ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಶತ್ರಗಳೂ ಹಾಗೂ ಮಿತ್ರರು ಶಾಶ್ವತ ಅಲ್ಲ. ಐದು ವರ್ಷಗಳ ಹಿಂದಿದ್ದ ಸ್ಥಿತಿ ಇದ್ದಕ್ಕಿದ್ದಂತೆ ಉಲ್ಟಾ ಆಗಿಬಿಟ್ಟಿದೆ. ಲಾಸ್ಟ್ ಎಲೆಕ್ಷನ್ನಿನಲ್ಲಿ ಯುದ್ಧದಲ್ಲಿ ಜೊತೆಗಿದ್ದವರೇ ಈಗ ಶತ್ರುಗಳಾಗಿದ್ದರೆ, ಶತ್ರುಗಳಾಗಿದ್ದವರು ಈಗ ಮಿತ್ರರಾಗಿದ್ದಾರೆ. ಮಂಡ್ಯವೂ ಅದಕ್ಕೆ ಹೊರತಲ್ಲ.
ಸುಮಲತಾ ಜೊತೆ ಅಗತ್ಯಬಿದ್ದರೆ ಮಾತನಾಡಲೂ ಸಿದ್ಧ : ಕುಮಾರಸ್ವಾಮಿ
ಅಗತ್ಯ ಬಂದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರನ್ನೂ ಭೇಟಿ ಮಾಡುತ್ತೇನೆ. ಸುಮಲತಾ ಅವರು ಬಿಜೆಪಿಯಲ್ಲಿ ಮುಂದುವರಿಯುವುದಾದರೆ ಮಿತ್ರಪಕ್ಷ ಬಿಜೆಪಿ ಪರವಾಗಿ ಅವರನ್ನು ಭೇಟಿ ಮಾಡುತ್ತೇನೆ. ನಾವೇನು ಇಂತಹ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿದ್ದೀವಾ? ಇಂತಹವರಿಗೆ ತೊಂದರೆ ಕೊಟ್ಟು ನಿಲ್ಲಬೇಕು ಅಂತ ಖಂಡಿತ ಇಲ್ಲ. ಈ ಬಗ್ಗೆ ಇನ್ನೂ ಚರ್ಚೆಯೇ ಆಗಿಲ್ಲ. ಇವೆಲ್ಲ ಪ್ರಾರಂಭಿಕ ಹಂತದಲ್ಲಿ ಇದೆ. ಬಿಜೆಪಿ- ಜೆಡಿಎಸ್ ನಾಯಕರೆಲ್ಲ ಕೂತು ಸೌಹಾರ್ದಯುತವಾಗಿ ಕೆಲಸ ಮಾಡೋಕೆ ಎಲ್ಲರ ಜೊತೆಗೂ ಚರ್ಚೆ ನಡೆಸುತ್ತೇವೆ ಎಂದಿದ್ದಾರೆ ಕುಮಾರಸ್ವಾಮಿ.
2019ರ ಲೋಕಸಭಾ ಚುನಾವಣೆ ವೇಳೆ ಉಂಟಾಗಿದ್ದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದರೊಂದಿಗೆ ಸುಮಲತಾ ಅಂಬರೀಶ್ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದರು. ಸೋಲಿಸಿದ್ದು ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನ. ಆಗ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್+ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದರು. ಸುಮಲತಾ ಅವರಿಗೆ ಆಗ ಬಿಜೆಪಿ ಬಹಿರಂಗ ಬೆಂಬಲ ಘೋಷಿಸಿತ್ತು. ಆದರೆ ಇದೀಗ ಚಿತ್ರಣವೇ ಅದಲು ಬದಲಾಗಿದೆ. ಜೆಡಿಎಸ್ ಈಗ ಬಿಜೆಪಿ ಜೊತೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ.
ಕಾಂಗ್ರೆಸ್ ಸೇರ್ತಾರಂತೆ ಸುಮಲತಾ ಅಂಬರೀಷ್ : ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಾಗಲು ಸಾಕಷ್ಟು ಆಕಾಂಕ್ಷಿಗಳಿದ್ದರೂ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿಯಾಗಲಿರುವ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಪ್ರಬಲ ಅಭ್ಯರ್ಥಿಯ ಕೊರತೆ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಹಾಗೂ ಮಾಜಿ ಸಂಸದ ಚೆಲುವರಾಯಸ್ವಾಮಿಗೇ ಅಭ್ಯರ್ಥಿಯಾಗುವಂತೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಒಪ್ಪದ ಚಲುವರಾಯಸ್ವಾಮಿ ತಮ್ಮ ಪತ್ನಿ ಧನಲಕ್ಷ್ಮೀಗೆ ಟಿಕೆಟ್ ಕೇಳಿದ್ದಾರೆ. ಆದರೆ ಬಹಿರಂಗವಾಗಿ ನನ್ನ ಪತ್ನಿ ಚುನಾವಣೆಗೆ ನಿಲ್ಲುವುದಿಲ್ಲ ಎಂದೂ ಹೇಳಿದ್ಧಾರೆ. ಸಚಿವ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ, ಮುಖಂಡರಾದ ಕೀಲಾರ ರಾಧಾಕೃಷ್ಣ, ಡಾ.ಎಚ್.ಕೃಷ್ಣ, ಅಮರಾವತಿ ಚಂದ್ರಶೇಖರ್, ಡಾ.ಎಚ್.ಎನ್. ರವೀಂದ್ರ ಸೇರಿದಂತೆ ಅನೇಕ ಮಂದಿ ಇದ್ದಾರೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಈ ನಡುವೆ ಇದ್ದಕ್ಕಿದ್ದಂತೆ ಸಮಲತಾ ಬಿಜೆಪಿಯ ಸಭೆಗಳಿಂದ ದೂರ ಉಳಿಯುತ್ತಿದ್ಧಾರೆ. ಸುಮಲತಾ ಅವರ ಕಾಂಗ್ರೆಸ್ ಸೇರ್ಪಡೆ ಸುದ್ದಿಗಳು ಜೀವ ಪಡೆದುಕೊಂಡಿವೆ. ಆದರೆ ಯಾವುದೂ ಅಧಿಕೃತ ಅಲ್ಲ.
ಜೆಡಿಎಸ್ʻನಿಂದ ಪುಟ್ಟರಾಜು ಹೆಸರು ಬರುತ್ತಿದೆ. ಆದರೆ.. :
ಮಂಡ್ಯದ ಕ್ಯಾಂಡಿಡೇಟ್ ಆಗಿ ಜೆಡಿಎಸ್ ಪಕ್ಷದ ಮಾಜಿ ಸಂಸದ ಸಿ.ಎಸ್. ಪುಟ್ಟರಾಜು ಹೆಸರು ಮುಂಚೂಣಿಗೆ ಬಂದಿದೆ. ಇದುವರೆಗೆ ನಿಖಿಲ್ ಹೆಸರು ಕೇಳಿ ಬಂದಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಪಕ್ಷದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋಲನುಭವಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ನಿಖಿಲ್ ಪರಾಭವಗೊಂಡಿದ್ದರು. ಪುತ್ರನ ಈ ಎರಡೂ ಸೋಲಿನಿಂದ ಜರ್ಜರಿತರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಸಭೆ ಚುನಾವಣೆಯಿಂದ ಪುತ್ರನನ್ನು ದೂರವಿಟ್ಟಿದ್ದಾರೆ. ತಾವೂ ಸಹ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಸಿ.ಎಸ್.ಪುಟ್ಟರಾಜು ಲೋಕಸಭೆ ಕ್ಷೇತ್ರದ ಟಿಕೆಟ್ ಹಾದಿ ಸುಗಮವಾದಂತಾಗಿದೆ ಎನ್ನಲಾಗುತ್ತಿದೆ. ಆದರೆ ಅಂತಿಮವಾಗಿ ಕುಮಾರಸ್ವಾಮಿಯೇ ಕ್ಷೇತ್ರದ ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.



