಹೆಣ್ಣಾಗಿ ನನ್ನ ಮಗನನ್ನು ನೋಡಿದಾಗ, ರಾಯನ್ ಪ್ರತೀ ದಿನವೂ ಅಪ್ಪನ ಬಗ್ಗೆ ಮಾತನಾಡುತ್ತಾನೆ. ಅಪ್ಪ ಚಿರು ಅಂತ ಅವನಿಗೆ ಗೊತ್ತು. ಅಪ್ಪನ ಹಾಡುಗಳನ್ನು ನೋಡುತ್ತಾನೆ. ಆದರೆ ಫಿಸಿಕಲ್ ಆಗಿ ಚಿರುನ, ಮಗ ರಾಯನ್ ನೋಡಿಲ್ಲ. ಆದ್ರೆ ಅಪ್ಪ ಇದಾರೆ ಅನ್ನೋದು ರಾಯನ್‌ಗೆ ಗೊತ್ತು. ಆದರೆ ರಾಯನ್‌ಗೆ ಫಿಸಿಕಲ್ ಆಗಿ ತಂದೆ ಫಿಗರ್ ಇದ್ದರೆ ಒಳ್ಳೆಯದು ಅಂತಾ ಕೆಲವೊಮ್ಮೆ ಅನಿಸುತ್ತೆ ಎಂದಿದ್ದಾರೆ ಮೇಘನಾ.
ಆದರೆ ಯಾಕೆ ಎರಡನೇ ಮದುವೆ ಬಗ್ಗೆ ಮುಂದುವರೆಯುತ್ತಿಲ್ಲ ಎನ್ನುವುದಕ್ಕೆ ಕಾರಣಗಳೂ ಇವೆ. ಮೇಘನಾ ಅವರ ಮಾತಿನ ಪ್ರಕಾರ ಅವರು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣ ಅಭಿಮಾನಿಗಳು, ಸೋಷಿಯಲ್ ಮೀಡಿಯಾ ಮತ್ತು ಕುಟುಂಬ. ಇನ್ನು ತಮ್ಮ 2ನೇ ಮದುವೆ ಜವಾಬ್ದಾರಿಯನ್ನೂ ಚಿರುಗೇ ಬಿಟ್ಟುಬಿಟ್ಟಿದ್ದಾರಂತೆ.
ʻʻನನ್ನ ಚಿರು ಒಪ್ಪಿದರೆ ಆಗಬಹುದು. ನನ್ನ ಜೀವನಕ್ಕೆ ಅದು ಒಳ್ಳೆ ಡಿಸಿಶನ್ ಅಂತ ಅನಿಸಿದ್ರೆ, ಅದು ಖಂಡಿತವಾಗಿಯೂ ಆಗುತ್ತೆ. ಅದು ಆದಾಗ ನನಗೆ ಗೊತ್ತು ಅದು ಚಿರುನೇ ಮಾಡಿಸಿದ್ದು ಅಂತ. ಅವನಿಗೆ ನಾನು ಹೀಗೆ ಇರುವುದೇ ಉತ್ತಮ ಅನಿಸಿದ್ರೆ ಬಹುಶಃ ನಾನು ಹೀಗೆ ಇರುತ್ತೀನಿ ಎಂದಿದ್ದಾರೆ ಮೇಘನಾ ಸರ್ಜಾ.



