ಮುಂಗಾರು ಮಳೆ.. ಆ ಚಿತ್ರವನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ. ಅದೊಂದು ಚಿತ್ರದಿಂದಲೇ..ಕನ್ನಡದ ಖ್ಯಾತ ನಟಿಯಾದವರು ಪೂಜಾಗಾಂಧಿ. ಮುಂಗಾರು ಮಳೆ ಖ್ಯಾತಿಯ ಪೂಜಾಗಾಂಧಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ. ಪೂಜಾಗಾಂಧಿ ಮದುವೆಯ ಸುದ್ಧಿ ಗಾಂದಿನಗರಕ್ಕೆ ಹೊಸದಲ್ಲ. ಆದರೆ ಈ ಬಾರಿ ಪೂಜಾರ ಬದುಕಿನಲ್ಲಿ ವಿಜಯೋತ್ಸವ ಶುರುವಾಗಲಿದೆ.
ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಪೂಜಾ ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಲಿದೆ. ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ನವೆಂಬರ್ 29ರಂದು ಮದುವೆಯಾಗಲಿದ್ದಾರೆ. ಈ ಮದುವೆ ಅತ್ಯಂತ ಸರಳವಾಗಿ ಮಂತ್ರ ಮಾಂಗಲ್ಯದ ಮೂಲಕ ನೆರವೇರಲಿದೆ ಎನ್ನುವುದು ವಿಶೇಷ.
ಲಾಜಿಸ್ಟಿಕ್ ಉದ್ಯಮಿ ವಿಜಯ್ ಎಂಬುವವರ ಜೊತೆ ನಟಿ ಪೂಜಾ ಗಾಂಧಿ ಮದುವೆ ನಡೆಯಲಿದೆ. ಇತ್ತೀಚೆಗಿನ ಕೆಲವು ವರ್ಷಗಳಿಂದ ವಿಜಯ್ ಮತ್ತು ಪೂಜಾ ಗಾಂಧಿ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈಗ ಅವರಿಬ್ಬರೂ ಮದುವೆ ಆಗುತ್ತಿದ್ದಾರೆ. ಪೂಜಾ ಗಾಂಧಿ ಕನ್ನಡದವರಲ್ಲ. ಪಂಜಾಬಿ ಮಾತೃಭಾಷೆ. ಹೀಗಿದ್ದರೂ ಅದ್ಭುತವಾಗಿ ಕನ್ನಡ ಮಾತನಾಡುವ, ಬರೆಯುವ ಪೂಜಾ ಗಾಂಧಿ ಕನ್ನಡದವರೇ ಆಗಿದ್ಧಾರೆ. ಈಗ ಕುವೆಂಪು ಅವರು ಹಾಕಿಕೊಟ್ಟ ಮಾದರಿಯಲ್ಲಿ ಮಂತ್ರ ಮಾಂಗಲ್ಯದ ಮದುವೆಯಾಗುತ್ತಿರುವುದು ವಿಶೇಷ.
ವೈಯಕ್ತಿಕ ಬದುಕಿನಲ್ಲಿ ಪೂಜಾ ಗಾಂಧಿ ಅವರು ಕೆಲವು ಏಳು-ಬೀಳುಗಳನ್ನು ಕಂಡಿದ್ದಾರೆ. 2012ರಲ್ಲಿ ಅವರ ನಿಶ್ಚಿತಾರ್ಥ ನಡೆದಿತ್ತು. ಉದ್ಯಮಿ ಆನಂದ್ ಗೌಡ ಜೊತೆ ಅವರು ಮದುವೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಂಬಂಧ ಮುರಿದುಬಿದ್ದಿತ್ತು. ಈ ಮಧ್ಯೆ ರಾಜಕೀಯಕ್ಕೂ ಬಂದು ಹೋದ ನಟಿ ಪೂಜಾ ಗಾಂಧಿ, ಒಂದೇ ತಿಂಗಳಲ್ಲಿ ಮೂರು ಪಕ್ಷದಲ್ಲಿ ಸಂಚಾರ ಮಾಡಿದವರು. ಈಗ ಬಹುತೇಕ ಚಿತ್ರರಂಗದಿಂದ ದೂರವೇ ಇದ್ಧಾರೆ.
ಅಂದಹಾಗೆ ಪೂಜಾ ಗಾಂಧಿಯವರ ಮೊದಲ ಹೆಸರು ಸಂಜನಾ ಗಾಂಧಿ. ಅಷ್ಟೊತ್ತಿಗಾಗಲೇ ಕನ್ನಡದಲ್ಲಿ ಸಂಜನಾ ಅನ್ನೋ ಹೆಸರಿನ ನಟಿಯಿದ್ದರು. ಸಂಜನಾ ಪೂಜಾ ಆಗಿದ್ದು ಮುಂಗಾರು ಮಳೆ ಹಿಟ್ ಆದ ಮೇಲೆಯೇ. ಮಳೆ ಹುಡುಗಿ ಎಂದೇ ಫೇಮಸ್ ಆದ ಪೂಜಾ ಗಾಂಧಿ, ಉದ್ಯಮಿ ಆನಂದ್ ಗೌಡ ಅವರನ್ನು ಪ್ರೀತಿಸಿಯೇ ಎಂಗೇಜ್ʻಮೆಂಟ್ ಮಾಡಿಕೊಂಡಿದ್ದರು. ಅದೇನಯ್ತೋ ಏನೋ.. ನಿಶ್ಚಿತಾರ್ಥದ ನಂತರ ಮದುವೆ ಮುರಿದು ಬಿದ್ದಿತ್ತು. ನಿಜವಾದ ಕಾರಣ ಇವತ್ತಿಗೂ ಗೊತ್ತಿಲ್ಲ. ಅದಾದ ಮೇಲೆ ಇದೀಗ ಮಂತ್ರ ಮಾಂಗಲ್ಯದ ಮೂಲಕ ನಾಳೆ ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ.



