ಚುನಾವಣೆಯ ಒಟ್ಟಾರೆ ಲಾಭ ನಷ್ಟ ಏನಿರುತ್ತದೆಯೋ ಹೇಳೋದು ಕಷ್ಟ. ಆದರೆ.. ಈ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಅಧಿಕೃತ ಆಸ್ತಿ ಎಷ್ಟು ಕೋಟಿ ಇದೆ ಎನ್ನುವುದು ಗೊತ್ತಾಗುತ್ತದೆ. ಅಷ್ಟೆ. ಈ ಬಾರಿಯೂ ಅಷ್ಟೆ, ಮೊದಲ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿ. 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 443 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ 28 ಘಟಾನುಘಟಿಗಳು ಸೇರಿದಂತೆ ಇತರೆ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಕಲಿಗಳೂ ಇದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಆಸ್ತಿ ಘೋಷಿಸಿಕೊಂಡಿದ್ದು, ಹೆಚ್ಚಿನವರು ಕೋಟಿ ವೀರರೇ! ಪ್ರಮಾಣಪತ್ರದಲ್ಲಿ ಸಲ್ಲಿಸಿರುವಂತೆ ಲೋಕಸಭೆ ಅಖಾಡದಲ್ಲಿರುವ ಅಗ್ರ 10 ಮಂದಿ ಕೋಟ್ಯಧಿಪತಿಗಳ ವಿವರ ಇಲ್ಲಿದೆ.
ಟಾಪ್ 10 ಕೋಟ್ಯಧಿಪತಿ :
ಶ್ರೇಯಸ್ ಪಟೇಲ್, ಹಾಸನ ಕಾಂಗ್ರೆಸ್ ಅಭ್ಯರ್ಥಿ
ಶ್ರೇಯಸ್ ಪಟೇಲ್ ಬಳಿ ಒಟ್ಟು 41 ಕೋಟಿ ರೂಪಾಯಿ ಆಸ್ತಿ ಇದೆ. 20 ಎಕರೆ ಕೃಷಿ ಭೂಮಿ ಹೊಂದಿದ್ದಾರೆ.
ಟಾಪ್ 09 ಕೋಟ್ಯಧಿಪತಿ :
ವಿ. ಸೋಮಣ್ಣ, ತುಮಕೂರು ಬಿಜೆಪಿ ಅಭ್ಯರ್ಥಿ
ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 60 ಕೋಟಿ ಆಸ್ತಿ ಒಡೆಯ. ಇವರ ಪತ್ನಿ ಆಸ್ತಿಯೇ ಒಟ್ಟು 43.83 ಕೋಟಿ. ಕೃಷಿಮೂಲದಿಂದ 65 ಲಕ್ಷ ಆದಾಯ ತೋರಿಸಿರುವ ಸೋಮಣ್ಣ, 98 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಹೊಂದಿದ್ದಾರೆ.
ಟಾಪ್ 08 ಕೋಟ್ಯಧಿಪತಿ :
ಪಿಸಿ ಮೋಹನ್, ಬೆಂಗಳೂರು ಕೇಂದ್ರ ಅಭ್ಯರ್ಥಿ
ಟಾಪ್ 8ನೇ ಕೋಟ್ಯಧಿಪತಿ ಅಂದರೆ ಪಿ.ಸಿ.ಮೋಹನ್. ಪತ್ನಿ ಆಸ್ತಿಯೂ ಸೇರಿ ಇವರ ಒಟ್ಟು ಆಸ್ತಿ 81 ಕೋಟಿ ರೂಪಾಯಿ ಇದೆ. ಇದ್ರಲ್ಲಿ ಪತ್ನಿ ಶೈಲಾ ಅವರ ಆಸ್ತಿಯೇ 22 ಕೋಟಿ ರೂಪಾಯಿ ಇದೆ.
ಟಾಪ್ 07 ಕೋಟ್ಯಧಿಪತಿ :
ಡಾ. ಮಂಜುನಾಥ್, ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಟಾಪ್ 7 ಕೋಟ್ಯಧಿಪತಿಯಾಗಿದ್ದಾರೆ. ಇವರು ಮತ್ತು ಇವರ ಪತ್ನಿ ಹೆಸರಲ್ಲಿ ಒಟ್ಟು 96.29 ಕೋಟಿ ರೂಪಾಯಿ ಆಸ್ತಿಯಿದೆ. ಪತ್ನಿಯೇ ಶ್ರೀಮಂತರಾಗಿದ್ದು 52 ಕೋಟಿ ಆಸ್ತಿ ಒಡತಿಯಾಗಿದ್ದಾರೆ. ಡಾ. ಮಂಜುನಾಥ್ ಅವರ ಹೆಸ್ರಲ್ಲಿ ಯಾವುದೇ ಚಿನ್ನಾಭರಣ, ಮನೆ ಇಲ್ಲ.
ಟಾಪ್ 06 ಕೋಟ್ಯಧಿಪತಿ :
ಮನ್ಸೂರ್ ಅಲಿಖಾನ್, ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ನಂಬರ್ 6 ಕೋಟ್ಯಧಿಪತಿಯಾಗಿದ್ದು, ಇವರ ಒಟ್ಟು ಆಸ್ತಿ ಮೌಲ್ಯ 96 ಕೋಟಿ 90 ಲಕ್ಷ ರೂಪಾಯಿ. 14.86 ಕೋಟಿ ಚರಾಸ್ತಿ ಮತ್ತು 61.06ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವ್ರ ಬಳಿ 98 ಲಕ್ಷ ರೂಪಾಯಿ ಮೌಲ್ಯದ ಆಡಿ ಎಸ್ 5 ಸ್ಪೋರ್ಟ್ಸ್ ಕಾರು ಇದೆ. ದುಬೈನಲ್ಲಿ ಫ್ಲ್ಯಾಟ್ ಹೊಂದಿದ್ದಾರೆ.
ಟಾಪ್ 05 ಕೋಟ್ಯಧಿಪತಿ :
ರಾಜೀವ್ ಗೌಡ, ಬೆಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ
ವಿಧಾನಸಭೆಯ ಮಾಜಿ ಸ್ಪೀಕರ್ ದಿವಂಗತ ವೆಂಕಟಪ್ಪ ಅವರ ಪುತ್ರರಾದ ರಾಜೀವ್ ಗೌಡ ಒಟ್ಟು 134 ಕೋಟಿ ಆಸ್ತಿ ಒಡೆಯರಾಗಿದ್ದಾರೆ. ಚರಾಸ್ತಿ 7.84 ಕೋಟಿ ರೂಪಾಯಿ ಇದ್ರೆ, 92.75 ಕೋಟಿ ರೂಪಾಯಿ ಸ್ಥಿರಾಸ್ತಿ ಮೌಲ್ಯವಿದೆ.
ಟಾಪ್ 04 ಕೋಟ್ಯಧಿಪತಿ :
ಹೆಚ್ಡಿ ಕುಮಾರಸ್ವಾಮಿ, ಮಂಡ್ಯ ಜೆಡಿಎಸ್ ಅಭ್ಯರ್ಥಿ
ಇಲ್ಲಿಗೆ ಮೊದಲ ಬಾರಿಗೆ ಮಾಜಿ ಸಿಎಂ ಹೆಸರು ಪ್ರಸ್ತಾಪವಾಗುತ್ತದೆ. ಟಾಪ್ 4 ಕೋಟ್ಯಧಿಪತಿ ಅಂದರೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ. 217 ಕೋಟಿ ಆಸ್ತಿ ಒಡೆಯ. ಒಟ್ಟು 102 ಕೋಟಿ ಚರಾಸ್ತಿ 114 ಕೋಟಿ ಸ್ಥಿರಾಸ್ತಿ ಇದ್ದು, ಕಳೆದ ಒಂದು ವರ್ಷದಲ್ಲಿ 50 ಕೋಟಿ ಆಸ್ತಿ ಜಾಸ್ತಿಯಾಗಿದೆ. 19 ಕೋಟಿ ರೂ ಸಾಲವಿದ್ದು, 750 ಗ್ರಾಮ್ ಚಿನ್ನಾಭರಣ, 12.5 ಕೆಜಿ ಬೆಳ್ಳಿ ಆಭರಣ ಹೊಂದಿದ್ದಾರೆ.
ಟಾಪ್ 03 ಕೋಟ್ಯಧಿಪತಿ :
ರಕ್ಷಾ ರಾಮಯ್ಯ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ
ಲೋಕಸಭೆ ಕಣದಲ್ಲಿರೋ ಟಾಪ್ 3 ಶ್ರೀಮಂತ ಅಭ್ಯರ್ಥಿ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ. ಇವರ ಒಟ್ಟು ಆಸ್ತಿ ಮೌಲ್ಯ 382 ಕೋಟಿ ರೂಪಾಯಿ. 2.70 ಕೋಟಿ ಮೌಲ್ಯದ 4 ಕಾರುಗಳಿವೆ. ದಂಪತಿ ಬಳಿ 1 ಕೆಜಿಗೂ ಹೆಚ್ಚು ಚಿನ್ನಾಭರಣವಿದೆ.
ಟಾಪ್ 02 ಕೋಟ್ಯಧಿಪತಿ :
ಸ್ಟಾರ್ ಚಂದ್ರು, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ
ಕುಮಾರಸ್ವಾಮಿ ಟಾಪ್ 4 ಶ್ರೀಮಂತ ಅಭ್ಯರ್ಥಿಯಾಗಿದ್ದರೆ, ಅವರಿಗೆ ಎದುರಾಳಿಯಾಗಿರುವ ಸ್ಟಾರ್ ಚಂದ್ರು ನಂ.2. ವೆಂಕಟರಮೇಗೌಡ ಅಲಿಯಾಸ್ ಸ್ಟಾರ್ ಚಂದ್ರು. ಇವರು ಒಟ್ಟು 410 ಕೋಟಿ ಆಸ್ತಿ ಒಡೆಯರಾಗಿದ್ದು, 136 ಕೋಟಿ ರೂಪಾಯಿ ಚರಾಸ್ತಿ ಇದೆ. 236 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಹೆಸರಿನಲ್ಲಿ 3 ಟ್ರ್ಯಾಕ್ಟರ್‌ಗಳಿವೆ. ಆದರೆ ಅಚ್ಚರಿ ಅಂದರೆ ಇವ್ರ ಹೆಸರಲ್ಲಿ ಸ್ವಂತ ಕಾರು ಇಲ್ಲ.
ನಂಬರ್ 01 ಕೋಟ್ಯಧಿಪತಿ :
ಡಿಕೆ ಸುರೇಶ್, ಬೆಂಗಳೂರು ಗ್ರಾಮಾಂತರ ಕ್ಷೇತ್ರ
ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿಕೆ ಸುರೇಶ್ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 593.04 ಕೋಟಿ ರೂಪಾಯಿ ಆಗಿದೆ. ಕಳೆದ 5 ವರ್ಷಗಳಲ್ಲಿ 259 ಕೋಟಿ ಆಸ್ತಿ ಹೆಚ್ಚಳವಾಗಿದೆ. 150 ಕೋಟಿ ಸಾಲ ಹೊಂದಿರುವ ಅವರು, ಒಂದೂಕಾಲು ಕೆಜಿ ಚಿನ್ನ, 4 ಕೆಜಿ 860 ಗ್ರಾಮ್ ಬೆಳ್ಳಿ ಹೊಂದಿದ್ದಾರೆ.
ಇವರ ಎದುರಾಳಿಯಾಗಿರುವ ಡಾ.ಮಂಜುನಾಥ್ ಕೂಡಾ ಟಾಪ್ 10 ಶ್ರೀಮಂತರಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇದೆಲ್ಲ ಲೆಕ್ಕ ಮೊದಲ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯ ಅಭ್ಯರ್ಥಿಗಳ ವಿವರ ಮಾತ್ರ.



