ಮಂಡ್ಯದ ಅಳಿಯನಾದ ಬಿಗ್ ಬಾಸ್ ಪ್ರಥಮ್
ಕರ್ನಾಟಕದ ಅಳಿಯ ಅನ್ನೋ ಸಿನಿಮಾ ಹೀರೋ ಈಗ ಮಂಡ್ಯದ ಅಳಿಯನಾಗಿದ್ದಾರೆ. ಇತ್ತೀಚೆಗಷ್ಟೇ ದೆವ್ವದ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳೋಕೆ ಹೀರೋ ಆಗಿದ್ದ ಪ್ರಥಮ್, ಭಾನುಶ್ರೀ ಎಂಬ ಚೆಲುವೆಯ ಕೈಹಿಡಿದಿದ್ದಾರೆ. ಈ ನಟ ಭಯಂಕರ ಈಗ ದೇವ್ರವ್ನೇ ಬುಡು ಗುರು ಅಂದ್ಕೊಂಡು ಮದುವೆಯಾಗೇ ಬಿಟ್ಟಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಒಳ್ಳೆಹುಡ್ಗ ಪ್ರಥಮ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯದ ಭಾನುಶ್ರೀ ಅವರೊಂದಿಗೆ ಸಪ್ತಪದಿ ತುಳಿದಿರುವ ಪ್ರಥಮ್ ಈಗ ಮಂಡ್ಯದ ಅಳಿಯನಾಗಿದ್ದಾರೆ. ಸರಳವಾಗಿ ನಡೆದ ಮದುವೆಗೆ ಗುರು ಹಿರಿಯರು, ಆಪ್ತರು ಮತ್ತು ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಕೋರಿದ್ಧಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್, ವಿನಯ್, ಧ್ರುವ ಸರ್ಜಾ, ನಟ ಶಶಿಕುಮಾರ್, ಪ್ರೇಮ್ ದಂಪತಿ, ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಗಳಾಗಿದ್ದ ಇಶಾನಿ, ಸ್ನೇಕ್ ಶ್ಯಾಮ್, ರಿವ್ಯೂವ್ ನವಾಜ್, ರಕ್ಷಕ್ ಬುಲೆಟ್ ಬಂದು ನೂತನ ಜೋಡಿಗೆ ಹಾರೈಸಿದ್ದಾರೆ. ನಟ ಪ್ರಥಮ್ ಮೊದಲಿನಿಂದಲೂ ಹಳ್ಳಿ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿದ್ದರು.
ಕಳೆದ ಜೂನ್‌ನಲ್ಲಿ ಭಾನುಶ್ರೀ ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪ್ರಥಮ್ ಅವರನ್ನ ಮದುವೆಯಾದ ಭಾನುಶ್ರೀ ಅವರು ಮಂಡ್ಯದ ಗ್ರಾಮವೊಂದರ ನಿವಾಸಿಯಾಗಿದ್ದು, ಎಂಎ ಓದುತ್ತಿದ್ದಾರೆ. ಈ ನಡುವೆ ಪ್ರಥಮ್ ಕೆಲವು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ನಟನಾಗಿ, ನಿರ್ದೇಶಕನೂ ಆಗಿ ಹೆಸರು ಮಾಡಿರುವ ಪ್ರಥಮ್ ಅವರಿಗೆ ದೊಡ್ಡ ಮಟ್ಟದ ಹಿಟ್ ಸಿನಿಮಾ ಇನ್ನೂ ಸಿಗಬೇಕಿದೆ.



