ಮಾಲಾಶ್ರೀ ಅವರ ಮಗಳು ಆರಾಧನಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಯಾರು ಎಂಬುದಕ್ಕೆ ಉತ್ತರ ಎಲ್ಲರ ಕಡೆಯಿಂದ ಬರುವುದು ರಾಕ್ ಲೈನ್ ವೆಂಕಟೇಶ್ ಎಂದೇ. ಆದರೆ ಆರಾಧನಾ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಅವರಲ್ಲ ಎಂಬುದು ಈ ಸಮಯದ ಸ್ಪೆಷಲ್ಲು. ಆರಾಧನಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ರವಿಚಂದ್ರನ್ ಅವರಿಗೆ ಇದೆ.
ಸದ್ಯಕ್ಕೆ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುವ ನಿರೀಕ್ಷೆ ಹುಟ್ಟಿಸಿರುವ ನಟಿ ಆರಾಧನಾ. ಅವರೆಲ್ಲರೂ ಕಾಟೇರ ಚಿತ್ರವನ್ನು ನೋಡುವುದಕ್ಕೆ ಕಾಯುತ್ತಿದ್ದಾರೆ. ಟ್ರೇಲರ್ ಹಾಗೂ ಹಾಡುಗಳಲ್ಲಿ ಮಾಲಾಶ್ರೀ ಮಗಳು ಅನ್ನೋ ಖಡಕ್ʻತನವೇನೋ ಇದೆ. ಆದರೂ ಚಿತ್ರ ರಿಲೀಸ್ ಆಗಿ ಪ್ರೇಕ್ಷಕರು ಚಪ್ಪಾಳೆ ತಟ್ಟುವವರೆಗೂ ಆತಂಕ ಮುಗಿಯೋದಿಲ್ಲ. ದರ್ಶನ್ ಕುತ್ತಿಗೆಗೇ ಮಚ್ಚು ಹಿಡಿದು ಡೈಲಾಗ್ ಹೊಡೆದಿರೋ ಆರಾಧನಾ, ಮೊದಲ ಚಿತ್ರದಲ್ಲೇ ತಮ್ಮ ತಾಕತ್ತೇನು ಅನ್ನೋದನ್ನ ತೋರಿಸಿದ್ದಾರೆ. ಆದರೆ ಇಲ್ಲೊಂದು ವಿಶೇಷವಿದೆ. ಆರಾಧನಾ, ಮಾಲಾಶ್ರೀ ಮಗಳ ಮೊದಲ ಚಿತ್ರವಲ್ಲ. ಇದಕ್ಕೂ ಮೊದಲೇ ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಹೌದು, ನಾಯಕಿಯಾಗಿ ಫಸ್ಟ್ ಮೂವಿ ಇರಬಹುದು. ಆದರೆ ಕಾಟೇರ ಚಿತ್ರವೇ ಮೊದಲ ಚಿತ್ರವಲ್ಲ. ಏಕೆಂದರೆ ಆರಾಧನಾ ಅವರನ್ನು ತೆರೆಗೆ ಪರಿಚಯಿಸಿದ್ದು ವಿ.ರವಿಚಂದ್ರನ್.
ರವಿಚಂದ್ರನ್ ಹಾಗೂ ಪ್ರಿಯಾಂಕಾ ಉಪೇಂದ್ರ ಅಭಿನಯದ ಮಲ್ಲ ಚಿತ್ರವನ್ನು ನೋಡಿದ್ದೀರಲ್ಲ, ಅದರಲ್ಲಿ ಬಾಲನಟಿಯಾಗಿ ನಟಿಸಿದ್ದೇ ಆರಾಧನಾ ಅವರ ಮೊದಲ ಬೆಳ್ಳಿತೆರೆ ಪ್ರವೇಶ. ಹೀಗಾಗಿಯೇ ಆರ್ಜುನ್ ಗೌಡ ಚಿತ್ರದ ಕಾರ್ಯಕ್ರಮದಲ್ಲಿ ಆರಾಧನಾ ಅವರೊಂದಿಗೆ ಮಲ್ಲ 2 ಮಾಡೋಣ್ವಾ ಎಂದು ತಮಾಷೆ ಮಾಡಿದ್ದರಂತೆ ರವಿಚಂದ್ರನ್. ಅಷ್ಟೇ ಅಲ್ಲ, ಮಾಲಾಶ್ರೀ ಅಭಿನಯದ ಶಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿಯೂ ಆರಾಧನಾ ನಟಿಸಿದ್ದಾರೆ. ಆ ಚಿತ್ರಕ್ಕೆ ರಾಮು ಅವರೇ ಪ್ರೊಡ್ಯೂಸರ್. ರವಿಚಂದ್ರನ್ ಡೈರೆಕ್ಟರ್.
ಆದರೆ ಕಾಟೇರ ಚಿತ್ರದ ವಿಶೇಷತೆಯೇ ಬೇರೆ. ನಾಯಕಿಯಾಗಿ ಮೊದಲ ಸಿನಿಮಾ. ದರ್ಶನ್ ಎದುರು ನಾಯಕಿಯಾಗಿ ಎಂಟ್ರಿ ಕೊಡುತ್ತಿರುವುದು. ರಾಕ್ʻಲೈನ್ ಬ್ಯಾನರ್ʻನಲ್ಲಿ ತರುಣ್ ಸುಧೀರ್ ನಿರ್ದೇಶನದಲ್ಲಿ ನಟಿಸುತ್ತಿರುವ ಸಿನಿಮಾ. ನಾಳೆ ಕಾಟೇರ ಹಬ್ಬ ಶುರುವಾಗಲಿದೆ.
ಮಲ್ಲ ಚಿತ್ರದಲ್ಲಿ ನಟಿಸಿದ್ದು ಹೇಗೆ?
ಮಲ್ಲ ಚಿತ್ರದ ಶೂಟಿಂಗ್ ವೇಳೆ ದಿಢೀರನೆ ಮಾಲಾಶ್ರೀಗೆ ಕರೆ ಮಾಡಿದ ರವಿಚಂದ್ರನ್, ಮಗಳನ್ನು ಕರೆದು ತರುವಂತೆ ಹೇಳಿದ್ದಾರೆ. ಕರೆದುಕೊಂಡು ಹೋದ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದಾರೆ. ಅಂದಹಾಗೆ ವಿಶೇಷವೆಂದರೆ ಮಲ್ಲ ಚಿತ್ರಕ್ಕೆ ಮಾಲಾಶ್ರೀ ಅವರೇ ಪ್ರೊಡ್ಯೂಸರ್. ರಾಮು ನಿರ್ಮಾಣದ ಮಲ್ಲ ಸಿನಿಮಾ ಆಗಿನ ಕಾಲಕ್ಕೆ ಸೂಪರ್ ಹಿಟ್ ಎನಿಸಿಕೊಂಡಿದ್ದ ಸಿನಿಮಾ. ಆ ಮೂಲಕ ರಾಮು ಬ್ಯಾನರ್ ಮೂಲಕವೇ ಆರಾಧನಾ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ.



