ಇತ್ತೀಚೆಗೆ ನೀವು ಗಮನಿಸಿರಬಹುದು. ಇದ್ದಕ್ಕಿದ್ದಂತೆ ಲಾಟರಿ (Lottery) ಗೆದ್ದವರ ಸ್ಪೆಷಲ್ ಸ್ಟೋರಿಗಳು ಬರುವುದಕ್ಕೆ ಶುರುವಾಗಿವೆ. ಒಂದೊಂದು ಕಥೆಯೂ ವಿಭಿನ್ನ, ವಿಶೇಷ. ನೀವೇ ನೋಡಿ..
ಮೊದಲ ಲಾಟರಿ (Lottery) ಟಿಕೆಟ್`ನಲ್ಲೇ 25 ವರ್ಷದ ಆದಾಯ ಫಿಕ್ಸ್ :
ದುಬೈನಲ್ಲಿ (Dubai) ಯುಎಇನಲ್ಲಿ (UAE) ವಾಸಿಸುತ್ತಿರುವ ಭಾರತೀಯ ಮೂಲದ ವಲಸಿಗ ಮೊಹಮ್ಮದ್ ಆದಿಲ್ ಖಾನ್ ಲಾಟರಿಯಲ್ಲಿ ಬಂಪರ್ ಬಹುಮಾನ ಗೆದ್ದಿದ್ದಾರೆ. ಅವರಿಗೆ ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು 25,000 ಅರಬ್ ಎಮಿರೇಟ್ಸ್ ದಿರ್ಹಮ್ (Dirham) (ಅಂದಾಜು 5.5 ಲಕ್ಷ ರೂ.) ಸಿಗಲಿದೆ. ಮೊಹಮ್ಮದ್ ಆದಿಲ್ ಖಾನ್ ಮೂಲತಃ ಲಕ್ನೋದ ವಾಸ್ತುಶಿಲ್ಪಿ. ಹಾಗಂತ ಲಾಟರಿ (Lottery) ಹುಚ್ಚರೇನಲ್ಲ. ಏನೋ.. ಸೋಷಿಯಲ್ ಮೀಡಿಯಾದಲ್ಲಿ ಕಂಡು.. ನೋಡೋಣ ಅಂತಾ ಖರೀದಿ ಮಾಡಿದ ಮೊದಲ ಟಿಕೆಟ್`ನಿಂದಾಗಿ ತಿಂಗಳಿಗೆ ಐದೂವರೆ ಲಕ್ಷ ಕುಳಿತ ಕಡೆ ಬರುವಂತ ಬಹುಮಾನ ಸಿಕ್ಕಿದೆ.
ಬರೋಬ್ಬರಿ 10 ಕೋಟಿ ರೂ. ಲಾಟರಿ (Lottery) ಗೆದ್ದ 11 ಮಹಿಳಾ ಪೌರಕಾರ್ಮಿಕರು!
ಕೇರಳ ಸರ್ಕಾರದ ಮುಂಗಾರು ಬಂಪರ್ ಲಾಟರಿಯಲ್ಲಿ (Lottery) ಮಹಿಳೆಯರಿಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ಕೇರಳದ ಪರಪ್ಪನಂಗಡಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ 11 ಮಹಿಳೆಯರು ಹಣ ಒಟ್ಟುಗೂಡಿಸಿ 250 ರೂ. ಮೌಲ್ಯದ ಲಾಟರಿ ಟಿಕೆಟ್ ಖರೀದಿಸಿತ್ತು. ಈ ಲಾಟರಿ ಟಿಕೆಟ್ಗೆ ಈಗ ಬಂಪರ್ ಬಹುಮಾನ ಒಲಿದಿದೆ.
ದುಬೈನಲ್ಲಿ ಲಾಟರಿ (Lottery) ಗೆದ್ದ ಸಚಿನ್ : ಯುಎಇನಲ್ಲಿರುವ ಮುಂಬೈ ಮೂಲದ ಸಚಿನ್ ಲಾಟರಿಯಲ್ಲಿ (Lottery) ಭರ್ಜರಿ 45 ಕೋಟಿ ರು. ಬಹುಮಾನ ಗೆದ್ದಿದ್ದಾರೆ. 25 ವರ್ಷದಿಂದ ದುಬೈನಲ್ಲಿ ನೆಲೆಸಿರುವ ಸಚಿನ್ ಸಿಎಡಿ ತಂತ್ರಜ್ಞರಾಗಿದ್ದು ಶನಿವಾರ 139ನೇ ಮಾಜೂಜ್ ಡ್ರಾ ಬಹುಮಾನ ಗೆದ್ದಿದ್ದಾರೆ. ‘ಪ್ರತಿ ವಾರ ಮಜೂಜ್ನಲ್ಲಿ ಭಾಗವಹಿಸುತ್ತಿದ್ದೆ. ಒಂದು ದಿನ ಗೆಲುವಿನ ನಿರೀಕ್ಷೆ ಇತ್ತು. ಈ ಗೆಲುವು ನನ್ನ ಕುಟುಂಬ ಮತ್ತು ಜೀವನವನ್ನು ಬದಲಾಯಿಸುತ್ತದೆ’ ಎಂದು ಸಚಿನ್ ಹೇಳಿದ್ದಾರೆ. ಈ ನಡುವೆ ಇನ್ನೊಬ್ಬ ಭಾರತೀಯ ಗೌತಮ್ (27) ಎಂಬುವವರು ಇದೇ ಸ್ಪರ್ಧೆಯಲ್ಲಿ 2.25 ಕೋಟಿ ರು. ಬಹುಮಾನ ಗೆದ್ದಿದ್ದಾರೆ.
ಈ ಕಥೆಗಳನ್ನೆಲ್ಲ ನೋಡಿದರೆ ನಾವೂ ಒಂದು ಲಾಟರಿ (Lottery) ತಗೋಬೇಕು ಅನ್ಸುತ್ತೆ ಅಲ್ವಾ..? ನೋಡೇ ಬಿಡೋಣ ಅದೃಷ್ಟ ಹೇಗಿರುತ್ತೋ ಏನೋ.. ಹಣೆಬರಹಕ್ಕೆ ಹೊಣೆ ಯಾರು. ಬಂದರೆ ಬಂಪರ್ ಎಂದುಕೊಳ್ಳೋವ್ರಿಗೆ ಕಡಿಮೆ ಏನೂ ಇಲ್ಲ. ಆದರೆ ಇಂತಹ ಸ್ಟೋರಿಗಳು ದಿಢೀರ್ ಆಗುವುದರ ಹಿಂದೆ ಬೇರೆಯದೇ ಕಥೆ ಇರುವಂತೆ ಇದೆ.
ಏಕೆಂದರೆ ನೀವೇ ನೋಡಿ, ಒಂದಷ್ಟು ತಿಂಗಳು ಲಾಟರಿ ಗೆದ್ದವರ ಕಥೆಯೇ ಇರೋದಿಲ್ಲ. ಸುದ್ದಿಯೂ ಆಗೋದಿಲ್ಲ. ಹಾಗಂತ ಲಾಟರಿ ನಿಂತು ಹೋಗಿದ್ದವಾ ಎಂದರೆ ಹಾಗೂ ಇರಲ್ಲ. ಲಾಟರಿ ಬಿಸಿನೆಸ್ ನಡೆಯುತ್ತಲೇ ಇರುತ್ತೆ. ಬಹುಮಾನವೂ ಹೋಗ್ತಾ ಇರುತ್ತೆ. ಆದರೆ, ಇಂತಹ ಸುದ್ದಿಗಳು, ಘಟನೆಗಳು ಇದ್ದಕ್ಕಿದ್ದಂತೆ ಸುದ್ದಿಯಾಗುತ್ವೆ. ಏಕೆ ಎಂದರೆ, ಅದು ಪಿಆರ್ ತಂತ್ರ ಎಂಬ ಉತ್ತರ ಸಿಗುತ್ತೆ. ಇಂತಹ ಸ್ಪೆಷಲ್ ಸುದ್ದಿಗಳು ಆಗಾಗ್ಗೆ ಬರುತ್ತಲೇ ಇರಬೇಕು. ಇಲ್ಲದೇ ಹೋದರೆ, ಜನ ಅದೃಷ್ಟದಾಟದ ಮೇಲೆ ಇಂಟ್ರೆಸ್ಟ್ ಕಳೆದುಕೊಳ್ತಾರೆ. ಆದರೆ, ಅವು ರೆಗ್ಯುಲರ್ ಸುದ್ದಿಯೂ ಆಗಬಾರದು.
ಹೀಗಾಗಿಯೇ ಮೂರು ತಿಂಗಳಿಗೋ.. ಎರಡು ತಿಂಗಳಿಗೋ.. ಒಮ್ಮೆ ಇಂತಹ ಮೂರ್ನಾಲ್ಕು ಸುದ್ದಿಗಳನ್ನು ಮಾಡಿಸುವುದು ಸ್ವತಃ ಲಾಟರಿ ಕಂಪೆನಿಗಳೇ. ಹಾಗಾದರೆ ಕೇರಳದ ಲಾಟರಿ.. ದುಬೈ ಲಾಟರಿ.. ಇವೆಲ್ಲ ಕಥೆ ಏನು.. ಅಂತೀರಾ.. ಅದು ನಿಜಕ್ಕೂ ಅರ್ಥವಾಗದ ವಿಷಯ.
ಆದರೆ ಒಂದಂತೂ ಸತ್ಯ. ಒಂದು ಲಾಟರಿ ಕಂಪೆನಿಯವರು ಆ ರೀತಿ ಸುದ್ದಿ ಮಾಡಿದಾಗ, ಪ್ರತಿಸ್ಪರ್ಧಿ ಲಾಟರಿ ಕಂಪೆನಿಯವರೂ ಸುದ್ದಿ ಮಾಡಿಸಬೇಕಲ್ಲ.. ಹೀಗಾಗಿಯೇ ಅವರೂ ಲಾಟರಿ ಗೆದ್ದ ಕಥೆಗಳಿಗೆ ಇಂಟ್ರೆಸ್ಟಿಂಗ್ ಆಂಗಲ್ ಕೊಟ್ಟು ಸುದ್ದಿ ಮಾಡಿಸ್ತಾರೆ.



