ಯಾವ್ಯಾವುದಕ್ಕೋ ಗಂಡ, ಮಕ್ಕಳನ್ನು ತೊರೆಯುವ ಹೆಂಡತಿಯರಿದ್ದಾರೆ. ಆದರೆ ಆನ್ ಲೈನ್ ಗೇಮ್ (Ludo Online Game) ವಿಷಯಕ್ಕೆ ಇಲ್ಲೊಬ್ಬಳು ಪತ್ನಿ, ಗಂಡನನ್ನೇ ತೊರೆದು ಹೋಗಿದ್ದಾರೆ. ಆನ್ಲೈನ್ ಜೂಜಿನಲ್ಲಿ (Online Gamilng) ಲಕ್ಷಾಂತರ ರೂಪಾಯಿ ಕಳೆದುಕೊಂಡ ಗೃಹಿಣಿಯೊಬ್ಬರು ಗಂಡನಿಗೆ ಪಶ್ಚಾತ್ತಾಪದ ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾರೆ. ಹಾಗಂತ ಬರಿಗೈಲಿ ಅಲ್ಲ, ಒಂದಿಷ್ಟು ದುಡ್ಡು ಹಾಗೂ ಮಕ್ಕಳ ಜೊತೆಯಲ್ಲಿಯೇ ಹೋಗಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್`ನಲ್ಲಿ (Mahalakshmi Layout) ನಡೆದಿರುವ ಈ ಪ್ರಕರಣ ಪೊಲೀಸರಿಗೂ ಟೆನ್ಷನ್ ಕೊಟ್ಟಿದೆ. ಘಟನೆ ನಡೆದು ಒಂದು ವಾರವಾಗಿದೆ.
ನಾಪತ್ತೆಯಾಗಿರುವ ಗೃಹಿಣಿಯ ಹೆಸರು ನಂದನಾ. 26 ವರ್ಷ. ಮಗಳು ಸನ್ನಿಧಿಗೆ 6 ವರ್ಷವಾದರೆ, ಮಗ ಚಾರ್ವಿಕ್`ಗೆ ಕೇವಲ 1 ವರ್ಷ. ಪತಿ ಅವಿನಾಶ್, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಒಬ್ಬರೇ ಇರುತ್ತಿದ್ದ ನಂದನಾ, ಒಂದು ವರ್ಷದ ಹಿಂದೆ ಮೊಬೈಲ್ನಲ್ಲಿ’ಲುಡೋ’ ಗೇಮ್ (Ludo Online Game) ಆಡುವ ಅಭ್ಯಾಸ ಮಾಡಿಕೊಂಡಿದ್ದರು. ಕ್ರಮೇಣ ಅದು ಗೀಳಾಗಿ ಪರಿಣಮಿಸಿ ಹಣ ಕಟ್ಟಿ ಆಡುವುದನ್ನು ಆರಂಭಿಸಿದ್ದರು. ಇದರ ಫಲವಾಗಿ ಮನೆಯಲ್ಲಿಟ್ಟಿದ್ದ 50 ಸಾವಿರ ರೂಪಾಯಿ ನಗದು ಕಳೆದುಕೊಂಡಿದ್ದರು. ಸಾಲದೆಂಬಂತೆ ಮನೆಯಲ್ಲಿದ್ದ ಚಿನ್ನಾಭರಣವನ್ನೂ ಅಡವಿಟ್ಟು ಹಣ ಪಡೆದು ಜೂಜಿನ ಪಣ ಕಟ್ಟಿ 1.20 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಇದಾದ ಬಳಿಕ ಸಂಬಂಧಿಕರಿಂದ ಸಾಲವಾಗಿ ಪಡೆದಿದ್ದ 1.75 ಲಕ್ಷ ರೂಪಾಯಿ ಸೇರಿದಂಚೆ ಒಟ್ಟು 3.45 ಲಕ್ಷ ರೂಪಾಯಿ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿಹೋಗಿದ್ದರು. ಇಷ್ಟೆಲ್ಲಾ ಆದರೂ ಪತಿಗೆ ತಿಳಿದಿರಲಿಲ್ಲ.
ತಿಂಗಳ ಹಿಂದಷ್ಟೇ ಪತಿ ಅವಿನಾಶ್`ಗೆ ಪತ್ನಿ ನಂದನಾಳ ಆನ್`ಲೈನ್ ಜೂಜಿನ ಗೀಳು ಗೊತ್ತಾಗಿತ್ತು. ಅಷ್ಟು ಹೊತ್ತಿಗೆ ಲಕ್ಷಾಂತರ ರೂಪಾಯಿಯೂ ಹೋಗಿತ್ತು. ಹೆಂಡತಿಗೆ ಬುದ್ದಿ ಹೇಳಿದ್ದ ಅವಿನಾಶ್, ಜೂಜಿನ ಚಟ (Ludo Online Game) ಬಿಡುವಂತೆ ಹೆಂಡತಿಗೆ ಸಮಾಧಾನ ಮಾಡಿದ್ದ. ಹೆಂಡತಿ ನಂದನಾ ಕೂಡಾ ಕಣ್ಣೀರು ಹಾಕಿ ಮುಂದೆ ತಪ್ಪು ಮಾಡುವುದಿಲ್ಲಎಂದು ಮಾತು ಕೊಟ್ಟಿದ್ದರು. ಈ ನಡುವೆ ಪುನಃ ನಂದನಾ ಮನೆಯಲ್ಲಿದ್ದ ಚಿನ್ನಾಭರಣ ಒತ್ತೆಯಿಟ್ಟು 1.20 ಲಕ್ಷ ರೂಪಾಯಿ ಜೂಜಿನಲ್ಲಿ ಕಳೆದಿದ್ದ ವಿಚಾರ ಜುಲೈ 19ರಂದು ಪತಿಗೆ ಗೊತ್ತಾಗಿತ್ತು. ಇದರಿಂದ ನಿಜಕ್ಕೂ ಸಿಟ್ಟಾಗಿದ್ದ ಅವಿನಾಶ್, ನಂದನಾ ಪೋಷಕರಿಗೆ ಹೇಳಿದ್ದ. ಅವರಿಂದಲೂ ಆನ್ಲೈನ್ ಜೂಜಿನ ಚಟ (Ludo Online Game) ಬಿಡುವಂತೆ ಬುದ್ದಿಮಾತು ಹೇಳಿಸಿದ್ದರು.
ಆಗಸ್ಟ್ 8ರಂದು ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆತಂದು ಮನೆಗೆ ಬಿಟ್ಟು ಮಾಧುರಿಯ ಪತಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು 4.45ರ ಸುಮಾರಿಗೆ ವಾಪಸ್ ಬಂದಾಗ ಪತ್ನಿ ಹಾಗೂ ಮಕ್ಕಳು ಇರಲಿಲ್ಲ. ಬದಲಿಗೆ ಟೇಬಲ್ ಮೇಲೆ ಮಾಧುರಿ ಬರೆದಿಟ್ಟಿದ್ದ ಪತ್ರ ಸಿಕ್ಕಿತ್ತು.
ದಯವಿಟ್ಟು ನನ್ನ ಕ್ಷಮಿಸಿ, ನನ್ನಿಂದೆಲ್ಲಾ ಲಾಸ್ ಆಗಿದೆ. ಮನೆಯಲ್ಲಿದ್ದ ದುಡ್ಡು ತೆಗೆದುಕೊಂಡು ಹೋಗ್ತಿದೀನಿ ಎಂದು ಬರೆಯಲಾಗಿತ್ತು. ಇದರಿಂದ ಆಘಾತಕ್ಕೆ ಒಳಗಾಗಿ ಪತ್ನಿಗೆ ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಅದೇ ದಿನ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.



