ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇನ್ನೊಂದೇ ವಾರ ಬಾಕಿ. ಜನವರಿ 16ರಿಂದ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಳ್ಳುತ್ತಿದೆ. ಅಲ್ಲಿ ಪ್ರತಿಷ್ಠಾಪನೆಯಾಗಲಿರುವುದು ಕನ್ನಡದ ಮೈಸೂರಿಯ ಯೋಗಿರಾಜ್ ಅವರ ಕಲ್ಪನೆಯಲ್ಲಿ ಅರಳಿದ ರಾಮಲಲ್ಲಾ. ಇಂತಹ ರಾಮ ಮಂದಿರ ಉದ್ಘಾಟನೆ ರಾಜಕೀಯವಾಗಿ ವಿವಾದವನ್ನೂ ಎದುರಿಸುತ್ತಿದೆ. ರಾಮ ಮಂದಿರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಅನ್ನೋದು ವಿಪಕ್ಷಗಳ ಆರೋಪ. ಇಷ್ಟೇ ಅಲ್ಲ ಅಪೂರ್ಣ ಮಂದಿರವನ್ನು ಬಿಜೆಪಿ ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಪೂರ್ಣಗೊಳ್ಳದ ದೇವಸ್ಥಾನ ಉದ್ಘಾಟನೆ ಮಾಡಲಾಗುತ್ತಿದೆ ಅನ್ನೋದು ಪ್ರಮುಖ ಆರೋಪ.
ಇದರ ನಡುವೆ ಉತ್ತರ ಪ್ರದೇಶದ ಕಾಂಗ್ರೆಸ್ಸಿಗರು ಸಂಕ್ರಾಂತಿಯಂದು ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಪುಣ್ಯಸ್ನಾನ ಮಾಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಆದರೆ ಇದೇ ಕಾಂಗ್ರೆಸ್ಸಿಗನ ಅಧಿನಾಯಕಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಕೊಟ್ಟರೂ ಬರುತ್ತಿಲ್ಲ ಎನ್ನುವುದು ವಾಸ್ತವ. ಇಂತಹ ಕಾಂಗ್ರೆಸ್ಸಿಗರು ಈಗ ರಾಮಧ್ವಜ ಹಿಡಿದು ಅಯೋಧ್ಯೆಗೆ ಎಂಟ್ರಿ ಕೊಟ್ಟಿದ್ದನ್ನು ಸ್ಥಳೀಯರೇ ವಿರೋಧಿಸಿದ್ದಾರೆ.
ರಾಮಲಲ್ಲಾ ದರ್ಶನಕ್ಕೆ ಬನ್ನಿ, ದರ್ಶನ ಪಡೆಯಿರಿ. ರಾಜಕೀಯ ಪಕ್ಷಗಳ ಧ್ವಜಗಳಿಗೆ ನೋ ಎಂಟ್ರಿ ಎಂದಿದ್ದಾರೆ. ಯಾವ ಪಕ್ಷಗಳ ಧ್ವಜಗಳಿಗೂ ಅಯೋಧ್ಯೆಯಲ್ಲಿ ಪ್ರವೇಶ ಇಲ್ಲ. ದೇವಸ್ಥಾನಗಳ ಆವರಣದಲ್ಲಿ ಇರುವಂತಿಲ್ಲ ಎನ್ನುವುದು ಸ್ಥಳೀಯರ ವಾದ. ಇದರೊಂದಿಗೆ ಆಯೋಧ್ಯೆ ಅರ್ಚಕ, ಸರಯೂ ಮಹಾ ಆರತಿ ಅಧ್ಯಕ್ಷ ಮಹಾಂತ ದಾಸ್ ಮಹರಾಜ್ ಕೂಡಾ ಕಾಂಗ್ರೆಸ್ಸಿಗರ ರಾಜಕೀಯ ವಿವಾದವನ್ನು ಕೆಣಕಿ ಟೀಕಿಸಿದ್ಧಾರೆ.
ಸೋಮನಾಥ ಮಂದಿರವನ್ನು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ನವೀಕರಣ ಮಾಡಿದ್ದರು. ಸೋಮನಾಥ ದೇವಸ್ಥಾನದ ಪ್ರಾಣಪ್ರತಿಷ್ಠ ವೇಳೆ ಗರ್ಭಗುಡಿ, ಶಿಖರ್ ಯಾವುದೂ ಪೂರ್ಣಗೊಂಡಿರಲಿಲ್ಲ ಎಂದಿರುವ ಮಹಾಂತ ದಾಸ್ ಮಹರಾಜ್ ಜನರು ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ. ಪ್ರಾಣಪ್ರತಿಷ್ಠೆ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ರಾಮ ಮಂದಿರದ ಗರ್ಭಗುಡಿ, ಶಿಖರ ಸಂಪೂರ್ಣ ನಿರ್ಮಾಣಗೊಂಡಿದೆ. ರಾಮ ಮಂದಿರದ ನೆಲಮಹಡಿ ಸಂಪೂರ್ಣ ಪೂರ್ಣಗೊಂಡಿದೆ. ಮೂರ್ತಿ ಪ್ರಾಣಪ್ರತಿಷ್ಠೆಗೆ ಗರ್ಭಗುಡಿ ಹಾಗೂ ಗರ್ಭಗುಡಿ ಶಿಖರ್ ಪ್ರಮುಖ. ಈ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ ಎಂದಿದ್ದಾರೆ.
ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಕರಸೇವಕರು, ಸಾಧು ಸಂತರು, ಅಸಂಖ್ಯಾತ ರಾಮ ಭಕ್ತರ ಕೊಡುಗೆ ಅಪಾರ. ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ, ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದು ಮಹಾಂತ ದಾಸ್ ಮಹರಾಜ್ ಹೇಳಿದ್ದಾರೆ. ಅಪೂರ್ಣ ಮಂದಿರ ಇದಲ್ಲ, ಪ್ರಾಣಪ್ರತಿಷ್ಠೆಗೆ ಗರ್ಭಗಡಿ ಮುಖ್ಯ ಎಂದಿದ್ದಾರೆ. ವಿಪಕ್ಷ ಸೇರಿದಂತೆ ಶಂಕರಾಚಾರ್ಯ ಪೀಠದ ಸ್ವಾಮೀಜಿಗಳು ಅಪೂರ್ಣ ಮಂದಿರ ಆರೋಪ ಬಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದೇ ವಿಚಾರವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹಿಡಿದು ಬಿಜೆಪಿಯನ್ನು ತೀವ್ರವಾಗಿ ವಿರೋಧಿಸಿದೆ. ಇತ್ತೀಚೆಗೆ ಪುರಿ ಮತ್ತು ಜೋಶಿ ಮಠದ ಸ್ವಾಮೀಜಿಗಳ ವಾದವನ್ನು ತಳ್ಳಿ ಹಾಕಿರು ಶೃಂಗೇರಿ ಪೀಠ ಹಾಗೂ ಕಂಚಿ ಪೀಠಗಳು ವಿವಾದಕ್ಕೆ ಅಂತ್ಯ ಹಾಡಿವೆ.



