ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮಲಯಾಳಿಗಳು ಇರ್ತಾರೆ. ಚಂದ್ರಲೋಕಕ್ಕೆ ಹೋಗಿ ಅಲ್ಲಿನ ನೆಲ ಸ್ಪರ್ಶ ಮಾಡಿದಾಗ ಅಲ್ಲಿದ್ದ ಮಲಯಾಳಿಯವನು ಕಟ್ಟಂ ಚಾ ಕೊಟ್ಟ ಅನ್ನೋದೊಂದು ಜೋಕು. ಆದರೆ ಇದು ಜೋಕ್ ಅಷ್ಟೇ ಅಲ್ಲ, ಸತ್ಯವೂ ಹೌದು ಎಂದು ಹೇಳುತ್ತಿದೆ ಈ ರಿಪೋರ್ಟ್. ವಿಶ್ವಸಂಸ್ಥೆಯಲ್ಲಿ ನೋಂದಾವಣೆ ಆಗಿರುವ 195 ದೇಶಗಳಿವೆ. ನೋಂದಾವಣೆ ಆಗದಿರುವ ದೇಶಗಳು 10ರ ಗಡಿ ದಾಟುವುದಿಲ್ಲ. 195 ದೇಶಗಳಲ್ಲಿ 182 ದೇಶಗಳಲ್ಲಿ ಕೇರಳದವರಿದ್ಧಾರೆ. ಅಂದರೆ ಸುಮಾರು ಶೇ.93 ರಾಷ್ಟ್ರಗಳಲ್ಲಿ ಕೇರಳದವರಿದ್ಧಾರೆ.
ನಾರ್ಕಾ ಎಂಬ ಸಂಸ್ಥೆಯು ಕೇರಳ ಸರ್ಕಾರದೊಂದಿಗೆ ಜೊತೆಗೂಡಿ ತಯಾರಿಸಿದ ವರದಿಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಪ್ರಸ್ತುತ 4,36,960 ಮಂದಿ ನಾರ್ಕಾ ಸಂಸ್ಥೆಯ ಪ್ರವಾಸಿ ಐಡಿ ಹೊಂದಿದ್ದು, ಇವರು ಪ್ರಪಂಚದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. ಇದರಲ್ಲಿ ಹೆಚ್ಚು ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದು, ಯುಎಇಯಲ್ಲಿ 1,80,465 ಮಂದಿ ಉದ್ಯೋಗಿಗಳಾಗಿದ್ದಾರೆ.
ಇತ್ತೀಚೆಗೆ ವಲಸೆ ಹೊಂದುವವರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಉತ್ತಮ ಸಂಪರ್ಕ ಸೇತುವಾಗುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಮ್ಮ ಪ್ರವಾಸಿ ಐಡಿ ಹೊಂದಿರುವವರಲ್ಲಿ ಕೌಶಲ್ಯಯುತ ಮತ್ತು ಅಸಂಘಟಿತ ಕಾರ್ಮಿಕರೂ ಇದ್ದು, ವಿಶ್ವದ ಉದ್ದಗಲಕ್ಕೂ ನೆಲೆಸಿ ಉದ್ಯೋಗ ಮಾಡುತ್ತಿದ್ದಾರೆ. ಕೌಶಲ್ಯಯುತರು 4-5 ರಾಷ್ಟ್ರಗಳನ್ನು ತಿರುಗಿ ನಂತರ ಉತ್ತಮ ಪರಿಸರ ಹೊಂದಿರುವ ರಾಷ್ಟ್ರದಲ್ಲಿ ಬೇರೂರುವ ಪದ್ಧತಿ ಹೆಚ್ಚಾಗುತ್ತಿದೆ. ಹಾಗೆಯೇ ಒಮ್ಮೆ ತೆರಳಿದವರು ಮತ್ತೆ ಇಳಿ ವಯಸ್ಸಿನಲ್ಲಿ ಕೇರಳಕ್ಕೆ ಮರಳಿ ಬರುವ ಸಂಖ್ಯೆಯೂ ಕುಸಿಯುತ್ತಿರುವುದು ಆತಂಕ ಮೂಡಿಸಿದೆ ಎಂದಿದ್ದಾರೆ. ಕೇರಳ ಸರ್ಕಾರದ ವತಿಯಿಂದ ನೀಡಲಾಗುವ ಪ್ರವಾಸಿ ಐಡಿಗೆ ನೋಂದಾಯಿತರಾದವರಿಗೆ ವಾರ್ಷಿಕ 4 ಲಕ್ಷ ರು. ಮೊತ್ತದ ಅಪಘಾತ ವಿಮೆ ಸೌಲಭ್ಯವಿದೆ.
ಯುಎಇನಲ್ಲಿ ಅತೀ ಹೆಚ್ಚು ಜನ ಅಂದರೆ ಸುಮಾರು 1.90 ಲಕ್ಷ ಜನ ಕೇರಳದವರಿದ್ದರೆ, ಅತ್ಯಂತ ಕಡಿಮೆ ಇರುವುದು ಪ್ಯಾಲೆಸ್ತೀನ್ʻನಲ್ಲಿ. ಕೇವಲ 4 ಜನ. ಯುಎಇನಲ್ಲಿ 1.80 ಲಕ್ಷ, ಸೌದಿ ಅರೇಬಿಯಾದಲ್ಲಿ ಹೆಚ್ಚುಕಡಿಮೆ 1 ಲಕ್ಷ, ಕತಾರ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿದ್ಧಾರೆ.
ಇನ್ನು ರಷ್ಯಾದಲ್ಲಿ 200+ ಕೇರಳದವರಿದ್ದರೆ, ಉಕ್ರೇನಿನಲ್ಲಿಯೂ 1000ಕ್ಕೂ ಹೆಚ್ಚು ಮಲಯಾಳಿಗಳಿದ್ಧಾರೆ. ಕೇರಳದವರು ಇಲ್ಲದ ದೇಶಗಳೆಂದರೆ ಉತ್ತರ ಕೊರಿಯಾ, ಪಾಕಿಸ್ತಾನ ಮೊದಲಾದ ಕೆಲವೇ ದೇಶಗಳು ಮಾತ್ರ. ಇವರಲ್ಲಿ ಕೇವಲ ಶೇ.10ರಷ್ಟು ಜನರಷ್ಟೇ ದೇಶಕ್ಕೆ ವಾಪಸ್ ಬಂದು ಇಲ್ಲಿಯೇ ನೆಲೆಸುತ್ತಾರೆ. ಬಹುತೇಕರು ವಿದೇಶಗಳಲ್ಲಿಯೇ ಸೆಟ್ಲ್ ಆಗುತ್ತಾರೆ.



