ಸ್ಥಳೀಯ ಸಂಸ್ಥೆಗಳ ಚುನಾವಣೆಗಿಲ್ಲ ಮೈತ್ರಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿರುವುದು ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿರುವುದರ ಹಿಂದೆ ಬೇರೆ ಭಿನ್ನಮತದ ರಾಗ ಇದೆ ಎಂದು ಹಲವರು ಹೇಳುತ್ತಿದ್ದರೆ, ದೇವೇಗೌಡರ ತಂತ್ರ ನೋಡಿದ ಚುನಾವಣಾ ತಂತ್ರಜ್ಞರು ಬೆರಗಾಗಿದ್ದಾರೆ. ವಿಜಯೇಂದ್ರ ಅವರಿಗೆ ಮೈತ್ರ ಇಷ್ಟ ಇಲ್ಲ ಎನ್ನುವುದು ರಹಸ್ಯವೇನಲ್ಲ. ಆದರೆ, ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಧೈರ್ಯ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರಿಗೆ ಇಲ್ಲ. ಹೀಗಿದ್ದರೂ, ಇಂತಹ ಹೇಳಿಕೆ ನೀಡಿದ್ದು ಏಕೆ ಎಂದರೆ.. ಅದು ಭಿನ್ನಮತ ಅಲ್ಲ, ತಂತ್ರ ಎಂಬ ತರ್ಕವೂ ಆಚೆ ಬಂದಿದೆ.
4 ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅಧಿಕಾರ ಹಿಡಿದ ಕೂಡಲೇ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಲೆಕ್ಕಾಚಾರಕ್ಕೆ ಇಳಿದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಇದು, 2028ರ ವಿಧಾನಸಭೆ ವೇಳೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಮುರಿದು ಬೀಳುತ್ತಾ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ. ಆದರೆ, ವಿಜಯೇಂದ್ರ ಹೇಳಿಕೆ ಬಗ್ಗೆ ಜಾಣತನದಿಂದ ಪ್ರತಿಕ್ರಿಯಿರುವ ದೇವೇಗೌಡರು, ಆ ಬಗ್ಗೆ ಪ್ರಶ್ನೆ ಮಾಡಲು ಹೋಗುವುದಿಲ್ಲ ಎಂದಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ರಚನೆಯಾಗಿದ್ದರೂ ಅದಕ್ಕೆ ಬಿಜೆಪಿ ರಾಜ್ಯ ನಾಯಕರ ಸಂಪೂರ್ಣ ಸಹಮತ ಸಿಕ್ಕಿಲ್ಲ ಎಂಬುದು ನಂತರದ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. ವರಿಷ್ಠರ ಕಟ್ಟಪ್ಪಣೆಗೆ ಮಣಿದ ನಾಯಕರು, ನಾವು ಜೊತೆಗಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ರೂಪಿಸುವಲ್ಲಿ ಈ ಮೈತ್ರಿ ಸಫಲವಾಗಿಲ್ಲ. ಆಗೊಮ್ಮೆ ಈಗೊಮ್ಮೆ ಸಭೆ ನಡೆದರೂ ಅದು ಟೀ-ಕಾಫಿಗಷ್ಟೇ ಸೀಮಿತವಾಗಿದೆ ಎಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಹಲವು ಬಾರಿ ಚರ್ಚೆಗಳಾಗಿವೆ.
ತಂತ್ರಗಾರಿಕೆ ಹೇಗೆ..?
ರಾಜ್ಯ ಮಟ್ಟ, ರಾಷ್ಟ್ರ ಮಟ್ಟದ ತಂತ್ರಗಾರಿಕೆಯೇ ಬೇರೆ. ಸ್ಥಳೀಯ ಮಟ್ಟದಲ್ಲಿ ನಡೆಯುವ ತಂತ್ರಗಾರಿಕೆಯೇ ಬೇರೆ. ಜಿಲ್ಲೆ, ಪಟ್ಟಣ, ತಾಲೂಕು, ನಗರ ಹಾಗೂ ಪುರಸಭೆಗಳಲ್ಲಿ ಪಕ್ಷದ ಚಿಹ್ನೆಗಿಂತಲೂ ಹೆಚ್ಚಾಗಿ, ಸ್ಥಳೀಯ ನಾಯಕರ ಜನಪ್ರಿಯತೆಯೇ ಮಾನದಂಡವಾಗುತ್ತದೆ. ಇವತ್ತಿಗೂ ಜೆಡಿಎಸ್ ಪ್ರಾಬಲ್ಯ ಹಿಡಿದಿಟ್ಟಿರುವುದೇ ಮೈಸೂರು ಭಾಗದಲ್ಲಿನ ಜೆಡಿಎಸ್ ಸ್ಥಳೀಯ ನಾಯಕರೇ. ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇದ್ದರೆ, ಉಳಿದ ಕಡೆ ಬಿಜೆಪಿ ಪ್ರಾಬಲ್ಯ ಇದೆ. ಹೀಗಿರುವಾಗ ಅಲ್ಲಿಯೂ ಮೈತ್ರಿ ಆಗಿಬಿಟ್ಟರೆ, ಬಹುತೇಕ ಸ್ಥಳೀಯ ನಾಯಕರು ಪಕ್ಷ ತೊರೆಯುವ ಆತಂಕ ಇರುತ್ತದೆ.
ಲೋಕಲ್ ಲೀಡರ್ಸ್ ಪಕ್ಷವನ್ನು ಬಿಟ್ಟರೆ, ಸಂಘಟನೆಗೆ ಸಮಸ್ಯೆ. ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ನಿಂತು ಕಾದಬೇಕಾಗಿರುವ ಸೈನಿಕರನ್ನೇ ಕಳೆದುಕೊಂಡರೆ.. ಮುಂದಿನ ಯುದ್ಧ ಕಷ್ಟ ಎಂಬ ಲೆಕ್ಕಾಚಾರ ಹಾಕಿದ್ದಾರೆ ದೇವೇಗೌಡ ಮತ್ತು ವಿಜಯೇಂದ್ರ.
ಇದರಿಂದ ದೊಡ್ಡ ಲಾಭ ಇರುವುದು ದೇವೇಗೌಡರಿಗೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಇಷ್ಟವಿಲ್ಲದೆ ಬೇರೆ ಕಡೆ ಹೋಗಿ, 2027-28ರ ಮೈತ್ರಿಗೆ ಸಮಸ್ಯೆಯಾಗುವುದು ಬೇಡ. ಗ್ರೌಂಡ್ ರಿಪೋರ್ಟ್ ನೋಡಿಕೊಂಡು ಬಿಡೋಣ ಎಂದೇ ಅಖಾಡಕ್ಕೆ ಇಳಿದಿದ್ದಾರೆ ದೇವೇಗೌಡ ಮತ್ತು ವಿಜಯೇಂದ್ರ. ಇದರ ಜೊತೆ ಲೋಕಲ್ ಲೀಡರ್ಸ್ ಸಂಘಟನೆ, ಸಾಮರ್ಥ್ಯವೂ ಬಹಿರಂಗವಾಗಲಿದೆ ಎಂಬ ನಿರೀಕ್ಷೆಯೂ ಇದೆ.



