ಅಪರ್ಣ ಅವರ ನಿಧನ ಅವರ ಕುಟುಂಬಕ್ಕೆ ನಿರೀಕ್ಷಿತವೇ ಇರಬಹುದು.. ಆದರೆ ಅವರಿಗೂ ಆಘಾತವೇ. ಪತಿ ನಾಗರಾಜ ವಸ್ತಾರೆ ಅವರು ಅಪರ್ಣಾ ಸಾವಿನ ನೋವು ತಾಳಲಾರದೇ ಕಣ್ಣೀರಿಟ್ಟಿದ್ದಾರೆ. ಕಣ್ಣೀರಿನ ಕಡಲಲ್ಲೇ ದಿಟ್ಟ ಕನ್ನಡತಿ ಅಪರ್ಣಾ ಅವರಿಗೆ ಭಾರವಾದ ವಿದಾಯ ಹೇಳಿದ್ದಾರೆ. ಅವರ ವಿದಾಯದ ನಡುವೆ ನೆನಪಾಗುತ್ತಿರುವುದು ಹಾಲು ಜೇನು ಸಿನಿಮಾ.
ಅವಳು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದಳು. ಪರೀಕ್ಷಿಸಿದ್ದ ವೈದ್ಯರೇ 6 ತಿಂಗಳು ಬದುಕಬಹುದು ಅಂತ ತಿಳಿಸಿದ್ದರು. ಆದ್ರೂ ಕಳೆದ ಒಂದೂವರೆ ವರ್ಷಗಳ ಕಾಲ ನಾವಿಬ್ಬರು ನಡೆಸಿದ ಸೆಣಸಾಟದಲ್ಲಿ ಸೋತಿದ್ದೇವೆ. ಅಪರ್ಣಾ ತನ್ನ ದೇಹಕ್ಕಂಟಿದ್ದ ವ್ಯಾಧಿಯೊಂದಿಗೂ ಬೇಸರವಾಗದಂತೆ ನಗುತ್ತಲೇ ಇದ್ದಳು ಎಂದೆಲ್ಲ ಹೇಳುವ ನಾಗರಾಜ್ ವಸ್ತಾರೆಯವರ ಕಣ್ಣೀರು ನೋಡಿದವರಿಗೆ ನೆನಪಾಗುವುದೇ ಡಾ.ರಾಜ್ ಅಭಿನಯದ ಹಾಲು ಜೇನು ಸಿನಿಮಾ.
ಹಾಲು ಜೇನು ಸಿನಿಮಾದಲ್ಲಿ..
ಚಿತ್ರದ ನಾಯಕ ರಂಗ (ಡಾ.ರಾಜ್) ರಂಗನ ಜೀವ ಕಮಲ (ಮಾಧವಿ). ಬಡತನದಲ್ಲೂ ನಗುನಗುತ್ತಾ ಖುಷಿಯಾಗಿರುವ ಗಂಡ ಹೆಂಡತಿ. ಅವರಿಗೆ ದಿಢೀರನೆ ಒಂದು ಶಾಕ್ ಆಗುತ್ತೆ. ಪ್ರಜ್ಞೆ ತಪ್ಪಿ ಬಿದ್ದ ಕಮಲಳನ್ನು ಪರೀಕ್ಷಿಸಿದ ಡಾಕ್ಟರ್ ಆಕೆಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಹೇಳುತ್ತಾರೆ. ಕಮಲಳನ್ನು ಬದುಕಿಸಿಕೊಳ್ಳಲು ವೈದ್ಯರನ್ನು ಬೆನ್ನು ಹತ್ತುವ ರಂಗ, ಹಣಕ್ಕಾಗಿ ಪಡಬಾರದ ಪಾಡು ಪಡುತ್ತಾನೆ. ತಾನಿನ್ನೂ ಬ್ರಹ್ಮಚಾರಿ ಎಂದು ಹೇಳಿಕೊಂಡು ದುಡ್ಡು ಮಾಡುತ್ತಾ ಹೋಗುತ್ತಾನೆ. ಹಾಗೆ ಪರದಾಡುತ್ತಿರುವಾಗ ಮೀನಾ (ರೂಪಾದೇವಿ)ಗೆ ರಂಗನ ಮೇಲೆ ಪ್ರೀತಿ ಹುಟ್ಟುತ್ತೆ. ಆಮೇಲೆ ರಂಗನಿಗೆ ಮದುವೆಯ ಪ್ರಪೋಸಲ್ ಇಡ್ತಾರೆ. ಇದೆಲ್ಲದರ ಮಧ್ಯೆ ಕಮಲಳಿಗೆ ತಾನು ಸಾಯುತ್ತಿದ್ದೇನೆ ಎನ್ನುವುದು ಗೊತ್ತಾಗುತ್ತೆ. ರಂಗನಿಗೆ ಜೋಡಿ ಹುಡುಕುವ ಕೆಲಸಕ್ಕೆ ಮುಂದಾಗುತ್ತಾಳೆ. ಹೀಗೆ ನಡೆಯುವ ಫ್ಯಾಮಿಲಿ ಡ್ರಾಮಾದಲ್ಲಿ ನಗುವಿಗೆ ಬರವಿಲ್ಲ. ಆದರೆ ನಗು ನಗುತ್ತಲೇ ಅಳಿಸುವ ಕಥೆ ಮತ್ತು ಅಭಿನಯ ಡಾ.ರಾಜ್ ಮತ್ತು ಮಾಧವಿ ಅವರದ್ದು.
ಅಪರ್ಣ ಅವರ ಸಾವಿನ ಕಥೆಯೂ ಅಂತದ್ದೇ. ನಿರೂಪಕಿ ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್ ಜೊತೆ ಒಂದೂವರೆ ವರ್ಷಗಳ ಕಾಲ ಕಾದಾಡಿದ್ದರು. ಒಂದೂವರೆ ವರ್ಷ ಕಾಲ ಯಾರಂದ್ರೆ ಯಾರಿಗೂ ಸಹ ತನ್ನನ್ನು ಕಾಡುತ್ತಿದ್ದ ವ್ಯಾಧಿಯ ಗುಟ್ಟನ್ನು ರಟ್ಟು ಮಾಡಿರ್ಲಿಲ್ಲ. ಆಗ ಆಕೆಯನ್ನು ಮಗುವಿನಂತೆ ಆರೈಕೆ ಮಾಡಿದ್ದವರು ನಾಗರಾಜ್ ವಸ್ತಾರೆ. ಅದು ಗೊತ್ತಾಗಿದ್ದೇ ಲುಕೇಮಿಯಾ ಅಂದ್ರೆ ಕ್ಯಾನ್ಸರ್ʻನ 4ನೇ ಸ್ಟೇಜ್‌ನಲ್ಲಿದ್ಧಾಗ. ಮೊದಲೇ ಗೊತ್ತಾಗಿದ್ದರೆ ಇನ್ನಷ್ಟು ವರ್ಷ ಆಕೆಯನ್ನು ಕಾಪಾಡಿಕೊಳ್ಳುತ್ತಿದ್ದೆ ಎನ್ನುವ ನಾಗರಾಜ್ ವಸ್ತಾರೆ ಇನ್ನಷ್ಟು ಚೆಂದದ ಬದುಕು ಬದುಕುತ್ತಿದ್ದರು.
ಅವರಿಬ್ಬರ ಪ್ರೀತಿ ಮತ್ತು ಬದುಕನ್ನು ನೋಡಿದವರು ಹಾಲು ಜೇನಿನ ರಂಗ ಕಮಲಳ ಪ್ರೀತಿಯನ್ನೇ ನೆನಪಿಸಿಕೊಳ್ತಾರೆ. ಹಾಡು ಕಿವಿಯಲ್ಲಿ ಗುಂಯ್‌ಗುಡುತ್ತಿರುತ್ತೆ.
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
ನೀ ನಗುತಲಿ ಸುಖವಾಗಿರೆ, ಆನಂದದ ಹೊನಲಾಗಿರೆ, ಬಾಳೆ ಸವಿಗಾನ
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
ಬಿಸಿಲಾಗಲಿ ಮಳೆಯಾಗಲಿ ನೆರಳಾಗಿ ನಾನು ಬರುವೆನು ಜೊತೆಗೆ
ಸವಿಮಾತಲಿ ಸುಖ ನೀಡುವೆ ಎಂದೆಂದಿಗೂ ಹೀಗೆ
ಹೂವಾಗಲಿ ಈ ಮೊಗವರಳಿ ಸಂತೋಷದ ಪರಿಮಳ ಚೆಲ್ಲಿ
ಹಾಯಾಗಿರು
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
ಈ ತಾವರೆ ಮೊಗವೇತಕೆ ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
ಇಂದೇತಕೆ ಈ ಮೌನವು ಹೀಗೇಕೆ ನೀನಿರುವೆ
ನೀನೇತಕೆ ಬಾಳುವೆ ಕೊರಗಿ ನಾನಿಲ್ಲವೆ ಆಸರೆಯಾಗಿ
ಹಾಯಾಗಿರು
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ
ನೀ ನಗುತಲಿ ಸುಖವಾಗಿರೆ, ಆನಂದದ ಹೊನಲಾಗಿರೆ, ಬಾಳೆ ಸವಿಗಾನ
ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ



