ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಆರಂಭ ಆಗುವುದಕ್ಕೂ ಮೊದಲು ಟೆಂಪಲ್ ರನ್ ಶುರು ಮಾಡಿದ್ದಾರೆ. ಧರ್ಮಸ್ಥಳಕ್ಕೆ ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಬಂದು ಮಂಜುನಾಥನ ದರ್ಶನ ಪಡೆದಿದ್ದಾರೆ. ಮಕ್ಕಳಾದ ಐರಾ ಮತ್ತು ಯಥರ್ವ್ ಕೂಡಾ ಜೊತೆಗಿದ್ದರು. ಟಾಕ್ಸಿಕ್ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ವೆಂಕಟ್ ಅವರೂ ಯಶ್ ಜೊತೆಗಿದ್ದರು. ಬಳಿಕ ಯಶ್ ಕುಟುಂಬ ಸಮೇತರಾಗಿ ಉಜಿರೆಯ ಸೂರ್ಯ ದೇವಸ್ಥಾನಕ್ಕೂ ಭೇಟಿ ನೀಡಿದ ಅವರು ಸದಾಶಿವ ದೇವರ ದರ್ಶನ ಪಡೆದಿದ್ದಾರೆ. ಇಲ್ಲಿ ಮಣ್ಣಿನ ರೀಲ್ʻನ್ನು ಕಾಣಿಕೆಯಾಗಿ ಕೊಟ್ಟಿರುವುದು ವಿಶೇಷ.
ಯಾವುದೇ ಒಂದು ಶುಭ ಕಾರ್ಯ ಆರಂಭಿಸುವಾಗ ಪ್ರತಿಯೊಬ್ಬರು ದೇವರ ದರ್ಶನ ಪಡೆಯುತ್ತಾರೆ. ಕಾಂತಾರ ಶುರು ಮಾಡಿದಾಗ ನಟ ರಿಷಬ್ ಶೆಟ್ಟಿ ಕೂಡ ಮಂಜುನಾಥನ ದರ್ಶನ ಪಡೆದಿದ್ದರು. ಕಾಂತಾರ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದಲ್ಲದೆ, ದೊಡ್ಡ ಸಕ್ಸಸ್ ನೀಡಿತ್ತು. ಇದೀಗ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಧರ್ಮಸ್ಥಳಕ್ಕೆ ಬಂದ ನಟ ಯಶ್ ಅವರು ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಖಾವಂದರು ರಾಕಿ ಭಾಯ್ ಅವರನ್ನು ಗೌರವಿಸಿ, ಪ್ರಸಾದ ನೀಡಿದ್ದಾರೆ. ಅದಾದ ನಂತರ ಉಜಿರೆಯ ಸೂರ್ಯದೇವರ ದರ್ಶನ ಮಾಡಿದ್ದಾರೆ.
ಉಜಿರೆಯ ಸೂರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ವಿಶೇಷ ಏನೆಂದರೆ, ಇಲ್ಲಿ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮಣ್ಣಿನ ಪ್ರತಿಮೆಯ ಹರಕೆ ಹೊರುತ್ತಾರೆ. ಹೀಗಾಗಿ ಯಶ್ ʻಮಣ್ಣಿನ ರೀಲ್ʼ ಪ್ರತಿಮೆ ನೀಡಿದ್ದಾರೆ. ಈ ಮೂಲಕ ಟಾಕ್ಸಿಕ್ ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದಾದ ನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ಕೊಟ್ಟಿದ್ದಾರೆ.
ಮಣ್ಣಿನ ರೀಲ್ ಮಹಾತ್ಮೆ ಏನು..?
ಒಂದೊಂದು ದೇವಾಲಯದಲ್ಲಿ ಒಂದೊಂದು ವಿಶೇಷವಿರುತ್ತದೆ. ಭಕ್ತರು ಹರಕೆ ಹೊತ್ತರೆ ಅದು ಈಡೇರಿದ ನಂತರ ಬೇರೆ ಬೇರೆ ರೀತಿಯಲ್ಲಿ ಹರಕೆ ಸಲ್ಲಿಸಲಾಗುವುದು. ಕೆಲವು ದೇವಾಲಯದಲ್ಲಿ ಪಟ್ಟೆ ಸೀರೆ ನೀಡುವ ಆಚರಣೆ ಇದ್ದರೆ ಇನ್ನೂ ಕೆಲವು ದೇವಾಲಯದಲ್ಲಿ ಬೆಲೆಬಾಳುವ ವಸ್ತುಗಳು, ಗಂಟೆ ಹೀಗೆ ಇನ್ನಿತರ ವಸ್ತುಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗೆ ಸಲ್ಲಿಸಿದರೆ ಮಾತ್ರ ಅವರ ಹರಕೆ ಈಡೇರುತ್ತದೆ. ಯಶ್ ಅವರು ಭೇಟಿ ನೀಡಿರುವ ಸೂರ್ಯ ದೇವರ ದೇವಸ್ಥಾನದಲ್ಲಿ ಹರಕೆ ಈಡೇರಿದರೆ ಮಣ್ಣಿನ ಗೊಂಬೆ ಕೊಡುತ್ತಾರಂತೆ.
ಸದಾಶಿವ ರುದ್ರ ದೇವಸ್ಥಾನವು ಸೂರ್ಯ ಎಂಬ ಹಳ್ಳಿಯಲ್ಲಿರುವುದರಿಂದ ಇದನ್ನು ಸೂರ್ಯ ದೇವಸ್ಥಾನ ಎನ್ನಲಾಗುತ್ತದೆ. ಮಾಧ್ವ ಸಂಪ್ರದಾಯದ ಶಿವನ ಪ್ರಮುಖ ದೇವಾಲಯ ಇದಾಗಿದೆ. ಶಿವನನ್ನು ರುದ್ರನೆಂದು ಸಂಭೋಧಿಸಿ ಪೂಜಿಸಲಾಗುತ್ತದೆ
ಹರಕೆ ಈಡೇರಿದ ನಂತರ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ ಹಾಗೂ ಐದು ರೂ. ಕಾಣಿಕೆ ಜೊತೆ ಈ ಮಣ್ಣಿನ ಗೊಂಬೆಯನ್ನು ಅರ್ಪಿಸಬೇಕು. ನೀವು ಯಾವ ರೀತಿಯ ಹರಕೆ ಹೇಳುತ್ತೀರೋ ಯಾವ ಕೋರಿಕೆಯನ್ನು ಕೋರುತ್ತೀರೋ ಅದೇ ರೀತಿಯ ಹರಕೆಯನ್ನು ಮಣ್ಣಿನ ಗೊಂಬೆಗಳ ರೂಪದಲ್ಲಿ ತೀರಿಸಬೇಕು.
ಉದಾ: ಮನೆ ನಿರ್ಮಾಣಕ್ಕೆ ಹರಕೆ ಹೊತ್ತರೆ ಮಣ್ಣಿನ ಮನೆಯ ಆಕೃತಿಯನ್ನು ಅರ್ಪಿಸಬೇಕು. ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಿದರೆ ಮಗು ಜನಿಸಿದ ನಂರ ಮಣ್ಣಿನ ತೊಟ್ಟಿಲನ್ನು ಅರ್ಪಿಸಬೇಕು. ಈ ಗೊಂಬೆಗಳನ್ನು ಆವೆ ಮಣ್ಣಿನಲ್ಲಿ ಮಾಡಲಾಗುತ್ತದೆ. ದೂರದೂರದ ಊರಿಗಳಿಂದ ಬರುವ ಭಕ್ತರಿಗೆ ಸಹಾಯವಾಗುವಂತೆ ಮಣ್ಣಿನ ಗೊಂಬೆಗಳನ್ನು ಕುಂಬಾರರದಿಂದ ಮಾಡಿಸಿ ದೇವಸ್ಥಾನದ ಆವರಣದಲ್ಲೇ ಲಭ್ಯವಿರುವಂತೆ ಮಾಡಲಾಗಿದೆ. 50 ರೂ.ಯಿಂದ 200 ವರೆಗೆ ಮಣ್ಣಿನ ಗೊಂಬೆಗಳು ಸಿಗುತ್ತವೆ.
ದೇವಸ್ಥಾನದಿಂದ ಉತ್ತರಕ್ಕೆ 100 ಮೀ. ದೂರದಲ್ಲಿ ಒಂದು ಹರಕೆ ಬನವಿದೆ. ಅರ್ಚಕರು ಹರಕೆಯ ಗೊಂಬೆಗಳನ್ನು ಆ ಬನದಲ್ಲಿ ಇಡುತ್ತಾರೆ. ಭಕ್ತರು ಅರ್ಪಿಸಿದ ಗೊಂಬೆಗಳನ್ನು ಅಕ್ಕಿಯನ್ನು ಮಧ್ಯಾಹ್ನದ ಪೂಜೆಗೂ ಮೊದಲು ಸಲ್ಲಿಸಬೇಕು . ಅದನ್ನು ಹರಕೆ ಬನಕ್ಕೆ ತೆಗೆದುಕೊಂಡು ಹೋಗಿ ಅರ್ಚಕರು ಗೊಂಬೆಗಳನ್ನು ಜೋಡಿಸುತ್ತಾರೆ. ಅಲ್ಲಿಗೆ ಅ ಹರಕೆ ಪೂರೈಸಿದಂತೆ.
ಟಾಕ್ಸಿಕ್ ಯಶ್ ಅವರ ಕನಸಿನ ಪ್ರಾಜೆಕ್ಟ್. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಸಿನಿಮಾ ಮುಂದಿನ ಏಪ್ರಿಲ್ನಲ್ಲಿ ರಿಲೀಸ್ ಆಗಲಿದೆ. ಆದರೆ, ಈಗಾಗಲೇ ಸಿನಿಮಾ ಕೆಲಸಗಳು ವಿಳಂಬ ಆಗುತ್ತಿರುವುದರಿಂದ ಸಿನಿಮಾ ಅಂದುಕೊಂಡ ದಿನಾಂಕದಂದು ರಿಲೀಸ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ.



