ಭೋಜಶಾಲಾ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಮಸೀದಿ. ಭೋಜಶಾಲಾ ಮಸೀದಿಯನ್ನು ಕಮಲ್ ಮೌಲಾ ಮಸೀದಿ ಎಂದೂ ಕರೆಯುತ್ತಾರೆ. ಈ ಮಸೀದಿ ತಮಗೆ ಸೇರಿದ್ದು ಎಂದು ಹಿಂದೂ, ಮುಸಲ್ಮಾನರಿಬ್ಬರೂ ವಾದಿಸುತ್ತಾರೆ. ಹಿಂದೂಗಳು ಇಲ್ಲಿ ಮಧ್ಯಕಾಲೀನ ಕೆತ್ತನೆಯಿರುವ ವಾಗ್ದೇವಿ ದೇಗುಲವಿದೆ ಎಂದು ಪ್ರತಿ ಮಂಗಳವಾರ ಪೂಜೆ ಸಲ್ಲಿಸುತ್ತಾರೆ. ಮುಸಲ್ಮಾನರು ಈ ಜಾಗವನ್ನು ಕಮಲ್ ಮೌಲಾ ಮಸೀದಿ ಎಂದು ಕರೆದು, ಪ್ರತಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವ್ಯಾಜ್ಯ ಕೋರ್ಟ್‌ನ ಮೆಟ್ಟಿಲೇರಿದ್ದು, ಮೂಲತಃ ಈ ಕಟ್ಟಡ ಏನಾಗಿತ್ತು ಎಂಬುದನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸುವಂತೆ ಎಎಸ್‌ಐಗೆ ಮಧ್ಯಪ್ರದೇಶದ ಹೈಕೋರ್ಟ್ ಈ ವರ್ಷಾರಂಭದಲ್ಲಿ ಆದೇಶಿಸಿತ್ತು.
ಮಸೀದಿಯ ಪ್ರಾಂಗಣದಲ್ಲಿ ಹೈಕೋರ್ಟ್‌ನ ಆದೇಶದಂತೆ ಕೈಗೊಳ್ಳಲಾಗಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ)ದ ಉತ್ಖನನ ಮುಕ್ತಾಯಗೊಂಡಿದ್ದು, 39 ಭಗ್ನ ಹಿಂದೂ ವಿಗ್ರಹಗಳು ಲಭಿಸಿವೆ. ಒಟ್ಟು 1710 ಅವಶೇಷಗಳು ಪತ್ತೆಯಾಗಿವೆ.ವಾಗ್ದೇವಿ (ಸರಸ್ವತಿ), ಮಹಿಷಾಸುರ ಮರ್ದಿನಿ, ಗಣೇಶ, ಕೃಷ್ಣ, ಮಹಾದೇವ, ಬ್ರಹ್ಮ ಹಾಗೂ ಹನುಮಂತನ ವಿಗ್ರಹಗಳು ಸೇರಿದಂತೆ ಎಲ್ಲವೂ ಹಿಂದೂ ದೇವ ದೇವತೆಯರ ವಿಗ್ರಹಗಳು ಲಭ್ಯವಾಗಿವೆ.ಆದರೆ, ಮುಸ್ಲಿಂ ಪಕ್ಷಗಾರರು ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ‘ಇವು ಎಲ್ಲಿಂದ ಬಂದವು’ ಎಂದು ಪ್ರಶ್ನಿಸಿದ್ದಾರೆ.
ಎಎಸ್‌ಐ ಅಧಿಕಾರಿಗಳು 98 ದಿನಗಳ ಕಾಲ ಸಮೀಕ್ಷೆ ನಡೆಸಿ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ಜು.4ರೊಳಗೆ ವಿವರವನ್ನು ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ಬಳಿಕ ಇನ್ನಷ್ಟು ಆಳವಾಗಿ ಉತ್ಖನನ ನಡೆಸಲು ಅವಕಾಶ ಕೇಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಮಾರ್ಚ್ ತಿಂಗಳಲ್ಲಿ ಮಸೀದಿಯ ಉತ್ಖನನ ಕೈಗೆತ್ತಿಕೊಳ್ಳಲಾಗಿತ್ತು.
ಭೋಜಶಾಲಾ ದೇಗುಲದಲ್ಲಿ ಇತಿಹಾಸದ ಪ್ರಕಾರ ರಾಜ ಭೋಜ ಎಂಬ ದೊರೆ ವಾಗ್ದೇವಿಯ ವಿಗ್ರಹವನ್ನು ಕ್ರಿ.ಶ.1034ರಲ್ಲಿ ಪ್ರತಿಷ್ಠಾಪನೆ ಮಾಡಿದ್ದ. ಅದನ್ನು ಬ್ರಿಟಿಷರು 1875ರಲ್ಲಿ ಲಂಡನ್‌ಗೆ ಕೊಂಡೊಯ್ದಿದ್ದಾರೆ ಎನ್ನುವ ಕಥೆಯೂ ಇದೆ. ದಾಖಲೆಗಳೂ ಇವೆ.
ಈ ಬಗ್ಗೆ ಮತ್ತು ದೇಗುಲದ ಐತಿಹ್ಯ ಬಗ್ಗೆ ಮಾತನಾಡಿದ ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್ ಅವರು, ಧಾರ್ ಭೋಜಶಾಲಾ ಬಗ್ಗೆ ಐತಿಹಾಸಿಕ ಸತ್ಯವೆಂದರೆ ಅದು ಸರಸ್ವತಿ ದೇವಾಲಯವಾಗಿತ್ತು. ಅದನ್ನು ಇಸ್ಲಾಮಿಕ್ ಮಸೀದಿಯಾಗಿ ಪರಿವರ್ತಿಸಲಾಯಿತು. ಅಯೋಧ್ಯೆಯ ರಾಮಮಂದಿರ ಉತ್ಖನನವನ್ನು ನಡೆಸಿದ್ದ ಕೆ.ಕೆ.ಮುಹಮ್ಮದ್ ಪೂಜಾ ಸ್ಥಳಗಳ ಕಾಯಿದೆ 1991 ರ ಪ್ರಕಾರ, ಇದು 1947ರ ದೇವಾಲಯವಾಗಿದ್ದರೆ ದೇವಸ್ಥಾನ. ನಂತರ ಅದು ಮಸೀದಿಯಾಗಿದ್ದರೆ ಅದು ಮಸೀದಿಯಾಗಿರಲಿದೆ. ಎರಡೂ ಪಕ್ಷಗಳು ಕಾಯಿದೆಯನ್ನು ಒಪ್ಪಿಕೊಳ್ಳಬೇಕು. ಹೈಕೋರ್ಟ್ ಎಲ್ಲಾ ಸಂಗತಿಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಎಲ್ಲರೂ ಅದನ್ನು (ಎಚ್‌ಸಿ ನಿರ್ಧಾರ) ಅನುಸರಿಸಬೇಕು ಏಕೆಂದರೆ ಅದು ಒಂದೇ ಪರಿಹಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.



